ಬಾಲಿವುಡ್ ನಟ ಇಮ್ರಾನ್ ಹಶ್ಮಿಯ ಚಿತ್ರಗಳೆಂದರೆ ಅದರಲ್ಲಿ ಕಿಸ್ಸಿಂಗ್ ಸೀನ್ ಗ್ಯಾರಂಟಿ ಎಂದು ನಂಬಿಕೊಂಡು ಚಿತ್ರಮಂದಿರಕ್ಕೆ ಪಡ್ಡೆ ಹುಡುಗರು ತೆರಳುತ್ತಿದ್ದ ಕಾಲವೊಂದಿತ್ತು. ಇದಕ್ಕೆ ತಕ್ಕನಾಗಿ ಇಮ್ರಾನ್ ಹಶ್ಮಿಗೆ ‘ಸೀರಿಯಲ್ ಕಿಸ್ಸರ್’ ಎಂಬ ಅಡ್ಡ ಹೆಸರೂ ಇತ್ತು. ತನ್ನ ಚಿತ್ರದ ಎಲ್ಲಾ ನಾಯಕ ನಟಿಯರೊಂದಿಗೂ ಕಿಸ್ಸಿಂಗ್ ದೃಶ್ಯದಲ್ಲಿ ಇಮ್ರಾನ್ ಭಾಗವಹಿಸುತ್ತಾರೆ ಎಂಬ ಮಾತೂ ಚಾಲ್ತಿಯಲ್ಲಿತ್ತು. ಆಗಿನ ಇಂತಹ ಅಡ್ಡ ಬಿರುದುಗಳ ಕುರಿತು ಇಮ್ರಾನ್ ಹಶ್ಮಿ ಮಾತನಾಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತನ್ನ ಆಗಿನ ಇಮೇಜ್ ಸೀರಿಯಲ್ ಕಿಸ್ಸರ್ ಮಾದರಿಯಲ್ಲಿಯೇ ಇತ್ತು. ಇದರಿಂದಾಗಿ ಒತ್ತಾಯಪೂರ್ವಕವಾಗಿ ಇಂತಹ ಚಿತ್ರಗಳಲ್ಲಿ ಕಾಣಿಸಿಕೊಳ್ಳಬೇಕಾಯಿತು ಎಂದಿದ್ದಾರೆ. ‘‘ನನ್ನ ವೃತ್ತಿ ಜೀವನದ ಮೊದಲ ಹತ್ತು ವರ್ಷಗಳಲ್ಲಿ ಇಂತಹ ಚಿತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದೆ. ವಾಸ್ತವವಾಗಿ ‘ಸೀರಿಯಲ್ ಕಿಸ್ಸರ್’ ಎಂದು ನಾನೇ ತಮಾಷೆಗೆ ಒಮ್ಮೆ ಹೇಳಿಕೊಂಡಿದ್ದೆ. ಆದರೆ ನಂತರದಲ್ಲಿ, ಎಲ್ಲರೂ ಅದೇ ಹೆಸರಿನಿಂದ ನನ್ನನ್ನು ಕರೆಯತೊಡಗಿದರು. ನಂತರ ಇದರ ಕುರಿತು ಬರಹಗಳು ಬಂದವು. ವಿಮರ್ಶೆಗಳು ಬಂದವು. ಈ ಕಾರಣದಿಂದ ನನ್ನ ಇತರ ವಿಚಾರಗಳು ಮೂಲೆಗುಂಪಾಗಿ ಚಿತ್ರದಲ್ಲಿ ಕಿಸ್ಸಿಂಗ್ ಸೀನ್ ಪ್ರಾಮುಖ್ಯತೆ ಪಡೆದುಕೊಂಡಿತು’’ ಎಂದಿದ್ದಾರೆ ಇಮ್ರಾನ್ ಹಶ್ಮಿ.
ಭಾರತದಂತಹ ಮಡಿವಂತಿಕೆಯ ದೇಶದಲ್ಲಿ ಮುಖ್ಯವಾಹಿನಿಯ ಚಿತ್ರಗಳಲ್ಲಿ ಚುಂಬನದ ದೃಶ್ಯಗಳನ್ನು ಪ್ರಾರಂಭಿಸಿದಾಗ ಅದು ದೇಶದಲ್ಲಿ ಮಾತಿನ ವಿಷಯವಾಗಿ ಬದಲಾಯಿತು ಎಂದು ಇಮ್ರಾನ್ ಹೇಳಿಕೊಂಡಿದ್ದಾರೆ. ‘‘2003ರ ಸಮಯದಲ್ಲಿ ನಾನು ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದಾಗ, ಹಸಿಬಿಸಿಯ ದೃಶ್ಯಗಳ ಬಗ್ಗೆ ಮಡಿವಂತಿಕೆ ಇತ್ತು. ಆದರೆ ಅಂತಹ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ ನಂತರ, ತನ್ನ ಚಿತ್ರದ ನಾಯಕಿಯರಿಗೆಲ್ಲರೊಂದಿಗೆ ಕಿಸ್ಸಿಂಗ್ ದೃಶ್ಯಗಳಲ್ಲಿ ಭಾಗವಹಿಸುವ ನನ್ನ ಕುರಿತು ನೋಡುಗರಿಗೆ ಇದು ‘ಆಹಾ’ ಕ್ಷಣದಂತೆ ಅನ್ನಿಸಿರಬೇಕು. ಆದ್ದರಿಂದಲೇ ಆಗ ಇದು ಮಾತಿನ ವಿಷಯವಾಯಿತು’’ ಎಂದು ಇಮ್ರಾನ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಿಸ್ಸಿಂಗ್ ಇಮೇಜ್ನಿಂದ ಹೊರಬಂದ ಕುರಿತೂ ಇಮ್ರಾನ್ ಹಶ್ಮಿ ಮಾತನಾಡಿದ್ದಾರೆ. ‘‘ಇಂತಹ ಚಿತ್ರಗಳಿಂದ ನನಗೆ ಸಾಕಾಗಿ ಹೋಗಿತ್ತು. ಆದರೆ, ಬಾಕ್ಸಾಫೀಸ್ನಲ್ಲಿ ಈ ಚಿತ್ರಗಳು ಚೆನ್ನಾಗಿ ಗಳಿಸುತ್ತಿದ್ದವು. ಒಬ್ಬ ನಟನಾಗಿ ನನಗಿನ್ನೂ ಸವಾಲಿನ ಪಾತ್ರಗಳ ಅವಶ್ಯಕತೆ ಇತ್ತು. ಆದರೆ, ಇಂತಹ ಪಾತ್ರಗಳೇ ಅರಸಿ ಅರಸಿ ನನ್ನತ್ತ ಬರುತ್ತಿದ್ದವು. ನಮ್ಮ ಚಿತ್ರರಂಗದಲ್ಲಿ ಎಲ್ಲರಿಗೂ ಜೆರಾಕ್ಸ್ ಕಾಪಿಗಳೇ ಬೇಕು. ಸೃಜನಾತ್ಮಕವಾಗಿ ಯಾರಿಗೂ ಹೊಸದು ಬೇಕಿರಲಿಲ್ಲ’’ ಎಂದು ಅವರು ಬೇಸರ ಹೊರಹಾಕಿದ್ದಾರೆ. ಅಂತಹ ಸಮಯದಲ್ಲಿ ಅವರಿಗೆ ‘ಶಾಂಘೈ’ ಹಾಗೂ ‘ಟೈಗರ್’ ಚಿತ್ರಗಳು ಹೊಸ ಇಮೇಜ್ ತಂದುಕೊಟ್ಟವಂತೆ. ಅಲ್ಲಿಂದ ನಟನಾಗಿ ಬದುಕು ಹೊಸ ತಿರುವು ಪಡೆಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ಇಮ್ರಾನ್ ಹಶ್ಮಿ ‘ಚೆಹ್ರೆ’ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಕುರಿತು ಈಗಾಗಲೇ ಸಾಕಷ್ಟು ನಿರೀಕ್ಷೆಗಳು ಮೂಡಿವೆ. ಇದರಲ್ಲಿ ಅಮಿತಾಭ್ ಬಚ್ಚನ್, ಕ್ರಿಸ್ಟಲ್ ಡಿಸೋಜಾ, ರಿಯಾ ಚಕ್ರವರ್ತಿ ಮೊದಲಾದವರು ಬಣ್ಣ ಹಚ್ಚಲಿದ್ದಾರೆ. ಚಿತ್ರವನ್ನು ರೂಮಿ ಜಾಫ್ರಿ ನಿರ್ದೇಶಿಸಿದ್ದು, ಆಗಸ್ಟ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ:
ಸಲ್ಮಾನ್ ಖಾನ್ನನ್ನು ವಿಮಾನ ನಿಲ್ದಾಣದಲ್ಲಿ ತಡೆದು ವೃತ್ತಿಪರತೆ ಮೆರೆದ ಅಧಿಕಾರಿಯನ್ನು ಪುರುಸ್ಕರಿಸಿದ ಸಿಐಎಸ್ಎಫ್
ಬಿಗ್ಬಾಸ್ ಒಟಿಟಿ ನಿರೂಪಕ ಕರಣ್ ಜೋಹರ್ ವಿರುದ್ಧ ಜೋರಾಯ್ತು ಅಸಮಾಧಾನ; ಕಾರಣವೇನು?
(Emraan Hashmi opens up about his serial kisser fame)