ಪುಣ್ಯಕ್ಷೆತ್ರದಲ್ಲಿ ಅನಾಚಾರ, ಓರಿ ಹಾಗೂ ಗೆಳೆಯರ ವಿರುದ್ಧ ಪ್ರಕರಣ
Orry: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿ ಓರಿ ವಿರುದ್ಧ ದೂರು ದಾಖಲಾಗಿದೆ. ಓರಿ ಮಾತ್ರವೇ ಅಲ್ಲದೆ ಅವರ ಆರು ಮಂದಿ ಗೆಳೆಯರ ವಿರುದ್ಧವೂ ದೂರು ದಾಖಲಾಗಿದ್ದು, ಪೊಲೀಸರು ಓರಿ ಮತ್ತು ಅವರ ಗೆಳೆಯರ ಬಂಧಿಸುವ ಯತ್ನದಲ್ಲಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

ಓರಿ, ಸಾಮಾಜಿಕ ಜಾಲತಾಣದ ವೈರಲ್ ಸೆಲೆಬ್ರಿಟಿ. ಎಲ್ಲ ಪ್ರಮುಖ ಸಿನಿಮಾ ಸೆಲೆಬ್ರಿಟಿಗಳಿಗೂ ಹತ್ತಿರದ ವ್ಯಕ್ತಿಯಾಗಿರುವ ಓರಿ ಹೋಗದ ಬಾಲಿವುಡ್ ಪಾರ್ಟಿಗಳಿಲ್ಲ. ಭಾರತದ ಪ್ರಮುಖ ಉದ್ಯಮಿಯೊಬ್ಬರ ಪುತ್ರನೂ ಆಗಿರುವ ಓರಿ, ಯಾವ ಸಿನಿಮಾಗಳಲ್ಲಿಯೂ ನಟಿಸಿಲ್ಲವಾದರೂ ತಮ್ಮ ಸೋಷಿಯಲ್ ಮೀಡಿಯಾ ಅಪಿಯರೆನ್ಸ್ಗಳಿಂದಾಗಿ ಅವರನ್ನು ಬಾಲಿವುಡ್ ಸೆಲೆಬ್ರಿಟಿಗಳ ಪಟ್ಟಿಗೆ ಸೇರಿಸಲಾಗಿದೆ. ಆದರೆ ಇದೀಗ ಓರಿ ಮತ್ತು ಆವರ ಆರ್ವರು ಗೆಳೆಯರ ವಿರುದ್ಧ ದೂರು ದಾಖಲಾಗಿದೆ.
ಓರಿ ಮತ್ತು ಅವರ ಕೆಲವು ಗೆಳೆಯರು ಇತ್ತೀಚೆಗಷ್ಟೆ ಜಮ್ಮು ಕಾಶ್ಮೀರದ ಕಾತ್ರನ ಹೋಟೆಲ್ ರೂಂ ಒಂದರಲ್ಲಿ ಮದ್ಯ ಸೇವನೆ ಮಾಡಿದ್ದರು. ಆದರೆ ಓರಿ ಮತ್ತು ಅವರ ಗೆಳೆಯರು ಮದ್ಯ ಸೇವಿಸಿರುವ ಪ್ರದೇಶ ಪುಣ್ಯಕ್ಷೇತ್ರವಾಗಿದ್ದು ಅಲ್ಲಿ ಮದ್ಯ ನಿಷೇಧವಾಗಿದೆ. ಓರಿ ಮತ್ತು ಅವರ ಗೆಳೆಯರ ಈ ಕುಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಪೊಲೀಸರು ಪ್ರಕರಣ ಸಹ ದಾಖಲಿಸಿಕೊಂಡಿದ್ದಾರೆ.
ಓರಿ ಮತ್ತು ಗೆಳೆಯರು ಇತ್ತೀಚೆಗಷ್ಟೆ ಜಮ್ಮು ಕಾಶ್ಮೀರದ ಕಾತ್ರಗೆ ಹೋಗಿದ್ದರು. ಅಲ್ಲಿಯೇ ಪ್ರಸಿದ್ಧ ವೈಷ್ಣೋದೇವಿ ದೇವಾಲಯ ಇದೆ. ದೇವಾಲಯ ಇರುವ ಕಾರಣ ಕಾತ್ರ ನಗರದಲ್ಲಿ ಮದ್ಯಕ್ಕೆ ನಿಷೇಧ ಹೇರಲಾಗಿದೆ. ಮದ್ಯ ಮಾತ್ರವೇ ಅಲ್ಲದೆ ಇಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಕೆಗೆ ಸಹ ನಿಷೇಧ ಹೇರಲಾಗಿದೆ. ಆದರೆ ಇಲ್ಲಿನ ಹೋಟೆಲ್ ಒಂದರಲ್ಲಿ ತಂಗಿದ್ದ ಓರಿ ಮತ್ತು ಗೆಳೆಯರು ಹೋಟೆಲ್ ರೂಂನಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಓರಿಯೋ ಬಿಸ್ಕೆಟ್ ಆಮ್ಲೆಟ್ ಅಂತೆ; ಇದನ್ಯಾರು ತಿಂತಾರಪ್ಪಾ
ಘಟನೆಗೆ ಸಂಬಂಧಿಸಿದಂತೆ ಕಾತ್ರ ಪೊಲೀಸರು ಒರ್ಹಾನ್ ಅವತ್ರಮಣಿ ಅಲಿಯಾಸ್ ಓರಿ, ದರ್ಶನ್ ಸಿಂಗ್, ಪಾರ್ಥ ರೈನಾ, ರಿತಿಕ್ ಸಿಂಗ್, ರಾಶಿ ದತ್ತ, ರಕ್ಷಿತಾ ಭೋಗಲ್, ಶಗುನ್ ಕೋಹ್ಲಿ, ಅನಸ್ಟಾಲಿಯಾ ಅರ್ಜಮಸ್ಕಿನಾ ಅವರುಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಇವರೆಲ್ಲ ಮದ್ಯದ ಜೊತೆಗೆ ಮಾಂಸಾಹಾರ ಸಹ ಸೇವನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇವರಿಗೆ, ಹೋಟೆಲ್ ರೂಂ ಕೊಡುವಾಗಲೇ ಈ ಸ್ಥಳದಲ್ಲಿ ಮದ್ಯ ಸೇವನೆಗೆ ನಿಷೇಧವಿದೆ ಎಂದು ತಿಳಿಸಲಾಗಿತ್ತಂತೆ ಹಾಗಿದ್ದಾಗಿಯೂ ಇವರು ಮದ್ಯ ಸೇವನೆ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಡಿವೈಎಸ್ಪಿ ನೇತೃತ್ವದ ತನಿಖಾ ತಂಡವನ್ನು ರಚಿಸಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯುವ ಯತ್ನವನ್ನು ಪೊಲೀಸರು ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:22 pm, Tue, 18 March 25