ಸಂಕಷ್ಟದಲ್ಲಿ ಯೋಗಿ ಆದಿತ್ಯನಾಥ ಕುರಿತ ಸಿನಿಮಾ, ಸಿಬಿಎಫ್​ಸಿಗೆ ಕೋರ್ಟ್ ನೊಟೀಸ್

Ajey: The untold story of Yogi: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ಜೀವನ ಆಧರಿಸಿದ ‘ಅಜೆಯ್: ದಿ ಅನ್​ಟೋಲ್ಡ್ ಸ್ಟೋರಿ ಆಫ್ ಯೋಗಿ’ ಸಿನಿಮಾ ನಿರ್ಮಾಣವಾಗಿದೆ. ಸಿನಿಮಾ ಆಗಸ್ಟ್ 1 ರಂದು ಬಿಡುಗಡೆ ಆಗಲಿತ್ತು. ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ಸಿನಿಮಾಕ್ಕೆ ಸಂಕಷ್ಟ ಎದುರಾಗಿದ್ದು, ಸಿನಿಮಾದ ನಿರ್ಮಾಪಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಸಂಕಷ್ಟದಲ್ಲಿ ಯೋಗಿ ಆದಿತ್ಯನಾಥ ಕುರಿತ ಸಿನಿಮಾ, ಸಿಬಿಎಫ್​ಸಿಗೆ ಕೋರ್ಟ್ ನೊಟೀಸ್
Yogi Adithyanath

Updated on: Jul 15, 2025 | 3:52 PM

ರಾಜಕಾರಣಿಗಳ ಜೀವನ ಆಧರಿಸಿದ ಸಿನಿಮಾಗಳು ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚಾಗಿವೆ. ಈ ರೀತಿಯ ಸಿನಿಮಾಗಳನ್ನು ರಾಜಕಾರಣಿಗಳ ಸಾರ್ವಜನಿಕ ಜನಪ್ರಿಯತೆ ಹೆಚ್ಚಿಸಲು, ಪಕ್ಷಕ್ಕೆ ಒಳಿತಾಗಲೆಂದು ನಿರ್ಮಾಣ ಮಾಡಲಾಗುತ್ತಿರುವುದು ಸ್ಪಷ್ಟ. ನರೇಂದ್ರ ಮೋದಿ, ಎನ್​ಟಿಆರ್, ಅಟಲ್ ಬಿಹಾರಿ ವಾಜಪೇಯಿ, ಠಾಕ್ರೆ, ರಾಜ ಶೇಖರ್ ರೆಡ್ಡಿ, ಜಗನ್​ಮೋಹನ್ ರೆಡ್ಡಿ, ಮನಮೋಹನ್ ಸಿಂಗ್ ಬಗ್ಗೆ ವಿಡಂಬನಾತ್ಮಕ ಸಿನಿಮಾ ಇನ್ನೂ ಕೆಲವು ರಾಜಕಾರಣಿಗಳ ಬಗ್ಗೆ ಸಿನಿಮಾ ಮಾಡಲಾಗಿದೆ. ಇದೀಗ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ಜೀವನ ಆಧರಿಸಿದ ಸಿನಿಮಾ ನಿರ್ಮಾಣವಾಗಿದ್ದು, ಬಿಡುಗಡೆಗೆ ಸಂಕಷ್ಟ ಎದುರಾಗಿದೆ.

ಯೋಗಿ ಆದಿತ್ಯನಾಥ ಜೀವನ ಆಧರಿಸಿದ ‘ಅಜೆಯ್: ದಿ ಅನ್​ ಟೋಲ್ಡ್ ಸ್ಟೋರಿ ಆಫ್ ಯೋಗಿ’ ಹೆಸರಿನ ಸಿನಿಮಾ ನಿರ್ಮಾಣ ಮಾಡಲಾಗಿದೆ. ‘ದಿ ಮಾಂಕ್ ಹು ಬಿಕೇಮ್ ಚೀಫ್ ಮಿನಿಸ್ಟರ್’ ಹೆಸರಿನ ಪುಸ್ತಕವನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. ಆಗಸ್ಟ್ 1 ಕ್ಕೆ ಸಿನಿಮಾ ಬಿಡುಗಡೆ ಆಗಲಿತ್ತು. ಆದರೆ ಸಿನಿಮಾದ ಬಿಡುಗಡೆಗೆ ಕೆಲವೇ ದಿನ ಉಳಿದಿರುವಾಗ ಸಿಬಿಎಫ್​ಸಿ ಇಂದ ಸಂಕಷ್ಟ ಎದುರಾಗಿದೆ.

ಸಿಬಿಎಫ್​ಸಿಯು ‘ಅಜೆಯ್’ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಿಲ್ಲ. ಇದು ಸಿನಿಮಾದ ನಿರ್ಮಾಪಕರನ್ನು ಕೆರಳಿಸಿದ್ದು, ನಿರ್ಮಾಪಕರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ‘ಅಜೆಯ್’ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ಉದ್ದೇಶಪೂರ್ವಕವಾಗಿ ಸಿಬಿಎಫ್​ಸಿ ತಡ ಮಾಡುತ್ತಿದೆ ಎಂದು ನಿರ್ಮಾಪಕರು ಆರೋಪ ಮಾಡಿದ್ದರು. ನಿರ್ಮಾಪಕರ ಅರ್ಜಿ ಆಲಿಸಿದ ಬಾಂಬೆ ಹೈಕೋರ್ಟ್, ಸಿಬಿಎಫ್​ಸಿಗೆ ನೊಟೀಸ್ ನೀಡಿದ್ದು, ಪ್ರಮಾಣ ಪತ್ರ ನೀಡಲು ತಡವಾಗುತ್ತಿರುವುದೇಕೆಂದು ವಿವರಿಸುವಂತೆ ಸೂಚಿಸಿದೆ.

ಇದನ್ನೂ ಓದಿ:ಮೋದಿ ಬಗ್ಗೆ ಆಯ್ತು ಈಗ ಯೋಗಿ ಆದಿತ್ಯನಾಥ್ ಜೀವನ ಕುರಿತ ಸಿನಿಮಾ

ಶಂತನು ಗುಪ್ತಾ ಬರೆದಿರುವ ‘ದಿ ಮಾಂಕ್ ಹು ಬಿಕೇಮ್ ಚೀಫ್ ಮಿನಿಸ್ಟರ್’ ಪುಸ್ತಕ ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದ್ದು, ಸಿನಿಮಾದ ಮುಖ್ಯ ಪಾತ್ರದಲ್ಲಿ ಅಂದರೆ ಯೋಗಿ ಆದಿತ್ಯನಾಥ ಪಾತ್ರದಲ್ಲಿ ಅನಂತ ವಿಜಯ್ ಜೋಶಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಭೋಜ್​ಪುರಿ ಚಿತ್ರರಂಗದ ಸ್ಟಾರ್ ನಟ ನಿರಹುವ, ಪ್ಯಾನ್ ಇಂಡಿಯಾ ನಟ ಪರೇಶ್ ರಾವಲ್, ರಾಜೇಶ್ ಖಟ್ಟರ್ ಇನ್ನು ಹಲವರು ನಟಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಬಾಲ್ಯದಿಂದ ಸಿಎಂ ಆಗುವವರೆಗಿನ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆಯಂತೆ. ಅಜಯ್: ದಿ ಅನ್​ಟೋಲ್ಡ್ ಸ್ಟೋರಿ ಆಫ್ ಯೋಗಿ’ ಸಿನಿಮಾವನ್ನು ರವೀಂದ್ರ ಗೌತಮ್ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣ ಮಾಡುತ್ತಿರುವುದು ರಿತು ಮೇಂಗಿ. ದಿಲೀಪ್ ಬಚ್ಚನ್ ಮತ್ತು ದಿಲೀಪ್ ಮೇಂಗಿ ಈ ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ