ಸಲ್ಮಾನ್ ಖಾನ್ ಫಾರ್ಮ್​ ಹೌಸ್ ಒಳಗೆ ಪಾರ್ಟಿ ಹೇಗೆ ನಡೆಯುತ್ತೆ? ವಿವರಿಸಿದ ನಟಿ

ನಟ ಸಲ್ಮಾನ್ ಖಾನ್ ಅವರ ಫಾರ್ಮ್ ಹೌಸ್​​ ಒಳಗೆ ಆಗಾಗ ಪಾರ್ಟಿ ನಡೆಯುತ್ತದೆ. ಅದರ ಬಗ್ಗೆ ಜನರಿಗೆ ಕುತೂಹಲ ಇದೆ. ಸಲ್ಮಾನ್ ಖಾನ್ ಜೊತೆ ಆಪ್ತವಾಗಿರುವ ಖ್ಯಾತ ನಟಿ ಶೆಹನಾಜ್ ಗಿಲ್ ಅವರು ಒಮ್ಮೆ ಆ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಅಲ್ಲಿ ಏನೆಲ್ಲ ನಡೆಯುತ್ತದೆ? ಸಲ್ಮಾನ್ ಖಾನ್ ಅವರು ಹೇಗೆ ಇರುತ್ತಾರೆ ಎಂಬ ಬಗ್ಗೆ ಶೆಹನಾಜ್ ಗಿಲ್ ಮಾತನಾಡಿದ್ದಾರೆ.

ಸಲ್ಮಾನ್ ಖಾನ್ ಫಾರ್ಮ್​ ಹೌಸ್ ಒಳಗೆ ಪಾರ್ಟಿ ಹೇಗೆ ನಡೆಯುತ್ತೆ? ವಿವರಿಸಿದ ನಟಿ
Salman Khan, Shehnaz Gill

Updated on: Nov 11, 2025 | 6:01 PM

ನಟಿ ಶೆಹನಾಜ್ ಗಿಲ್ ಅವರು ಸಲ್ಮಾನ್ ಖಾನ್ (Salman Khan) ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಹಿಂದಿ ಬಿಗ್ ಬಾಸ್ 13’ ರಿಯಾಲಿಟಿ ಶೋನಲ್ಲಿ ಅವರು ಸ್ಪರ್ಧಿಸಿದ್ದರು. ಆ ಸೀಸನ್​​ನಲ್ಲಿ ಅವರು ಬಹಳ ಸೆನ್ಸೇಷನ್ ಸೃಷ್ಟಿ ಮಾಡಿದ್ದರು. 2ನೇ ರನ್ನರ್ ಅಪ್ ಸ್ಥಾನ ಅವರಿಗೆ ಸಿಕ್ಕಿತು. ಬಳಿಕ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸುವ ಅವಕಾಶ ಕೂಡ ಅವರಿಗೆ ಸಿಕ್ಕಿತು. ಅಲ್ಲದೇ, ಸಲ್ಮಾನ್ ಖಾನ್ ಫಾರ್ಮ್​ ಹೌಸ್​​ನಲ್ಲಿ ನಡೆಯುವ ಪಾರ್ಟಿಯಲ್ಲಿಯೂ ಶೆಹನಾಜ್ ಗಿಲ್ (Shehnaz Gill) ಅವರು ಭಾಗಿ ಆಗಿದ್ದರು. ಅಲ್ಲಿ ಏನೆಲ್ಲ ನಡೆಯುತ್ತದೆ ಎಂಬುದನ್ನು ಅವರು ಈಗ ಹೇಳಿದ್ದಾರೆ.

ಯೂಟ್ಯೂಬರ್ ರಣ್ವೀರ್ ಅಲಹಾಬಾದಿಯಾ ಅವರು ನಡೆಸಿದ ಸಂದರ್ಶನದಲ್ಲಿ ಶೆಹನಾಜ್ ಗಿಲ್ ಅವರು ಮಾತನಾಡಿದ್ದಾರೆ. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್ ಸಿನಿಮಾ ಸಮಯದಲ್ಲಿ ನಾವೆಲ್ಲರೂ ಅವರ ಫಾರ್ಮ್​ ಹೌಸ್​​ಗೆ ಹೋಗಿದ್ದೆವು. ಒಂದೆರಡು ದಿನ ನಾವು ಅಲ್ಲಿಯೇ ಉಳಿದುಕೊಂಡಿದ್ದೆವು. ಅಲ್ಲಿ ಸಲ್ಮಾನ್ ಖಾನ್ ಅವರ ಬೈಕ್​ ಇದೆ. ಅದರಲ್ಲಿ ನಾವೆಲ್ಲ ಸುತ್ತಾಡಿದೆವು. ನಮಗೆಲ್ಲ ಸಲ್ಮಾನ್ ಖಾನ್ ಅವರು ಮರದಿಂದ ಹಣ್ಣುಗಳನ್ನು ಕಿತ್ತು ಕೊಡುತ್ತಿದ್ದರು’ ಎಂದು ಶೆಹನಾಜ್ ಗಿಲ್ ಹೇಳಿದ್ದಾರೆ.

‘ಸಲ್ಮಾನ್ ಖಾನ್ ಅವರು ಸಖತ್ ದೇಸಿ. ಒಬ್ಬ ರೈತನ ರೀತಿ ಅವರು ಫಾರ್ಮ್​ ಹೌಸ್​​ನಲ್ಲಿ ಕೆಲಸ ಮಾಡುತ್ತಾರೆ. ಅದಕ್ಕೆ ಅವರು ಪೂರ್ತಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅವರೊಳಗೆ ದೇಸಿ ಗುಣ ಬಹಳ ಇದೆ. ಯಾವಾಗಲೂ ಅವರು ಕೆಲಸದ ಬಗ್ಗೆ ಮಾತನಾಡುತ್ತಾರೆ. ಸಿನಿಮಾಗಳಲ್ಲಿನ ಸಾಹಸ ದೃಶ್ಯಗಳ ಕುರಿತು ಮಾತನಾಡುತ್ತಾರೆ. ಅದರ ಬಗ್ಗೆ ಅವರಿಗೆ ತುಂಬಾ ಜ್ಞಾನ ಇದೆ’ ಎಂದಿದ್ದಾರೆ ಶೆಹನಾಜ್ ಗಿಲ್.

2019ರಲ್ಲಿ ‘ಬಿಗ್ ಬಾಸ್ 13’ ಪ್ರಸಾರ ಆಗಿತ್ತು. ಅದರಲ್ಲಿ ಸ್ಪರ್ಧಿಸಿದ್ದ ಶೆಹನಾಜ್ ಗಿಲ್ ಬಗ್ಗೆ ಸಲ್ಮಾನ್ ಖಾನ್ ಅವರು ಬಹಳ ಕಾಳಜಿ ವಹಿಸುತ್ತಿದ್ದರು. ವಾರಂತ್ಯದ ಸಂಚಿಕೆಗಳಲ್ಲಿ ಶೆಹನಾಜ್ ಗಿಲ್ ಜೊತೆ ಅವರು ತಮಾಷೆಯ ಮಾತುಕಥೆ ನಡೆಸುತ್ತಿದ್ದರು. ಆ ಸೀಸನ್​​ನಲ್ಲಿ ಶೆಹನಾಜ್ ಗಿಲ್ ಅವರು ವಿನ್ನರ್ ಆಗಲಿಲ್ಲ. ಆದರೆ, ಸಾಕಷ್ಟು ಸೆನ್ದೇಷನ್ ಸೃಷ್ಟಿಸಿದ್ದ ಅವರಿಗೆ 2ನೇ ರನ್ನರ್​ ಅಪ್​ ಸ್ಥಾನ ಸಿಕ್ಕಿತ್ತು.

ಇದನ್ನೂ ಓದಿ: ಭಯೋತ್ಪಾದಕರ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹೆಸರು ಇಲ್ಲ: ಪಾಕಿಸ್ತಾನ ಸ್ಪಷ್ಟನೆ

ಶೆಹನಾಜ್ ಗಿಲ್ ಅವರು ಹಿಂದಿ ಮತ್ತು ಪಂಜಾಬಿ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸಿದ ಪಂಜಾಬಿ ಸಿನಿಮಾ ‘ಇಕ್ ಕುಡಿ’ ಇತ್ತೀಚೆಗೆ ಬಿಡುಗಡೆ ಆಗಿ ಮೆಚ್ಚುಗೆ ಪಡೆದಿದೆ. ಅದಕ್ಕಾಗಿ ಅವರು ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ಪಂಜಾಬಿ ಭಾಷೆಯ ಹಲವಾರು ಮ್ಯೂಸಿಕ್ ವಿಡಿಯೋಗಳಲ್ಲಿ ಅವರು ನಟಿಸಿದ್ದಾರೆ. ಈಗ ಅವರಿಗೆ 31 ವರ್ಷ ವಯಸ್ಸು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us