‘ಧುರಂಧರ್ 2’ ಚಿತ್ರಕ್ಕಾಗಿ ಮತ್ತೆ ಶೂಟಿಂಗ್ ಮಾಡಲ್ಲ ಅರ್ಜುನ್ ರಾಮ್​ಪಾಲ್

ಬಹುನಿರೀಕ್ಷಿತ ‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಈ ಸಿನಿಮಾಗೆ ನಿರ್ದೇಶಕ ಆದಿತ್ಯ ಧಾರ್ ಈಗಲೂ ಶೂಟಿಂಗ್ ಮಾಡುತ್ತಿದ್ದಾರೆ ಎಂದು ಗಾಸಿಪ್ ಕೇಳಿಬಂದಿದೆ. ಆದರೆ ಆ ಬಗ್ಗೆ ಚಿತ್ರತಂಡದ ಮೂಲಗಳಿಂದ ಸ್ಪಷ್ಟನೆ ಸಿಕ್ಕಿದೆ. ಯಾವುದೇ ಹೆಚ್ಚುವರಿ ಶೂಟಿಂಗ್ ಇಲ್ಲ ಎನ್ನಲಾಗಿದೆ.

‘ಧುರಂಧರ್ 2’ ಚಿತ್ರಕ್ಕಾಗಿ ಮತ್ತೆ ಶೂಟಿಂಗ್ ಮಾಡಲ್ಲ ಅರ್ಜುನ್ ರಾಮ್​ಪಾಲ್
Arjun Rampal
Image Credit source: Jio Studios

Updated on: Jan 28, 2026 | 4:48 PM

2025ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆದ ‘ಧುರಂಧರ್’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಈ ಸಿನಿಮಾದ ಸೀಕ್ವೆಲ್ ಮೇಲೆ ಸಾಕಷ್ಟು ನಿರೀಕ್ಷೆ ಮನೆ ಮಾಡಿದೆ. ‘ಧುರಂಧರ್ 2’ (Dhurandhar 2) ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗಲಿದೆ. ರಿಲೀಸ್ ದಿನಾಂಕ ಹತ್ತಿರ ಆಗುತ್ತಿದ್ದಂತೆಯೇ ಸಿನಿಮಾ ಬಗ್ಗೆ ಒಂದಷ್ಟು ಗಾಸಿಪ್ ಕೇಳಿಬರುತ್ತಿದೆ. ಈ ಸಿನಿಮಾದ ಹೆಚ್ಚುವರಿ ದೃಶ್ಯಗಳ ಶೂಟಿಂಗ್​​ನಲ್ಲಿ ನಟ ಅರ್ಜುನ್ ರಾಮ್​ಪಾಲ್ (Arjun Rampal) ಅವರು ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಅದು ನಿಜವಲ್ಲ.

‘ಧುರಂಧರ್’ ಸಿನಿಮಾದಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್, ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಮ್​​ಪಾಲ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದರು. ಈ ಪಾತ್ರಗಳು ‘ಧುರಂಧರ್ 2’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿವೆ. ಮೊದಲ ಸಿನಿಮಾಗೆ ಅಭೂತಪೂರ್ವ ಯಶಸ್ಸು ಸಿಕ್ಕಿದ್ದರೂ ಕೂಡ ಸೀಕ್ವೆಲ್​​ನಲ್ಲಿ ಹೆಚ್ಚಿನ ಬದಲಾವಣೆ ಮಾಡಲು ಚಿತ್ರತಂಡ ಮುಂದಾಗಿಲ್ಲ.

‘ಅರ್ಜುನ್ ರಾಮ್​​ಪಾಲ್ ಅಥವಾ ಯಾವುದೇ ಕಲಾವಿದರು ಧುರಂಧರ್ 2 ಸಿನಿಮಾಗಾಗಿ ಹೆಚ್ಚುವರಿ ಚಿತ್ರೀಕರಣ ಮಾಡುವುದಿಲ್ಲ. ಈ ಸಿನಿಮಾದ ಕಂಟೆಂಟ್ ಈಗಾಗಲೇ ಎಡಿಟ್ ಆಗಿ, ಅಂತಿಮಗೊಂಡಿದೆ. ಮಾರ್ಚ್ 19ರಂದು ಬಿಡುಗಡೆಯಾಗಲು ರೆಡಿ ಇದೆ’ ಎಂದು ಚಿತ್ರತಂಡದ ಮೂಲಗಳು ಮಾಹಿತಿ ನೀಡಿವೆ ಎಂದು ‘ಬಾಲಿವುಡ್ ಹಂಗಾಮಾ’ ವರದಿ ಮಾಡಿದೆ.

ಈ ಸಿನಿಮಾಗೆ ಆದಿತ್ಯ ಧಾರ್ ಅವರ ನಿರ್ದೇಶನ ಮಾಡಿದ್ದಾರೆ. ಈ ಮೊದಲು ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾಗೆ ನಿರ್ದೇಶನ ಮಾಡಿ ಅವರು ಸೈ ಎನಿಸಿಕೊಂಡಿದ್ದರು. ‘ಧುರಂಧರ್ 2’ ಸಿನಿಮಾದಲ್ಲಿ ‘ಉರಿ’ ಸಿನಿಮಾ ಹೀರೋ ವಿಕ್ಕಿ ಕೌಶಲ್ ಅವರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಕೂಡ ಗಾಸಿಪ್ ಹಬ್ಬಿತ್ತು. ಆದರೆ ಅದು ನಿಜವಲ್ಲ ಎಂದು ಚಿತ್ರತಂಡದ ಮೂಲಗಳು ಹೇಳಿವೆ.

ಇದನ್ನೂ ಓದಿ: ಜನಪ್ರಿಯತೆ ಎಫೆಕ್ಟ್: ಸತ್ತ ಪಾತ್ರವನ್ನು ಬದುಕಿಸಲಿದ್ದಾರಾ ‘ಧುರಂಧರ್ 2’ ನಿರ್ದೇಶಕ?

‘ಧುರಂಧರ್’ ಸಿನಿಮಾಗೆ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ಹಾಗಾಗಿ ‘ಧುರಂಧರ್ 2’ ಸಿನಿಮಾ ಮೇಲೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಮಾರ್ಚ್ 19ರಂದು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಕೂಡ ರಿಲೀಸ್ ಆಗುವುದರಿಂದ ಬಾಕ್ಸ್ ಆಫೀಸ್​ನಲ್ಲಿ ಪೈಪೋಟಿ ಏರ್ಪಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.