ವಿವಾದದಲ್ಲಿ ರಶ್ಮಿಕಾ ಮಂದಣ್ಣ ಹಿಂದಿ ಸಿನಿಮಾ, ಮರಾಠಿಗರ ಪ್ರತಿಭಟನೆ
Chhaava Movie: ರಶ್ಮಿಕಾ ಮಂದಣ್ಣ, ವಿಕ್ಕಿ ಕೌಶಲ್ ನಟಿಸಿರುವ ಹಿಂದಿ ಸಿನಿಮಾ ‘ಛಾವಾ’ ವಿವಾದಕ್ಕೆ ಗುರಿಯಾಗಿದೆ. ಕೆಲ ಮರಾಠಿ ಗುಂಪುಗಳು ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರು ಎನ್ನಲಾದ ಸಂಸದರೊಬ್ಬರು ಸಿನಿಮಾದ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಕೆಲವು ದೃಶ್ಯಗಳನ್ನು ತೆಗೆಯಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಸಹ ನಡೆಸಲಾಗಿದೆ.
ರಶ್ಮಿಕಾ ಮಂದಣ್ಣ, ವಿಕ್ಕಿ ಕೌಶಲ್ ನಟಿಸಿರುವ ‘ಛಾವಾ’ ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಫೆಬ್ರವರಿ 14ಕ್ಕೆ ತೆರೆಗೆ ಬರಲಿದೆ. ‘ಛಾವಾ’ ಸಿನಿಮಾವು ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಾಂಬಾಜಿ ಮಹಾರಾಜ್ ಅವರ ಕುರಿತಾಗಿದ್ದಾಗಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಆದ ಬೆನ್ನಲ್ಲೆ ಸಿನಿಮಾದ ಬಗ್ಗೆ ಅಲ್ಲಲ್ಲಿ ಆಕ್ಷೇಪಣೆಗಳು ಸಹ ಎದ್ದಿವೆ. ಛತ್ರಪತಿ ಶಿವಾಜಿಯ ವಂಶಸ್ಥರು ಸಿನಿಮಾದ ಐತಿಹಾಸಿಕ ಸ್ಪಷ್ಟತೆ ಬಗ್ಗೆ ಹಾಗೂ ನಿಖರತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಕೆಲ ಮರಾಠಿಗರು ‘ಛಾವಾ’ ಸಿನಿಮಾದ ವಿರುದ್ಧ ಪ್ರತಿಭಟನೆ ಮಾಡಿದ್ದು, ಸಿನಿಮಾದ ಬಿಡುಗಡೆಯನ್ನು ತಡೆ ಹಿಡಿಯುವಂತೆ ಒತ್ತಾಯ ಮಾಡಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರು, ರಾಜ್ಯಸಭಾ ಸದಸ್ಯರೂ ಆಗಿರುವ ಸಾಂಬಾಜಿರಾಜೆ ಛತ್ರಪತಿ ಮಾಧ್ಯಮಗಳೊಟ್ಟಿಗೆ ‘ಛಾವಾ’ ಸಿನಿಮಾದ ಬಗ್ಗೆ ಮಾತನಾಡಿದ್ದು, ‘ಸಿನಿಮಾದ ನಿರ್ದೇಶಕರು ಇತಿಹಾಸಕರಾರರನ್ನು ಸಂಪರ್ಕ ಮಾಡಿ, ಸಾಂಬಾಜಿ ಮಹಾರಾಜರ ಬಗ್ಗೆ ಸರಿಯಾಗಿ ತಿಳಿದುಕೊಂಡು, ಅವರನ್ನು ಗೌರವವಪೂರ್ವಕವಾಗಿ ಮತ್ತು ನಿಖರವಾಗಿ ತೆರೆಗೆ ತರಬೇಕು’ ಎಂದಿದ್ದಾರೆ. ಸಾಂಬಾಜಿ ಮಹಾರಾಜರ ಸಾಧನೆ ಬಗ್ಗೆ ಸಿನಿಮಾ ಮಾಡಿರುವುದು ಉತ್ತಮ ಕಾರ್ಯ ಎಂದಿರುವ ಅವರು, ಸಿನಿಮಾ ಬಿಡುಗಡೆಗೆ ಮುಂಚೆ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಸಹ ಹೇಳಿದ್ದಾರೆ.
ಇದನ್ನೂ ಓದಿ:‘ನಿವೃತ್ತಿ ಹೊಂದಲು ಸಂತೋಷವಿದೆ’; ಕಾಲು ಪೆಟ್ಟಾದ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಇಂಥ ನಿರ್ಧಾರವೇ?
ಕೆಲವು ಮರಾಠ ಗುಂಪುಗಳು, ಪುಣೆ, ಮುಂಬೈ ಇನ್ನಿತರೆ ಕೆಲವು ಕಡೆಗಳಲ್ಲಿ ‘ಛಾವಾ’ ಸಿನಿಮಾದ ವಿರುದ್ಧ ಪ್ರತಿಭಟನೆ ಮಾಡಿವೆ. ಈಗ ಬಿಡುಗಡೆ ಆಗಿರುವ ‘ಛಾವಾ’ ಸಿನಿಮಾದ ಟ್ರೈಲರ್ನಲ್ಲಿ ಡ್ಯಾನ್ಸ್ ದೃಶ್ಯವೊಂದಿದೆ. ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್ ಅವರು ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಇದಾಗಿದ್ದು, ಈ ದೃಶ್ಯದ ಬಗ್ಗೆ ಮರಾಠಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಹಾರಾಜರು ಬಹಿರಂಗವಾಗಿ ಕುಣಿಯುತ್ತಿರುವ ದೃಶ್ಯ ಅವರ ವ್ಯಕ್ತಿತ್ವಕ್ಕೆ ವಿರುದ್ಧವಾಗಿದೆ. ಸಿನಿಮಾದಲ್ಲಿ ತೋರಿಸಿರುವಂತೆ ಅವರ ಪಟ್ಟಾಭಿಷೇಕ ಆದ ನಂತರ ಅವರು ಹೀಗೆ ಡ್ಯಾನ್ಸ್ ಮಾಡುತ್ತಿರುವಂತೆ ತೋರಿಸಲಾಗಿದೆ. ಆ ದೃಶ್ಯವನ್ನು ಸಿನಿಮಾದಿಂದ ತೆಗೆಯಬೇಕು ಎಂದು ಒತ್ತಾಯಿಸಿದ್ದಾರೆ.
‘ಛಾವಾ’ ಸಿನಿಮಾವು ಶಿವಾಜಿ ಮಹಾರಾಜರ ಪುತ್ರ ಸಾಂಬಾಜಿ ಮಹಾರಾಜರ ಕತೆ ಒಳಗೊಂಡಿದೆ. ಸಾಂಬಾಜಿಯ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಲಕ್ಷ್ಮಣ ಉಠೇಕರ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ದಿನೇಶ್ ವಿಜನ್ ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಂಗೀತ ನೀಡಿರುವುದು ಎಆರ್ ರೆಹಮಾನ್. ಸಿನಿಮಾ ಫೆಬ್ರವರಿ 14ಕ್ಕೆ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ