ಸಲ್ಮಾನ್ ಖಾನ್ (Salman Khan) ನಿನ್ನೆ (ಡಿಸೆಂಬರ್ 27) ಜನ್ಮದಿನ ಆಚರಿಸಿಕೊಂಡಿದ್ದಾರೆ. ಬಾಲಿವುಡ್ನ ಭಾಯಿಜಾನ್ ಎಂದು ಕರೆಯಲ್ಪಡುವ ಸಲ್ಲು 56ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟನಿಗೆ ನಿನ್ನೆ ಭಾರತೀಯ ಚಿತ್ರರಂಗ, ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದುಬಂದಿತ್ತು. ಕತ್ರಿನಾ ಕೈಫ್, ಸೋನಮ್ ಕಪೂರ್, ಮಾಧುರಿ ದೀಕ್ಷಿತ್ ಸೇರಿದಂತೆ ಹಲವು ಖ್ಯಾತ ತಾರೆಯರು ಸಲ್ಲುಗೆ ಶುಭಾಶಯ ಕೋರಿದ್ದರು. ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಕೂಡ ಸಲ್ಮಾನ್ಗೆ ವಿಶ್ ಮಾಡಿ ಶುಭ ಹಾರೈಸಿದ್ದರು. ಹುಟ್ಟುಹಬ್ಬದ ಸಂಭ್ರಮಕ್ಕೆ ಸಲ್ಮಾನ್ ನಿನ್ನೆ ರಾತ್ರಿ ಅವರ ಪನ್ವೆಲ್ ಫಾರ್ಮ್ಹೌಸ್ನಲ್ಲಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು. ಬಾಲಿವುಡ್ ತಾರೆಯರು ಸೇರಿದಂತೆ ಹಲವರು ಆಗಮಿಸಿ ಸಲ್ಮಾನ್ ಆತಿಥ್ಯ ಸ್ವೀಕರಿಸಿದರು. ಈ ಪಾರ್ಟಿಯ ಮಸ್ತ್ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ.
ಬಾಲಿವುಡ್ ನಟ ರಿತೇಶ್ ದೇಶ್ಮುಖ್ (Riteish Deshmukh) ತಮ್ಮ ಪತ್ನಿ ಜೆನಿಲಿಯಾ (Genelia Deshmukh) ಜತೆ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಲ್ಮಾನ್ ಹಾಗೂ ಜೆನಿಲಿಯಾ ಹಾಡೊಂದಕ್ಕೆ ಸಖತ್ ಸ್ಟೆಪ್ ಹಾಕಿದ್ದಾರೆ. ಈ ಸಂದರ್ಭದ ವಿಡಿಯೋವನ್ನು ರಿತೇಶ್ ಸೆರೆಹಿಡಿದು, ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ರಿತೇಶ್ ಸಲ್ಮಾನ್ಗೆ ಶುಭಾಶಯ ಕೋರಿದ್ದಾರೆ.
‘‘ಅತ್ಯುತ್ತಮ ಮನಸ್ಸನ್ನು ಹೊಂದಿರುವ ಸಲ್ಮಾನ್ಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಸಂತೋಷ, ಪ್ರೀತಿ ಮತ್ತು ಉತ್ತಮ ಆರೋಗ್ಯ ನೀಡಲಿ’’ ಎಂದು ಬರೆದಿರುವ ರಿತೇಶ್, ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಜೆನಿಲಿಯಾ ಹಾಗೂ ಸಲ್ಮಾನ್ ಸ್ಟೆಪ್ಸ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ರಿತೇಶ್ ಹಂಚಿಕೊಂಡ ವಿಡಿಯೋ ಇಲ್ಲಿದೆ:
ಜೆನಿಲಿಯಾ ಹಾಗೂ ಸಲ್ಮಾನ್ 2014ರಲ್ಲಿ ತೆರೆಗೆ ಬಂದ ‘ಜೈ ಹೋ’ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಸಲ್ಮಾನ್ ಪ್ರಸ್ತುತ ‘ಟೈಗರ್ 3’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಯಶಸ್ವಿ ಚಿತ್ರ ‘ಬಜರಂಗಿ ಭಾಯಿಜಾನ್’ನ ಸೀಕ್ವೆಲ್ ಘೋಷಣೆಯಾಗಿದ್ದು, ಅದಕ್ಕೆ ‘ಪವನ ಪುತ್ರ ಭಾಯಿಜಾನ್’ ಎಂದು ಹೆಸರಿಡಲಾಗಿದೆ. ಇದಲ್ಲದೇ ಸಲ್ಮಾನ್ ಬತ್ತಳಿಕೆಯಲ್ಲಿ ‘ನೋ ಎಂಟ್ರಿ’ ಚಿತ್ರದ ಸೀಕ್ವೆಲ್ ಕೂಡ ಇದ್ದು, ಟೈಗರ್ 3 ಮುಗಿದ ಬಳಿಕ ಅದನ್ನು ಆರಂಭಿಸಲಿದ್ದಾರೆ.
ಇದನ್ನೂ ಓದಿ:
Salman Khan: ‘ಪವನ ಪುತ್ರ ಭಾಯಿಜಾನ್’; ಸಲ್ಮಾನ್ ಖಾನ್ ಹೊಸ ಸಿನಿಮಾದ ಶೀರ್ಷಿಕೆ ಬಹಿರಂಗ
Atrangi Re: ಮಗಳ ಚಿತ್ರ ನೋಡಿ ಕಣ್ಣೀರು ಹಾಕಿದ ಸೈಫ್- ಅಮೃತಾ; ಇದೊಂದು ರೀತಿಯ ಸಾಧನೆ ಎಂದ ಸಾರಾ ಅಲಿ ಖಾನ್