‘ರಾಷ್ಟ್ರ ಪ್ರಶಸ್ತಿ ಹಿಡಿಯಲು ನನಗೆ ಒಂದು ಕೈ ಸಾಕು’: ಶಾರುಖ್ ಖಾನ್ ಹೀಗೆ ಹೇಳಿದ್ದು ಯಾಕೆ?
ಶಾರುಖ್ ಖಾನ್ ಅವರು ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲು ಕಾತರರಾಗಿದ್ದಾರೆ. ಇಷ್ಟು ವರ್ಷಗಳ ವೃತ್ತಿ ಜೀವನದಲ್ಲಿ ಅವರಿಗೆ ಇದೇ ಮೊದಲ ಬಾರಿ ರಾಷ್ಟ್ರ ಪ್ರಶಸ್ತಿ ಸಿಗುತ್ತಿದೆ. ಆ ಪ್ರಶಸ್ತಿಯನ್ನು ಹಿಡಿಯಲು ತಮಗೆ ಒಂದೇ ಕೈ ಸಾಕು ಎಂದು ಅವರು ಹೇಳಿದ್ದಾರೆ. ಅದಕ್ಕೆ ಕಾರಣ ಏನು?

ನಟ ಶಾರುಖ್ ಖಾನ್ (Shah Rukh Khan) ಅವರಿಗೆ ಈ ವರ್ಷ ತುಂಬಾ ಸ್ಪೆಷಲ್. ಯಾಕೆಂದರೆ, ಇತ್ತೀಚೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿ ಘೋಷಿಸಲಾಗಿದೆ. ‘ಜವಾನ್’ ಸಿನಿಮಾದಲ್ಲಿನ ನಟನೆಗಾಗಿ ಅವರು ‘ಅತ್ಯುತ್ತಮ ನಟ’ (Best Actor) ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಆದರೆ ಒಂದು ಬೇಸರದ ಸುದ್ದಿ ಕೂಡ ಇದೆ. ಶಾರುಖ್ ಖಾನ್ ಅವರ ಕೈಗೆ ಪೆಟ್ಟಾಗಿದೆ. ಅದಕ್ಕಾಗಿ ಅವರು ಸರ್ಜರಿ ಮಾಡಿಸಿಕೊಂಡಿದ್ದಾರೆ. ಹಾಗಿದ್ದರೂ ಅವರು ಸಿನಿಮಾ ಕೆಲಸಗಳಲ್ಲಿ ಭಾಗಿ ಆಗುತ್ತಿದ್ದಾರೆ. ಇಂದು (ಆಗಸ್ಟ್ 20) ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಅವರು ನ್ಯಾಷನಲ್ ಅವಾರ್ಡ್ (National Award) ಬಗ್ಗೆ ಮಾತನಾಡಿದರು.
ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನಿರ್ದೇಶನ ಮಾಡಿರುವ ‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸಿರೀಸ್ ಬಿಡುಗಡೆಗೆ ಸಜ್ಜಾಗಿದೆ. ಅದರ ಪ್ರೀವ್ಯೂ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರು ಪಾಲ್ಗೊಂಡಿದ್ದಾರೆ. ಇದಕ್ಕೆ ಶಾರುಖ್ ಖಾನ್ ಅವರೇ ನಿರ್ಮಾಪಕರು. ವೇದಿಕೆಯಲ್ಲಿ ಮಾತನಾಡಲು ಬಂದಾಗ ಶಾರುಖ್ ಖಾನ್ ಅವರು ಕೈಗೆ ಬ್ಯಾಂಡೇಜ್ ಕಟ್ಟಿಕೊಂಡಿದ್ದರು.
‘ನಿಮ್ಮಲ್ಲಿ ಅನೇಕರಿಗೆ ಸಾಕಷ್ಟು ಪ್ರಶ್ನೆ ಇದೆ ಎಂಬುದು ನನಗೆ ಗೊತ್ತು. ಆ ಬಗ್ಗೆ ನಾನು ಮೊದಲೇ ಉತ್ತರ ನೀಡುತ್ತೇನೆ. ನನ್ನ ಕೈಗೆ ಪೆಟ್ಟಾಗಿದೆ. ಅದಕ್ಕೆ ಒಂದು ಸರ್ಜರಿ ಮಾಡಬೇಕಾಯಿತು. ಪೂರ್ತಿಯಾಗಿ ಗುಣಮುಖರಾಗಲು 1-2 ತಿಂಗಳು ಬೇಕಾಗುತ್ತದೆ. ಆದರೆ ನಾನು ರಾಷ್ಟ್ರ ಪ್ರಶಸ್ತಿಯನ್ನು ಹಿಡಿಯಲು ಒಂದು ಕೈ ಸಾಕು’ ಎಂದು ಅವರು ಹೇಳಿದ್ದಾರೆ.
‘ಸಾಮಾನ್ಯವಾಗಿ ನಾನು ಎಲ್ಲ ಕೆಲಸಗಳನ್ನು ಒಂದೇ ಕೈಯಲ್ಲಿ ಮಾಡುತ್ತೇನೆ. ತಿನ್ನುವುದು, ಹಲ್ಲು ಉಜ್ಜುವುದು, ಬೆನ್ನು ಕೆರೆದುಕೊಳ್ಳುವುದು ಅದಕ್ಕೆಲ್ಲ ಒಂದೇ ಕೈ ಸಾಕು. ಆದರೆ ನಿಮ್ಮಿಂದ ಸಿಗುವ ಅಪಾರ ಪ್ರೀತಿಯನ್ನು ಸ್ವೀಕರಿಸಲು ಎರಡೂ ಕೈಗಳು ಬೇಕು’ ಎಂದು ಶಾರುಖ್ ಖಾನ್ ಅವರು ಹೇಳಿದ್ದಾರೆ. ಶಾರುಖ್ ಖಾನ್ ಅವರ ಕೈಗೆ ಪೆಟ್ಟಾದ ಬಳಿಕ ‘ಕಿಂಗ್’ ಚಿತ್ರದ ಶೂಟಿಂಗ್ ನಿಲ್ಲಿಸಲಾಯಿತು.
ಇದನ್ನೂ ಓದಿ: ನಿಮಗೆ ವಯಸ್ಸಾಯ್ತು, ಚಿತ್ರರಂಗ ಬಿಡಿ ಎಂದ ಅಭಿಮಾನಿಗೆ ಶಾರುಖ್ ಖಾನ್ ಹೇಳಿದ್ದೇನು?
‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’ ಮೂಲಕ ಶಾರುಖ್ ಖಾನ್ ಅವರು ‘ಬ್ಯಾಡ್ಸ್ ಆಫ್ ಬಾಲಿವುಡ್’ ಸೀರಿಸ್ ನಿರ್ಮಾಣ ಮಾಡಿದ್ದಾರೆ. ಇಂದು (ಆಗಸ್ಟ್ 20) ಪ್ರಿವ್ಯೂ ಬಿಡುಗಡೆ ಮಾಡಲಾಗಿದೆ. ಶಾರುಖ್ ಖಾನ್ ಪುತ್ರನ ಮೊದಲ ಪ್ರಾಜೆಕ್ಟ್ ಎಂಬ ಕಾರಣಕ್ಕೆ ಇದರ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ನೆಟ್ಫ್ಲಿಕ್ಸ್ ಮೂಲಕ ಇದು ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








