ಹೆಂಡತಿಯನ್ನು ಆಸ್ಪತ್ರೆಯಿಂದ ಕರೆತಂದ ನಿರ್ದೇಶಕನಿಗೆ ಶಾಕ್​; ಆಸ್ಪತ್ರೆ ಬಿಲ್​ ಬರೋಬ್ಬರಿ 30 ಲಕ್ಷ ರೂಪಾಯಿ

| Updated By: ರಾಜೇಶ್ ದುಗ್ಗುಮನೆ

Updated on: Nov 19, 2021 | 5:09 PM

ಸುಭಾಷ್​ ಅವರು 1982ರಲ್ಲಿ ಕಂಪನಿ ಒಂದನ್ನು ಸ್ಥಾಪಿಸಿದ್ದರು. ಈ ಕಂಪನಿ ಒಳ್ಳೆಯ ಲಾಭದಲ್ಲಿತ್ತು. ಆದರೆ, ಕೊವಿಡ್​ ಕಾಣಿಸಿಕೊಂಡ ನಂತರ ಸಮಸ್ಯೆ ಬಿಗಡಾಯಿಸಿತ್ತು. ಕಂಪನಿ ನಷ್ಟ ಅನುಭವಿಸೋಕೆ ಶುರುವಾಗಿತ್ತು.

ಹೆಂಡತಿಯನ್ನು ಆಸ್ಪತ್ರೆಯಿಂದ ಕರೆತಂದ ನಿರ್ದೇಶಕನಿಗೆ ಶಾಕ್​; ಆಸ್ಪತ್ರೆ ಬಿಲ್​ ಬರೋಬ್ಬರಿ 30 ಲಕ್ಷ ರೂಪಾಯಿ
ಬಿ. ಸುಭಾಷ್
Follow us on

ಮಿಥುನ್​ ಚಕ್ರವರ್ತಿ ( Mithun Chakraborty) ನಟನೆಯ ‘ಡಿಸ್ಕೋ ಡ್ಯಾನ್ಸರ್​’ (Disco Dancer) ಸಿನಿಮಾ ಹಿಟ್​ ಆಗಿತ್ತು. 1982ರಲ್ಲಿ ತೆರೆಗೆ ಬಂದ ಈ ಸಿನಿಮಾ ಅವರ ವೃತ್ತಿ ಬದುಕಿನ ಪ್ರಮುಖ ಸಿನಿಮಾಗಳಲ್ಲಿ ಒಂದಾಗಿದೆ. ಈ ಚಿತ್ರವನ್ನು ಬಿ. ಸುಭಾಷ್ (Babbar Subhash)​ ನಿರ್ದೇಶನ ಮಾಡಿದ್ದರು. ಅವರಿಗೆ ಈಗ 77 ವರ್ಷ ವಯಸ್ಸು. ಅವರಿಗೆ ಈಗ ಸಂಕಷ್ಟ ಒಂದು ಎದುರಾಗಿದೆ. ಸುಭಾಷ್​ ಅವರು ಪತ್ನಿ ತಿಲೋತ್ತಮಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಅವರನ್ನು ಮನೆಗೆ ಕರೆತರಲಾಗಿದೆ. ಶಾಕಿಂಗ್​ ವಿಚಾರ ಎಂದರೆ ಆಸ್ಪತ್ರೆಯವರು 30 ಲಕ್ಷ ರೂಪಾಯಿ ಬಿಲ್​ ವಿಧಿಸಿದ್ದಾರೆ. ಇದಕ್ಕೆ ಸಹಾಯ ಮಾಡುವಂತೆ ಅವರು ಬಾಲಿವುಡ್​ ಮಂದಿಯ ಸಹಾಯ ಕೇಳಿದ್ದಾರೆ. ಕೆಲವರು ಸಹಾಯಕ್ಕೆ ಮುಂದೆ ಬಂದಿದ್ದಾರೆ.

ಸುಭಾಷ್​ ಅವರು 1982ರಲ್ಲಿ ಕಂಪನಿ ಒಂದನ್ನು ಸ್ಥಾಪಿಸಿದ್ದರು. ಈ ಕಂಪನಿ ಒಳ್ಳೆಯ ಲಾಭದಲ್ಲಿತ್ತು. ಆದರೆ, ಕೊವಿಡ್​ ಕಾಣಿಸಿಕೊಂಡ ನಂತರ ಸಮಸ್ಯೆ ಬಿಗಡಾಯಿಸಿತ್ತು. ಕಂಪನಿ ನಷ್ಟ ಅನುಭವಿಸೋಕೆ ಶುರುವಾಗಿತ್ತು. ಇದರ ಜತೆಗೆ ಅವರ ಪತ್ನಿಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡೋಕೆ ಶುರುವಾದವು. ಮುಂಬೈನ ಪ್ರತಿಷ್ಠಿತ ಆಸ್ಪತ್ರೆ ಕೋಕಿಲಬೇನ್​ ಧಿರೂಬಾಯ್​ ಅಂಬಾನಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು.

‘ತಿಲೋತ್ತಮಾಳ ಎರಡೂ ಕಿಡ್ನಿ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಕೋಕಿಲಾಬೇನ್​ ಆಸ್ಪತ್ರೆಗೆ ಕಿಡ್ನಿ ಟ್ರಾನ್ಸ್​ಪ್ಲಾಂಟ್​ ಮಾಡೋಕೆ ತೆರಳಿದ್ದೆವು. ನನ್ನ ಒಂದು ಕಿಡ್ನಿಯನ್ನು ಆಕೆಗೆ ನೀಡಬೇಕು ಎಂದುಕೊಂಡಿದ್ದೆ. ಆದರೆ, ಆಕೆಗೆ ಶ್ವಾಸಕೋಶದ ಸಮಸ್ಯೆ ಕೂಡ ಇರುವುದು ಗೊತ್ತಾಗಿತ್ತು. ಈ ಸಂದರ್ಭದಲ್ಲಿ ಕಿಡ್ನಿ ಟ್ರಾನ್ಸ್​ಪ್ಲಾಂಟ್​ ಮಾಡಿದರೆ ಸಮಸ್ಯೆ ಆಗುತ್ತದೆ ಎಂದು ವೈದ್ಯರು ಹೇಳಿದ್ದರು’ ಎಂದಿದ್ದಾರೆ ಸುಭಾಷ್​.

‘ಸೆಪ್ಟೆಂಬರ್​ ತಿಂಗಳಲ್ಲಿ ತಿಲೋತ್ತಮಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮತ್ತೆ ಅವರು ಮರಳಿ ಮನೆಗೆ ಬಂದರು. ಆದರೆ ಆರೋಗ್ಯ ಸುಧಾರಿಸದ ಕಾರಣಕ್ಕೆ ಮತ್ತೆ ಆಸ್ಪತ್ರೆಯಲ್ಲಿ ಅಡ್ಮಿಟ್​ ಆದರು. ಮೂರು ದಿನಗಳ ಹಿಂದೆ ಆಕೆ ಮನೆಗೆ ಬಂದಿದ್ದಾಳೆ. ಈ ಅವಧಿಯಲ್ಲಿ ಚಿಕಿತ್ಸೆಗೆ 30 ಲಕ್ಷ ರೂಪಾಯಿ ಬಿಲ್​ ಆಗಿದೆ. ನಾವು ಹಣ ಹೊಂದಿಸೋಕೆ ಕಷ್ಟಪಡುತ್ತಿದ್ದಾರೆ’ ಎಂದಿದ್ದಾರೆ ಅವರು.

ಐದು ವರ್ಷದ ಹಿಂದೆ ತಿಲೋತ್ತಮಾ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಸಲ್ಮಾನ್​ ಖಾನ್​ ಆಸ್ಪತ್ರೆಯ ಖರ್ಚನ್ನು ನೋಡಿಕೊಂಡಿದ್ದರು. ಈಗ ಅವರ ಬಳಿ ಮತ್ತೆ ಹಣ ಕೇಳೋಕೆ ಅವರಿಗೆ ಮುಜುಗರ ಆಗುತ್ತಿದೆ.   ಈಗ ಸುಭಾಷ್​ ಸಹಾಯಕ್ಕೆ ಬಾಲಿವುಡ್​ ಮಂದಿ ಮುಂದೆ ಬಂದಿದ್ದಾರೆ. ಜೂಹಿ ಚಾವ್ಲಾ, ರತನ್​ ಜೈನ್​, ಅನಿಲ್​ ಕಪೂರ್​, ಮಿತುನ್​ ಚಕ್ರವರ್ತಿ ಸಹಾಯಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ಅನುಷ್ಕಾ ಶರ್ಮಾಗೆ ಮೈಸೂರು ಜೋಡಿಯಿಂದ ಕನ್ನಡದಲ್ಲೇ ಮದುವೆ ಕರೆಯೋಲೆ; ಸಂತಸ ಪಟ್ಟ ನಟಿ