
ಸಿನಿಮಾ ಉತ್ತಮವಾಗಿದ್ದರೆ ಅದು ವಾರಾಂತ್ಯ ಇರಲಿ ಅಥವಾ ವಾರದ ದಿನ ಇರಲಿ ಜನರು ಸಿನಿಮಾ ನೋಡಿಯೇ ನೋಡುತ್ತಾರೆ ಎಂಬುದಕ್ಕೆ ‘ಸು ಫ್ರಮ್ ಸೋ’ ಉತ್ತಮ ಉದಾಹರಣೆ. ಈ ಸಿನಿಮಾ ಮೊದಲ ಭಾನುವಾರ ಎಷ್ಟು ಗಳಿಕೆ ಮಾಡಿತ್ತೋ ಅದಕ್ಕೆ ಸರಿ ಸಮವಾಗಿ ವಾರದ ದಿನಗಳಲ್ಲೂ ಕಲೆಕ್ಷನ್ ಮಾಡಿತ್ತು. ಇನ್ನು, ಸಿನಿಮಾ ವಿಮರ್ಶೆಯಲ್ಲಿ ಸೋತರೆ ಆ ಚಿತ್ರದ ಅಬ್ಬರ ಇರೋದು ವಾರಾಂತ್ಯದಲ್ಲಿ ಮಾತ್ರ ಎಂಬುದಕ್ಕೆ ‘ಕೂಲಿ’ ಸಿನಿಮಾ (Coolie Movie) ಉತ್ತಮ ಉದಾಹರಣೆ. ಈ ಚಿತ್ರಕ್ಕೆ ಮೊದಲ ಆಘಾತ ಉಂಟಾಗಿದೆ.
‘ಕೂಲಿ’ ಸಿನಿಮಾದಲ್ಲಿ ರಜನಿಕಾಂತ್, ಆಮಿರ್ ಖಾನ್, ಉಪೇಂದ್ರ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಲೋಕೇಶ್ ಕನಗರಾಜ್ ನಿರ್ದೇಶನ ಇದೆ. ಕನ್ನಡದ ರಚಿತಾ ರಾಮ್ ಕೂಡ ಸಿನಿಮಾದಲ್ಲಿ ನೆಗೆಟಿವ್ ಶೇಡ್ನ ಪಾತ್ರ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಆ ನಿರೀಕ್ಷೆಯನ್ನು ಸಿನಿಮಾ ತಲುಪಿಲ್ಲ.
‘ಕೂಲಿ’ ಸಿನಿಮಾ ಮೊದಲ ದಿನ ಕಲೆಕ್ಷನ್ ಮಾಡಿದ್ದು 65 ಕೋಟಿ ರೂಪಾಯಿ. ಭಾನುವಾರ ಈ ಗಳಿಕೆ 35 ಕೋಟಿ ರೂಪಾಯಿಗೆ ಇಳಿದಿತ್ತು. ಸೋಮವಾರ 12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಮಂಗಳವಾರದ ಗಳಿಕೆ ಒಂದಂಕಿಗೆ ಬಂದಿದೆ. ಈ ಚಿತ್ರ ಆಗಸ್ಟ್ 19ರಂದು ಕೇವಲ 9.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಚಿತ್ರಕ್ಕೆ ತೀವ್ರ ಹಿನ್ನಡೆ ತಂದಿದೆ. ಚಿತ್ರದ ಒಟ್ಟಾರೆ ಕಲೆಕ್ಷನ್ 216 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: ತೀವ್ರವಾಗಿ ಕುಸಿದ ‘ಕೂಲಿ’ ಕಲೆಕ್ಷನ್; ಒಂದಂಕಿಗೆ ಬಂತು ‘ವಾರ್ 2’ ಗಳಿಕೆ
‘ಕೂಲಿ’ ಸಿನಿಮಾದ ಗಳಿಕೆ ಹೀಗೆಯೇ ಮುಂದುವರಿದರೆ ದೊಡ್ಡ ಮಟ್ಟದ ಕಲೆಕ್ಷನ್ ಮಾಡೋದು ಅನುಮಾನ ಎನ್ನಲಾಗುತ್ತಿದೆ. ಸಿನಿಮಾ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಗರಿಷ್ಠ 500-600 ಕೋಟಿ ರೂಪಾಯಿ ಗಳಿಸಲು ಮಾತ್ರ ಸಾಧ್ಯವಾಗಬಹುದು ಎಂದು ಅನೇಕರು ಊಹಿಸಿದ್ದಾರೆ. ವಾರಾಂತ್ಯದಲ್ಲಿ ಹಾಗೂ ಗಣೇಶ ಚತುರ್ಥಿ ರಜೆಯ ಸಂದರ್ಭದಲ್ಲಿ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತದೆ ಎಂಬುದರ ಮೇಲೆ ಸಿನಿಮಾದ ಒಟ್ಟಾರೆ ಗಲ್ಲಾ ಪೆಟ್ಟಿಗೆಯ ಗಳಿಕೆ ನಿರ್ಧಾರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.