ನಟ ಆಯುಷ್ಮಾನ್ ಖುರಾನಾ (Ayushmann Khurrana) ಅವರು ಪ್ರತಿ ಬಾರಿಯೂ ವಿಶೇಷವಾದ ಕಥಾವಸ್ತು ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಕಾರಣಕ್ಕೆ ಅವರಿಗೆ ಪ್ರತ್ಯೇಕವಾದ ಅಭಿಮಾನಿ ಬಳಗ ಇದೆ. ಅವರನ್ನು ಇಷ್ಟಪಡುವ ಪ್ರೇಕ್ಷಕರ ಸಂಖ್ಯೆ ದೊಡ್ಡದಿದೆ. ಅದಕ್ಕೆ ಸಾಕ್ಷಿ ಎಂಬಂತೆ ಆಯುಷ್ಮಾನ್ ಖುರಾನಾ ನಟನೆಯ ಅನೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈಗ ‘ಡ್ರೀಮ್ ಗರ್ಲ್ 2’ (Dream Girl 2) ಸಿನಿಮಾ ಕೂಡ ಜನರ ಮನ ಗೆದ್ದಿದೆ. ಬಿಡುಗಡೆಯಾಗಿ ನಾಲ್ಕು ದಿನಕ್ಕೆ ಈ ಸಿನಿಮಾ 46.13 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಆಯುಷ್ಮಾನ್ ಖುರಾನಾ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಆಗಸ್ಟ್ ತಿಂಗಳಲ್ಲಿ ‘ಜೈಲರ್’, ‘ಗದರ್ 2’, ‘ಒಎಂಜಿ 2’ ಮುಂತಾದ ಸಿನಿಮಾಗಳ ಪೈಪೋಟಿ ಜೋರಾಗಿತ್ತು. ಹಾಗಿದ್ದರೂ ಕೂಡ ಈ ಸಿನಿಮಾ ಹಾಫ್ ಸೆಂಚುರಿ ಬಾರಿಸುವತ್ತ ಮುನ್ನುಗ್ಗುತ್ತಿರುವುದು ಸಮಾಧಾನಕರ ಸಂಗತಿ.
2019ರಲ್ಲಿ ‘ಡ್ರೀಮ್ ಗರ್ಲ್’ ಸಿನಿಮಾ ತೆರೆಕಂಡಿತ್ತು. ಹುಡುಗಿಯ ಧ್ವನಿಯಲ್ಲಿ ಮಾತನಾಡಿ ಎಲ್ಲರನ್ನೂ ಯಾಮಾರಿಸುವ ಯುವಕನ ಪಾತ್ರದಲ್ಲಿ ಆಯುಷ್ಮಾನ್ ಖುರಾನಾ ಅವರು ಕಾಣಿಸಿಕೊಂಡಿದ್ದರು. ಅದೇ ರೀತಿಯ ಮತ್ತೊಂದು ಕಥೆಯನ್ನು ಇಟ್ಟುಕೊಂಡು ‘ಡ್ರೀಮ್ ಗರ್ಲ್ 2’ ಸಿನಿಮಾ ಮೂಡಿಬಂದಿದೆ. ಈ ಬಾರಿ ಕೂಡ ಆಯುಷ್ಮಾನ್ ಖುರಾನಾ ಅವರ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಚಿತ್ರಕ್ಕೆ ವಿಮರ್ಶಕರಿಂದಲೂ ಮೆಚ್ಚುಗೆ ಸಿಕ್ಕಿದೆ. ಮೊದಲ ವೀಕೆಂಡ್ನಲ್ಲಿ ಈ ಸಿನಿಮಾಗೆ ಉತ್ತಮ ಕಲೆಕ್ಷನ್ ಆಗಿದೆ.
#DreamGirl2 posts a HEALTHY TOTAL on the make-or-break Mon [reduced ticket rates on weekdays]… Major centres continue to drive its biz… Should cross the HALF-CENTURY mark today [Tue; Day 5]… Fri 10.69 cr, Sat 14.02 cr, Sun 16 cr, Mon 5.42 cr. Total: ₹ 46.13 cr. #India biz.… pic.twitter.com/aUvF2wSwTl
— taran adarsh (@taran_adarsh) August 29, 2023
ಆಗಸ್ಟ್ 25ರಂದು ‘ಡ್ರೀಮ್ ಗರ್ಲ್ 2’ ಸಿನಿಮಾ ಬಿಡುಗಡೆ ಆಯಿತು. ಮೊದಲ ದಿನ ಈ ಚಿತ್ರ 10.69 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಶನಿವಾರ 14.02 ಕೋಟಿ ರೂಪಾಯಿ ಕಮಾಯಿ ಆಯಿತು. 3ನೇ ದಿನವಾದ ಭಾನುವಾರ 16 ಕೋಟಿ ರೂಪಾಯಿ ಆದಾಯ ಹರಿದು ಬಂತು. ಆದರೆ ಸೋಮವಾರ ಗಣನೀಯವಾಗಿ ಕಲೆಕ್ಷನ್ ಕುಸಿದಿದೆ. ಸೋಮವಾರ ಕೇವಲ 5.42 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಮುಂದಿನ ದಿನಗಳಲ್ಲಿ ಈ ಚಿತ್ರದ ಹವಾ ಕಡಿಮೆ ಆಗುವ ಸಾಧ್ಯತೆ ಇದೆ. ಹಾಗಂತ ಚಿತ್ರತಂಡದವರು ನಿರಾಶರಾಗುವ ಅವಶ್ಯಕತೆ ಇಲ್ಲ. ಬುಧವಾರ (ಆಗಸ್ಟ್ 30) ರಕ್ಷಾ ಬಂಧನ ಹಬ್ಬ ಇರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ ಇದೆ.
ಇದನ್ನೂ ಓದಿ: ‘ಗದರ್ 2’ ಘರ್ಜನೆಗೆ ‘ಕೆಜಿಎಫ್ 2’ ಚಿತ್ರದ ದಾಖಲೆ ಉಡೀಸ್; ಎಷ್ಟಾಯಿತು ಒಟ್ಟು ಕಲೆಕ್ಷನ್?
ರಾಜ್ ಶಾಂಡಿಲ್ಯ ಅವರು ‘ಡ್ರೀಮ್ ಗರ್ಲ್ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಆಯುಷ್ಮಾನ್ ಖುರಾನಾಗೆ ಜೋಡಿಯಾಗಿ ಅನನ್ಯ ಪಾಂಡೆ ನಟಿಸಿದ್ದಾರೆ. ಪರೇಶ್ ರಾವಲ್, ಅನ್ನು ಕಪೂರ್, ರಾಜ್ಪಾಲ್ ಯಾದವ್, ವಿಜಯ್ ರಾಜ್, ಅಭಿಷೇಕ್ ಬ್ಯಾನರ್ಜಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದು, ಭರಪೂರ ನಗು ಉಕ್ಕಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.