‘ಬ್ರಹ್ಮಾಸ್ತ್ರ’ಗೆ ಒಂದು ವರ್ಷ, ಬ್ರಹ್ಮಾಸ್ತ್ರ 2, 3 ಸಿನಿಮಾ ಅಪ್ಡೇಟ್ ಕೊಟ್ಟ ನಿರ್ದೇಶಕ
Ranbir Kapoor: 'ಬ್ರಹ್ಮಾಸ್ತ್ರ' ಸಿನಿಮಾ ಬಿಡುಗಡೆ ಆಗಿ ಇಂದಿಗೆ (ಸೆಪ್ಟೆಂಬರ್ 09) ಒಂದು ವರ್ಷಗಳಾಗಿವೆ. ಇದೇ ದಿನ ನಿರ್ದೇಶಕ ಅಯಾನ್ ಮುಖರ್ಜಿ ಕೆಲವು ಕಾರ್ಟೂನ್ ವಿಡಿಯೋ, ಚಿತ್ರಗಳನ್ನು ಹಂಚಿಕೊಂಡು, 'ಬ್ರಹ್ಮಾಸ್ತ್ರ 2 ಹಾಗೂ 3' ಸಿನಿಮಾಗಳ ಕಾರ್ಯ ಚಾಲ್ತಿಯಲ್ಲಿದೆ'' ಎಂದಿದ್ದಾರೆ.
ಕಳೆದ ವರ್ಷ ಹಿಟ್ ಸಿನಿಮಾಗಳಿಲ್ಲದೆ ಬಳಲಿದ್ದ ಬಾಲಿವುಡ್ನಲ್ಲಿ (Bollywood) ಸಣ್ಣ ಆಶಾವಾದ ಹುಟ್ಟಲು ಕಾರಣವಾದ ಸಿನಿಮಾ ರಣ್ಬೀರ್ ಕಪೂರ್ ನಟನೆಯ ‘ಬ್ರಹ್ಮಾಸ್ತ್ರ’. ಸಿನಿಮಾ ಬಗ್ಗೆ ಋಣಾತ್ಮಕ ವಿಮರ್ಶೆಗಳು ಸಾಲು-ಸಾಲಾಗಿ ಬಂದರೂ ಸಹ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ರಣ್ಬೀರ್ ಕಪೂರ್-ಆಲಿಯಾ ಭಟ್ ಸೇರಿದಂತೆ ಹಲವಾರು ದೊಡ್ಡ ನಟರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದ ಈ ಸಿನಿಮಾ ಬಿಡುಗಡೆ ಆಗಿ ಇಂದಿಗೆ (ಸೆಪ್ಟೆಂಬರ್ 09) ಒಂದು ವರ್ಷವಾಗಿದ್ದು, ಇದೇ ದಿನ ‘ಬ್ರಹ್ಮಾಸ್ತ್ರ 2 ಮತ್ತು 3’ ಸಿನಿಮಾಗಳ ಅಪ್ಡೇಟ್ ಅನ್ನು ನಿರ್ದೇಶಕ ನೀಡಿದ್ದಾರೆ.
ಸಿನಿಮಾದ ನಿರ್ದೇಶಕ ಅಯಾನ್ ಮುಖರ್ಜಿ, ಇಂದು ಇನ್ಸ್ಟಾಗ್ರಾಂನಲ್ಲಿ ಕೆಲವು ಕಾರ್ಟೂನ್ ಚಿತ್ರಗಳು, ವಿಡಿಯೋಗಳನ್ನು ಹಂಚಿಕೊಂಡಿದ್ದು, ಬ್ರಹ್ಮಾಸ್ತ್ರ 2 ಮತ್ತು 3 ಕೆಲಸ ಚಾಲ್ತಿಯಲ್ಲಿದೆ ಎಂದಿದ್ದಾರೆ. ಸದ್ಯಕ್ಕೆ ಬ್ರಹ್ಮಾಸ್ತ್ರ 2 ಮತ್ತು 3 ಸಿನಿಮಾಗಳ ಕಾನ್ಸೆಪ್ಟ್ ಆರ್ಟ್ ವರ್ಕ್ ನಡೆಯುತ್ತಿದ್ದು, ಕಾನ್ಸೆಪ್ಟ್ ಆರ್ಟ್ ವರ್ಕ್ ಮುಗಿದ ಕೂಡಲೇ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ.
ಅಯಾನ್ ಮುಖರ್ಜಿ ಈಗ ಹಂಚಿಕೊಂಡಿರುವ ಕಾರ್ಟೂನ್ ಚಿತ್ರ ಹಾಗೂ ವಿಡಿಯೋಗಳಲ್ಲಿ ಶಿವ ಭಕ್ತನೊಬ್ಬ ಆಯುಧ ಹಿಡಿದು ದೈತ್ಯಾಕಾರದ ಅಸುರನನ್ನು ಕೊಲ್ಲಲು ಯತ್ನಿಸುತ್ತಿರುವ ದೃಶ್ಯಗಳಿವೆ. ಆ ವ್ಯಕ್ತಿಗೆ ಮಹಿಳೆಯೊಬ್ಬಾಕೆ ಬೆಂಬಲವಾಗಿ ನಿಂತಿರುವುದು ಸಹ ಕಾಣುತ್ತಿದೆ. ‘ಬ್ರಹ್ಮಾಸ್ತ್ರ’ ಸಿನಿಮಾವು ಅಗ್ನಿ ಅಸ್ತ್ರ, ವಾಯು ಅಸ್ತ್ರ, ಜಲ ಅಸ್ತ್ರ ಹೀಗೆ ಬೇರೆ ಬೇರೆ ಆಯುಧಗಳ ಕುರಿತಾದ ಕತೆಯನ್ನು ಒಳಗೊಂಡಿತ್ತು. ರಣ್ಬೀರ್ ಅಗ್ನಿ ಅಸ್ತ್ರದ ಸಂರಕ್ಷಕನ ಪಾತ್ರದಲ್ಲಿ ನಟಿಸಿದ್ದರು.
ಇದನ್ನೂ ಓದಿ:ಕರಣ್ ಜೋಹರ್ ಜೊತೆ ಅಯಾನ್ ಮುಖರ್ಜಿ ಮುನಿಸು; ‘ಬ್ರಹ್ಮಾಸ್ತ್ರ’ ತಂಡದ ಕಿರಿಕ್ ಬಹಿರಂಗ
ಬ್ರಹ್ಮಾಸ್ತ್ರ 2 ಮತ್ತು 3 ಸಿನಿಮಾಗಳಲ್ಲಿಯೂ ವಿವಿಧ ಅಸ್ತ್ರಗಳು ಹಾಗೂ ಆ ಅಸ್ತ್ರಗಳನ್ನು ವಶಪಡಿಸಿಕೊಳ್ಳಲು ಅಸುರರು ಮಾಡುವ ಪ್ರಯತ್ನ ಹಾಗೂ ಅದನ್ನು ಅಸ್ತ್ರ ಸಂರಕ್ಷರು ವಿಫಲಗೊಳಿಸುತ್ತಾರೆ ಎಂಬ ಕತೆಯನ್ನು ಒಳಗೊಂಡಿರಲಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಬ್ರಹ್ಮಾಸ್ತ್ರ’ ಸಿನಿಮಾದ ಹಲವು ಲಿಂಕ್ಗಳು ‘ಬ್ರಹ್ಮಾಸ್ತ್ರ 2 ಮತ್ತು 3’ ಸಿನಿಮಾದಲ್ಲಿ ಇರಲಿವೆ. ‘ಬ್ರಹ್ಮಾಸ್ತ್ರ 2’ ಸಿನಿಮಾನಲ್ಲಿ ಆಲಿಯಾ ಭಟ್ ಬದಲಿಗೆ ದೀಪಿಕಾ ಪಡುಕೋಣೆ ನಾಯಕಿಯಾಗಿರಲಿದ್ದಾರೆ ಎನ್ನಲಾಗುತ್ತಿದೆ.
‘ಬ್ರಹ್ಮಾಸ್ತ್ರ 2’ ಸಿನಿಮಾವು ಈಗಾಗಲೇ ಬಿಡುಗಡೆ ಆಗಿರುವ ‘ಬ್ರಹ್ಮಾಸ್ತ್ರ’ ಸಿನಿಮಾದ ಪ್ರೀಕ್ವೆಲ್ ಆಗಿರಲಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಏನೇ ಆಗಲಿ ‘ಅಸ್ತ್ರ ವರ್ಸ್’ನ ಎಲ್ಲ ಸಿನಿಮಾಗಳನ್ನು ಅಯಾನ್ ಮುಖರ್ಜಿಯೇ ನಿರ್ದೇಶನ ಮಾಡಲಿದ್ದಾರೆ. ರಣ್ಬೀರ್ ಕಪೂರ್ ಅವರೇ ನಾಯಕನಾಗಿರಲಿದ್ದಾರೆ ಎನ್ನಲಾಗುತ್ತಿದೆ. ರಣ್ಬೀರ್ ಕಪೂರ್ ಪ್ರಸ್ತುತ ‘ಅನಿಮಲ್’ ಸಿನಿಮಾದ ಅಂತಿಮ ಘಟ್ಟದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಕೆಲಸಗಳು ಮುಗಿದ ಬಳಿಕ ‘ಬ್ರಹ್ಮಾಸ್ತ್ರ 2’ ಸಿನಿಮಾ ಪ್ರಾರಂಭವಾಗುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ