ನಟ ಪಂಕಜ್ ತ್ರಿಪಾಠಿ (Pankaj Tripathi) ಅವರು ಬಾಲಿವುಡ್ನ ಬಹುಬೇಡಿಕೆಯ ಕಲಾವಿದ. ಎಂಥದ್ದೇ ಪಾತ್ರ ಕೊಟ್ಟರೂ ಅದನ್ನು ಮಾಡಿ ತೋರಿಸುತ್ತಾರೆ. ಅವರು ತುಂಬಾನೇ ಕಷ್ಟ ಕಂಡು ಬಂದವರು. ಈಗ ಅವರು ತಾವು ಕಲಿತ ಸರ್ಕಾರಿ ಶಾಲೆಗೆ ಮರುಹುಟ್ಟು ನೀಡಿದ್ದಾರೆ. ಈ ವಿಚಾರವನ್ನು ಪಂಕಜ್ ಈಗ ತಿಳಿಸಿದ್ದಾರೆ. ಈ ಮೂಲಕ ಅವರು ಅನೇಕರಿಗೆ ಸ್ಫೂರ್ತಿ ತುಂಬಿದ್ದಾರೆ. ಪಂಕಜ್ ತ್ರಿಪಾಠಿ ಕಾರ್ಯಕ್ಕೆ ಅನೇಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಸೆಲೆಬ್ರಿಟಿಗಳಿಂದ ಈ ರೀತಿಯ ಕಾರ್ಯಗಳು ಮತ್ತಷ್ಟು ನಡೆಯಬೇಕು ಎಂದು ಅನೇಕರು ಅಪೇಕ್ಷಿಸಿದ್ದಾರೆ.
ಪಂಕಜ್ ತ್ರಿಪಾಠಿ ಬಿಹಾರದ ಗೋಪಾಲ್ಗಂಜ್ ಜಿಲ್ಲೆಯವರು. ಅವರದ್ದು ಕೃಷಿ ಹಿನ್ನೆಲೆಯ ಕುಟುಂಬ. ಶಿಕ್ಷಣಕ್ಕೆ ಹೆಚ್ಚು ಹಣ ಖರ್ಚು ಮಾಡುವಷ್ಟು ತಾಕತ್ತು ಕುಟುಂಬದವರಿಗೆ ಇರಲಿಲ್ಲ. ಹೀಗಾಗಿ, ಅವರು ಸರ್ಕಾರಿ ಶಾಲೆಯಲ್ಲಿ ಕಲಿತರು. ದುಸ್ಥಿತಿ ತಲುಪಿದ್ದ ಆ ಶಾಲೆಯನ್ನು ಅವರು ನವೀಕರಣ ಮಾಡಿದ್ದಾರೆ.
‘ನಮ್ಮ ಜಿಲ್ಲೆಯ ಅಧಿಕಾರಿಗಳು ಗೋಪಾಲ್ಗಂಜ್ ಗೌರವ್ ಆ್ಯಪ್ ಮಾಡಿದ್ದಾರೆ. ಇತ್ತೀಚೆಗೆ ಆನ್ಲೈನ್ನಲ್ಲೇ ಸಭೆ ಒಂದು ನಡೆಯಿತು. ಈ ಸಭೆಯಲ್ಲಿ ಆಡಳಿತ ಮಂಡಳಿಯವರು ಮಾತನಾಡಿ ಯಾರಾದರೂ ಏನಾದರೂ ಸಹಾಯ ಮಾಡಲು ಮುಂದೆ ಬರಬಹುದು ಎಂದರು. ನಾನು ಸಭೆಯಲ್ಲಿ ಇದ್ದೆ. ಇದೊಂದು ಒಳ್ಳೆಯ ಕ್ರಮ ಎಂದು ನನಗೆ ಅನಿಸಿತ್ತು’ ಎಂದಿದ್ದಾರೆ ಪಂಕಜ್ ತ್ರಿಪಾಠಿ.
‘ನಮ್ಮ ಶಾಲಾ ಶಿಕ್ಷಕರು ಬಂದು ಕಪೌಂಡ್ ಕಟ್ಟಲು ಹಣ ಬೇಕು ಎಂದಿದ್ದರು. ನಾನು ಶಾಲೆಗೆ ಭೇಟಿ ನೀಡಿದೆ. ಶಾಲೆಯ ಸ್ಥಿತಿ ಕೆಟ್ಟದಾಗಿ ಇತ್ತು. ಕೆಲವು ಕಡೆಗಳಲ್ಲಿ ಗೋಡೆಗಳು ಕಿತ್ತು ಹೋಗಿದ್ದವು. ಬಣ್ಣ ಮಾಸಿತ್ತು. ಶಾಲೆಯಲ್ಲಿ ಲೈಟ್ಗಳು ಇರಲಿಲ್ಲ. ತಮ್ಮ ತಂದೆ-ತಾಯಿ ಹೆಸರಲ್ಲಿ ನಾನು ಆರಂಭಿಸಿದ ಟ್ರಸ್ಟ್ ಮೂಲಕ ಇಡೀ ಶಾಲೆಯನ್ನು ಮರು ನವೀಕರಣ ಮಾಡಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Pankaj Tripathi: ಸೌತ್ ಸಿನಿಮಾ ಒಪ್ಪಿಕೊಳ್ಳದೇ ಇರಲು ಬಹಿರಂಗ ವೇದಿಕೆಯಲ್ಲಿ ಕಾರಣ ತಿಳಿಸಿದ ಪಂಕಜ್ ತ್ರಿಪಾಠಿ
‘ಶಾಲೆಯ ಕಟ್ಟಡ ಚೆನ್ನಾಗಿದ್ದರೆ ಮಕ್ಕಳಿಗೂ ಶಿಕ್ಷಣ ಪಡೆಯಬೇಕು ಅನ್ನಿಸುತ್ತದೆ. ಮಕ್ಕಳಿಗೆ ಸ್ಫೂರ್ತಿ ತುಂಬಬೇಕು ಅನ್ನೋದು ನನ್ನ ಉದ್ದೇಶ ಆಗಿತ್ತು’ ಎಂದಿದ್ದಾರೆ ಪಂಕಜ್. ಇನ್ನು ಪಂಕಜ್ ತ್ರಿಪಾಠಿ ಪ್ರಚಾರ ಮಾಡುವ ಪೇಂಟ್ ಬ್ರ್ಯಾಂಡ್ ಒಂದು ಶಾಲೆಗೆ ಉಚಿತವಾಗಿ ಬಣ್ಣ ಬಳಿದು ಕೊಟ್ಟಿದೆ ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ