AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ಬಾಲಿವುಡ್ ನಟ ಸತೀಶ್ ಶಾ ನಿಧನ

Satish Shah: ‘ಮೇ ಹೂ ನಾ’, ‘ಜಾನೆ ಬಿ ದೋ ಯಾರೋ’, ‘ಹಮ್ ಆಪ್ಕೆ ಹೈ ಕೋನ್’ ಸೇರಿದಂತೆ ಹಲವಾರು ಹಿಂದಿ ಸಿನಿಮಾಗಳಲ್ಲಿ, ‘ಸಾರಾಭಾಯ್ vs ಸಾರಾಭಾಯ್’ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿರುವ ಖ್ಯಾತ ಹಾಸ್ಯ ನಟ, ಪೋಷಕ ನಟ ಸತೀಶ್ ಶಾ ನಿಧನ ಹೊಂದಿದ್ದಾರೆ.

ಖ್ಯಾತ ಬಾಲಿವುಡ್ ನಟ ಸತೀಶ್ ಶಾ ನಿಧನ
Satish Shah
ಮಂಜುನಾಥ ಸಿ.
|

Updated on: Oct 25, 2025 | 6:19 PM

Share

ಇತ್ತೀಚೆಗಷ್ಟೆ ಹಿಂದಿ ಚಿತ್ರರಂಗ (Bollywood) ಮತ್ತು ಟಿವಿ ಲೋಕದ ಜನಪ್ರಿಯ ನಟ ಪಂಕಜ್ ಧೀರ್ ನಿಧನ ಹೊಂದಿದರು. ಅದರ ನೆನಪು ಆರುವ ಮುನ್ನವೇ ಮತ್ತೊಬ್ಬ ಬಲು ಜನಪ್ರಿಯ ಹಿಂದಿ ನಟ ಸತೀಶ್ ಶಾ ನಿಧನ ಹೊಂದಿದ್ದಾರೆ. ಹಿಂದಿ ಚಿತ್ರರಂಗದ ಜೊತೆಗೆ ಕಿರುತೆರೆಯಲ್ಲಿಯೂ ಸಹ ಸತೀಶ್ ಶಾ ಅವರದ್ದು ಬಲು ದೊಡ್ಡ ಹೆಸರು. ಇಂದು (ಅಕ್ಟೋಬರ್ 25) ಅವರು ಮುಂಬೈನ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಸತೀಶ್ ಶಾ ಅವರು ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು.

‘ಮೇ ಹೂ ನಾ’, ‘ಜಾನೆ ಬಿ ದೋ ಯಾರೋ’, ‘ಹಮ್ ಆಪ್ಕೆ ಹೈ ಕೋನ್’ ಸೇರಿದಂತೆ ಹಲವಾರು ಹಿಂದಿ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳು, ಪೋಷಕ ಪಾತ್ರಗಳಲ್ಲಿ ಸತೀಶ್ ಶಾ ನಟಿಸಿದ್ದಾರೆ. 1970 ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಸತೀಶ್ ಶಾ ಅವರು 2014 ರ ವರೆಗೆ ಸಕ್ರಿಯವಾಗಿದ್ದರು. 2023 ರಲ್ಲಿ ಬಂದ ಶೋ ಒಂದರಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಳೆದ ಕೆಲ ವರ್ಷಗಳಿಂದಲೂ ಸತೀಶ್ ಶಾ ಅವರಿಗೆ ಕಿಡ್ನಿಗೆ ಸಂಬಂಧಿಸಿದ ಅನಾರೋಗ್ಯ ಕಾಣಿಸಿಕೊಂಡಿತ್ತು.

ಹಿಂದಿ ಟಿವಿ ಲೋಕದ ಬಲು ಜನಪ್ರಿಯ ಹಾಸ್ಯ ಧಾರಾವಾಹಿ ‘ಸಾರಾಭಾಯಿ vs ಸಾರಾಭಾಯಿ’ಯಲ್ಲಿ ಸತೀಶ್ ಶಾ ಅವರದ್ದು ಪ್ರಮುಖ ಪಾತ್ರ. ಶಾರುಖ್ ಖಾನ್ ನಟಿಸಿದ್ದ ‘ಮೈ ಹೂ ನಾ’ ಸಿನಿಮಾನಲ್ಲಿ ಉಗುಳುತ್ತಾ ಮಾತನಾಡುವ ಪ್ರಿನ್ಸಿಪಲ್ ಆಗಿ ನಟಿಸಿರುವ ಅವರ ಪಾತ್ರ ಬಲು ಜನಪ್ರಿಯ. ಅಂದಹಾಗೆ ಸತೀಶ್ ಶಾ ಅವರು ಕನ್ನಡದ ಒಂದು ಸಿನಿಮಾನಲ್ಲಿಯೂ ನಟಿಸಿದ್ದಾರೆ. ತಮಿಳಿನ ಮಾಧವನ್, ಅಬ್ಬಾಸ್, ಪ್ರೇಮಾ ನಟಿಸಿರುವ ಕನ್ನಡದ ಸಿನಿಮಾ ‘ಶಾಂತಿ ಶಾಂತಿ ಶಾಂತಿ’ಯಲ್ಲಿ ಸತೀಶ್ ಶಾ ನಟಿಸಿದ್ದಾರೆ. ಕನ್ನಡದ ಹೊರತಾಗಿ ಎರಡು ಮರಾಠಿ ಸಿನಿಮಾಗಳಲ್ಲಿಯೂ ಸತೀಶ್ ಶಾ ನಟಿಸಿದ್ದಾರೆ.

ಇದನ್ನೂ ಓದಿ:ಇಡಿ ದಾಳಿ: ಸಂಪರ್ಕಕ್ಕೆ ಸಿಗದ ಸತೀಶ್ ಸೈಲ್, ಅಜ್ಞಾತ ಸ್ಥಳಕ್ಕೆ ತೆರಳಿದ ಕಾಂಗ್ರೆಸ್ ಶಾಸಕ

ಸತೀಶ್ ಶಾ ಅವರು ಎನ್​​ಎಸ್​​ಡಿಯಲ್ಲಿ ಅಭಿನಯ ಕಲಿತವರು. ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವಾರು ಟಿವಿ ಶೋಗಳಲ್ಲಿ ನಟಿಸಿದ್ದಾರೆ. ನಾಸಿರುದ್ದೀನ್ ಶಾ, ಅನುಪಮ್ ಖೇರ್ ಇನ್ನೂ ಕೆಲವರು ಸತೀಶ್ ಅವರ ಸಹಪಾಠಿಗಳಾಗಿದ್ದರಂತೆ. ಹಾಸ್ಯ ನಟರಾಗಿ ಬಹಳ ಜನಪ್ರಿಯರಾಗಿದ್ದ ಸತೀಶ್ ಶಾ, ಶಾರುಖ್ ಖಾನ್ ನಟನೆಯ ‘ಸ್ವದೇಸ್’ (ಮೂಕಜ್ಜಿ ಕನಸುಗಳು ಆಧರಿತ ಸಿನಿಮಾ), ‘ಫಿರ್ ಬಿ ದಿಲ್ ಹೇ ಹಿಂದೂಸ್ಥಾನಿ’ ಸಿನಿಮಾಗಳಲ್ಲಿ ಗಂಭೀರ ಪಾತ್ರಗಳಲ್ಲಿಯೂ ನಟಿಸಿದ್ದಾರೆ. ಸತೀಶ್ ಶಾ ಅವರ ನಿಧನಕ್ಕೆ ಹಿಂದಿ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ