
ಬಾಲಿವುಡ್ ಲೆಜೆಂಡರಿ ನಟ ಧರ್ಮೇಂದ್ರ (Dharmendra) ಅವರು 89ನೇ ವಯಸ್ಸಿಗೆ ನಿಧನರಾದರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಅವರು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು. ಧರ್ಮೇಂದ್ರ ಅವರ ಯಶಸ್ವಿ ಸಿನಿಮಾಗಳ ಪಟ್ಟಿಯಲ್ಲಿ ‘ಶೋಲೆ’ (Sholay) ಚಿತ್ರಕ್ಕೆ ಪ್ರಮುಖ ಸ್ಥಾನ ಇದೆ. ಈ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಕರ್ನಾಟಕದ ರಾಮನಗರದಲ್ಲಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿತ್ತು. ಸಿನಿಮಾದ ಅದ್ದೂರಿತನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಅಂದಹಾಗೆ, ‘ಶೋಲೆ’ ಸಿನಿಮಾದಲ್ಲಿ ನಟಿಸಲು ಧರ್ಮೇಂದ್ರ ಸೇರಿದಂತೆ ಎಲ್ಲ ಕಲಾವಿದರು ಎಷ್ಟು ಸಂಭಾವನೆ (Remuneration) ಪಡೆದಿದ್ದರು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
1975ರಲ್ಲಿ ‘ಶೋಲೆ’ ಸಿನಿಮಾ ಬಿಡುಗಡೆ ಆಗಿತ್ತು. ಜಿ.ಪಿ. ಸಿಪ್ಪಿ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ರಮೇಶ್ ಸಿಪ್ಪಿ ನಿರ್ದೇಶನ ಮಾಡಿದ್ದರು. ವರದಿಗಳ ಪ್ರಕಾರ, ಈ ಸಿನಿಮಾ ನಿರ್ಮಾಣ ಆಗಿದ್ದು 3 ಕೋಟಿ ರೂಪಾಯಿ ಬಜೆಟ್ನಲ್ಲಿ. ಅದರಲ್ಲಿ ಕಲಾವಿದರ ಸಂಭಾವನೆ ಕೂಡ ಸೇರ್ಪಡೆ ಆಗಿತ್ತು. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಆಗಿದ್ದರಿಂದ ನಿರ್ಮಾಪಕರಿಗೆ ಲಾಭ ಆಯಿತು.
ಧರ್ಮೇಂದ್ರ ಅವರು ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದರು. ಅವರಿಗೆ 1.5 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿತ್ತು. ಆ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆದ ಕಲಾವಿದ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದರು. ನಟ ಸಂಜೀವ್ ಕುಮಾರ್ ಅವರಿಗೆ 1.25 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿತ್ತು. ಚಿತ್ರತಂಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ 2ನೇ ನಟ ಅವರಾಗಿದ್ದರು.
ಅಮಿತಾಭ್ ಬಚ್ಚನ್ ಅವರಿಗೆ ‘ಶೋಲೆ’ ಸಿನಿಮಾದಿಂದ ಅಪಾರ ಖ್ಯಾತಿ ಸಿಕ್ಕಿತು. ಅವರು ಕೂಡ ಒಂದು ಪ್ರಮುಖ ಪಾತ್ರವನ್ನು ಮಾಡಿದ್ದರು. ಈ ಸಿನಿಮಾದಲ್ಲಿ ನಟಿಸಿದ್ದಕ್ಕೆ ಅಮಿತಾಭ್ ಬಚ್ಚನ್ ಅವರಿಗೆ 1 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿತ್ತು. 50 ವರ್ಷಗಳ ಹಿಂದೆ ಲಕ್ಷಗಳಲ್ಲಿ ಸಂಭಾವನೆ ಪಡೆಯುವುದು ಎಂದರೆ ಬಹುದೊಡ್ಡ ವಿಚಾರ ಆಗಿತ್ತು.
ಇದನ್ನೂ ಓದಿ: ರಾಮನಗರದ ಜನರಿಗೆ ಆಗಿನ ಕಾಲದಲ್ಲೇ 100 ರೂಪಾಯಿ, ಊಟ ಕೊಟ್ಟಿದ್ದ ಧರ್ಮೇಂದ್ರ
ನಟಿ ಹೇಮಾ ಮಾಲಿನಿ ಅವರು ‘ಶೋಲೆ’ ಸಿನಿಮಾದಲ್ಲಿ ಬಸಂತಿ ಪಾತ್ರ ಮಾಡಿದ್ದರು. ಅವರಿಗೆ 75 ಸಾವಿರ ರೂಪಾಯಿ ಸಂಭಾವನೆ ಕೊಡಲಾಗಿತ್ತು. ರಾಧಾ ಎಂಬ ಪಾತ್ರ ಮಾಡಿದ್ದ ಜಯಾ ಬಚ್ಚನ್ ಅವರು 35 ಸಾವಿರ ರೂಪಾಯಿ ಪಡೆದುಕೊಂಡಿದ್ದರು. ಈ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ಅಮ್ಜದ್ ಖಾನ್ ಅವರಿಗೆ 50 ಸಾವಿರ ರೂಪಾಯಿ ಸಂಭಾವನೆ ನೀಡಲಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.