2015ರಲ್ಲಿ ತೆರೆಕಂಡು ‘ಬಜರಂಗಿ ಭಾಯಿಜಾನ್’ (Bajrangi Bhaijaan Movie) ಸಿನಿಮಾ ಸೂಪರ್ ಹಿಟ್ ಆಗಿತ್ತು. ಕಬೀರ್ ಖಾನ್ ನಿರ್ದೇಶಿಸಿದ್ದ ಆ ಚಿತ್ರದಲ್ಲಿ ಸಲ್ಮಾನ್ ಖಾನ್ (Salman Khan) ಅವರು ಡಿಫರೆಂಟ್ ಪಾತ್ರ ಮಾಡಿದ್ದರು. ಅವರ ಜೊತೆ ಬಾಲನಟಿ ಹರ್ಷಾಲಿ ಮಲ್ಹೋತ್ರಾ (Harshaali Malhotra) ಗಮನ ಸೆಳೆದಿದ್ದಳು. ‘ಬಜರಂಗಿ ಭಾಯಿಜಾನ್’ ಸಿನಿಮಾ ತೆರಕಂಡಾಗ ಹರ್ಷಾಲಿಗೆ ಕೇವಲ 7 ವರ್ಷ ವಯಸ್ಸು. ಈಗ ಆಕೆಗೆ 13ರ ಪ್ರಾಯ. ಈಗ ಹರ್ಷಾಲಿಯನ್ನು ನೆನಪಿಸಿಕೊಳ್ಳಲು ಒಂದು ಕಾರಣ ಇದೆ. ಈ ಬಾಲನಟಿಗೆ ‘ಭಾರತ ರತ್ನ ಡಾ. ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ’ (Bharat Ratna Dr Ambedkar National Award) ಸಿಕ್ಕಿದೆ. ‘ಬಜರಂಗಿ ಭಾಯಿಜಾನ್’ ಸಿನಿಮಾದಲ್ಲಿನ ನಟನೆಗಾಗಿ ಈ ಗೌರವ ಸಂದಿದೆ. ಟ್ರೋಫಿ ಹಿಡಿದು ಖುಷಿಯಿಂದ ಪೋಸ್ ನೀಡಿರುವ ಹರ್ಷಾಲಿಯ ಫೋಟೋಗಳು ವೈರಲ್ ಆಗಿವೆ. ಆಕೆಗೆ ಎಲ್ಲರೂ ಶುಭಕೋರುತ್ತಿದ್ದಾರೆ.
‘ಬಜರಂಗಿ ಭಾಯಿಜಾನ್’ ಸಿನಿಮಾದಿಂದ ಹರ್ಷಾಲಿಗೆ ಸಖತ್ ಜನಪ್ರಿಯತೆ ಸಿಕ್ಕಿತ್ತು. ಪಾಕಿಸ್ತಾನದಿಂದ ಬಂದು ಭಾರತದಲ್ಲಿ ಕಳೆದುಹೋಗುವ ಮುನ್ನಿ ಎಂಬ ಮೂಕ ಹುಡುಗಿಯ ಪಾತ್ರದಲ್ಲಿ ಹರ್ಷಾಲಿ ಅಭಿನಯ ಎಲ್ಲರ ಗಮನ ಸೆಳೆದಿತ್ತು. ಆ ಚಿತ್ರದ ನಟನೆಗಾಗಿ ಈಗ ‘ಭಾರತ ರತ್ನ ಡಾ. ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ’ ಸಿಕ್ಕಿರುವುದು ಆಕೆಯ ಸಂಭ್ರಮಕ್ಕೆ ಕಾರಣ ಆಗಿದೆ. ಮಹಾರಾಷ್ಟ್ರ ರಾಜ್ಯಪಾಲರಾದ ಭಗತ್ ಸಿಂಗ್ ಕೋಶಿಯಾರಿ ಅವರಿಂದ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಅಪ್ಲೋಡ್ ಮಾಡುವ ಮೂಲಕ ಅವಾರ್ಡ್ ಪಡೆದ ಖುಷಿಯನ್ನು ಹರ್ಷಾಲಿ ಎಲ್ಲರ ಜೊತೆ ಹಂಚಿಕೊಂಡಿದ್ದಾಳೆ. ‘ನನ್ನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಸಲ್ಮಾನ್ ಖಾನ್, ಕಬೀರ್ ಖಾನ್, ಕಾಸ್ಟಿಂಗ್ ನಿರ್ದೇಶಕ ಮುಕೇಶ್ ಛಾಬ್ರಾ ಅಂಕಲ್ಹಾಗೂ ಇಡೀ ಬಜರಂಗಿ ಭಾಯಿಜಾನ್ ತಂಡಕ್ಕೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ’ ಎಂದು ಹರ್ಷಾಲಿ ಬರೆದುಕೊಂಡಿದ್ದಾಳೆ. ಪ್ರಶಸ್ತಿ ಪಡೆದಿರುವ ಹರ್ಷಾಲಿಗೆ ಎಲ್ಲರೂ ಶುಭಕೋರುತ್ತಿದ್ದಾರೆ.
‘ಬಜರಂಗಿ ಭಾಯಿಜಾನ್’ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗಲಿದೆ ಎಂದು ಕೆಲವೇ ದಿನಗಳ ಹಿಂದೆ ಸಲ್ಮಾನ್ ಖಾನ್ ಘೋಷಿಸಿದ್ದರು. ಅದಕ್ಕೆ ‘ಪವನ ಪುತ್ರ ಭಾಯಿಜಾನ್’ ಎಂದು ಶೀರ್ಷಿಕೆ ಇಡಲಾಗಿದೆ. ವಿಜಯೇಂದ್ರ ಪ್ರಸಾದ್ ಅವರು ಕಥೆ, ಚಿತ್ರಕಥೆ ಸಿದ್ಧಪಡಿಸಿದ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳಲಿದೆ. ಸಲ್ಮಾನ್ ಖಾನ್ ಹುಟ್ಟುಹಬ್ಬದ ದಿನ ಈ ಸಿನಿಮಾ ಟೈಟಲ್ ಬಹಿರಂಗ ಆಗಿತ್ತು. ‘ಪವನ ಪುತ್ರ ಭಾಯಿಜಾನ್’ ಸಿನಿಮಾದ ಶೂಟಿಂಗ್ ಆರಂಭ ಆಗಲು ಇನ್ನೂ ಸಾಕಷ್ಟು ಸಮಯ ಹಿಡಿಯಲಿದೆ.
ಇದನ್ನೂ ಓದಿ:
‘ಬಜರಂಗಿ ಭಾಯಿಜಾನ್ 2’ ಸಿನಿಮಾ ಘೋಷಣೆ ಮಾಡಿದ ಸಲ್ಮಾನ್ ಖಾನ್; ಈ ಬಾರಿ ರಾಜಮೌಳಿ ನಿರ್ದೇಶನ?
ರಾಜಮೌಳಿ ರಿಜೆಕ್ಟ್ ಮಾಡಿದ್ದ ಸಲ್ಮಾನ್ ಖಾನ್ ಸಿನಿಮಾ ಸೂಪರ್ ಹಿಟ್; ವಿಜಯೇಂದ್ರ ಪ್ರಸಾದ್ ಪಶ್ಚಾತ್ತಾಪ