ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರಿಗೆ ದಿನ ಕಳೆದಂತೆ ಸಂಕಷ್ಟ ಹೆಚ್ಚುತ್ತಿದೆ. ಉದ್ಯಮಿಗಳಿಗೆ ಬಹುಕೋಟಿ ರೂಪಾಯಿ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ (Sukesh Chandrasekhar) ಜತೆಗೆ ಜಾಕ್ವೆಲಿನ್ ಕೂಡ ಕೈ ಜೋಡಿಸಿದ್ದಾರೆ ಎನ್ನಲಾಗುತ್ತಿದೆ. ಅವರಿಬ್ಬರ ನಡುವೆ ಲವ್ವಿಡವ್ವಿ ನಡೆದಿತ್ತು ಎಂಬುದಕ್ಕೆ ಹಲವು ಫೋಟೋಗಳು ಸಾಕ್ಷಿ ಒದಗಿಸುತ್ತಿವೆ. ಈಗ ಜಾರಿ ನಿರ್ದೇಶನಾಲಯ (Enforcement Directorate) ಜಾಕ್ವೆಲಿನ್ಗೆ ಸುಕೇಶ್ ಕಡೆಯಿಂದ ಸಿಕ್ಕಂತಹ ಎಲ್ಲಾ ಉಡುಗೊರೆಗಳನ್ನು ವಶಕ್ಕೆ ಪಡೆದಿದೆ.
ಉದ್ಯಮಿಗಳಿಗೆ ಬರೋಬ್ಬರಿ 200 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪವನ್ನು ಸುಕೇಶ್ ಚಂದ್ರಶೇಖರ್ ಎದುರಿಸುತ್ತಿದ್ದಾರೆ. 2021ರ ಜನವರಿಯಲ್ಲಿ ಸುಕೇಶ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ನಡುವೆ ಸ್ನೇಹ ಬೆಳೆದಿತ್ತು. ಬಳಿಕ ಅವರು ನಿರಂತರ ಸಂಪರ್ಕದಲ್ಲಿ ಇದ್ದರು. ಅಲ್ಲಿಂದೀಚೆಗೆ ಅಂದಾಜು 10 ಕೋಟಿ ರೂ. ಬೆಲೆ ಬಾಳುವ ಉಡುಗೊರೆಗಳನ್ನು ಸುಕೇಶ್ನಿಂದ ಜಾಕ್ವೆಲಿನ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಚಿನ್ನಾಭರಣಗಳು, ಡೈಮಂಡ್ ಒಡವೆಗಳು, ತಲಾ 9 ಲಕ್ಷ ರೂ. ಬೆಲೆಯ 4 ಪರ್ಷಿಯನ್ ಬೆಕ್ಕುಗಳು, 52 ಲಕ್ಷ ರೂ. ಬೆಲೆಯ ಕುದುರೆಯನ್ನು ಜಾಕ್ವೆಲಿನ್ಗೆ ಸುಕೇಶ್ ಗಿಫ್ಟ್ ಆಗಿ ನೀಡಿದ್ದರು ಎಂಬುದನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಈಗ ಇವುಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇನ್ನು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ತೀವ್ರವಾಗಿದೆ. ಈ ಸಂದರ್ಭದಲ್ಲಿ ಭಾರತವನ್ನು ಬಿಟ್ಟು ಬೇರೆಡೆಗೆ ತೆರಳದಂತೆ ಜಾಕ್ವೆಲಿನ್ ಫರ್ನಾಂಡಿಸ್ಗೆ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ವಂಚನೆ ಆರೋಪದಲ್ಲಿ ಅರೆಸ್ಟ್ ಆಗಿ ಸುಕೇಶ್ ಜೈಲು ಸೇರಿದ್ದಾಗಲೂ ಅವರ ಜತೆ ಮೊಬೈಲ್ ಮೂಲಕ ಜಾಕ್ವೆಲಿನ್ ಫರ್ನಾಂಡಿಸ್ ಸಂಪರ್ಕದಲ್ಲಿ ಇದ್ದರು. ಜಾಮೀನು ಪಡೆದು ಹೊರಬಂದಾಗ ಚೆನ್ನೈನ ಐಷಾರಾಮಿ ಹೋಟೆಲ್ನಲ್ಲಿ ಇಬ್ಬರೂ ವಾಸವಾಗಿದ್ದರು ಎಂಬ ಮಾಹಿತಿ ಕೂಡ ಸಿಕ್ಕಿದೆ. ಜಾಕ್ವೆಲಿನ್ ರೀತಿಯೇ ನಟಿ ನೋರಾ ಫತೇಹಿ ಕೂಡ ಸುಕೇಶ್ ಅವರಿಂದ ಐಷಾರಾಮಿ ಉಡುಗೊರೆಗಳನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ. ಆದರೆ, ನೋರಾ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಇದನ್ನೂ ಓದಿ: Conman Sukesh: ತೆರೆಯ ಮೇಲೆ ಜಾಕ್ವೆಲಿನ್- ಸುಕೇಶ್ ಕಹಾನಿ?; ನೋರಾ- ಸುಕೇಶ್ ವೈಯಕ್ತಿಕ ಚಾಟ್ಸ್ ಕೂಡ ಲೀಕ್
‘ವಿಕ್ರಾಂತ್ ರೋಣ’ ನಟಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ; ದೇಶ ಬಿಟ್ಟು ಹೋಗುವಂತಿಲ್ಲ ಜಾಕ್ವೆಲಿನ್ ಫರ್ನಾಂಡಿಸ್
Published On - 8:12 am, Fri, 24 December 21