ಖ್ಯಾತ ನಿರ್ಮಾಪಕ, ಸಿಬಿಎಫ್‌ಸಿ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ನಿಧನ

ಬಾಲಿವುಡ್‌ನ ಯಶಸ್ವಿ ನಿರ್ಮಾಪಕ ಪಹ್ಲಾಜ್ ನಿಹಲಾನಿ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ವಿಭಿನ್ನ ಶೈಲಿಯ ಸಿನಿಮಾಗಳನ್ನು ಅವರು ಚಿತ್ರರಂಗಕ್ಕೆ ನೀಡಿದ್ದರು. ಪಹ್ಲಾಜ್ ನಿಹಲಾನಿ ಅವರು ಸೆನ್ಸಾರ್ ಮಂಡಳಿಯ (CBFC) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆಗ ಅವರು ತೆಗೆದುಕೊಂಡ ಕಠಿಣ ನಿರ್ಧಾರಗಳು ವಿವಾದಕ್ಕೆ ಕಾರಣ ಆಗಿತ್ತು.

ಖ್ಯಾತ ನಿರ್ಮಾಪಕ, ಸಿಬಿಎಫ್‌ಸಿ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ನಿಧನ
Pahlaj Nihalani
Image Credit source: IMDb

Updated on: Jun 04, 2026 | 5:21 PM

ಬಾಲಿವುಡ್‌ನ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC) ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ (76) ಅವರು ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಹಿಂದಿ ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರಿಯರಾಗಿದ್ದ ಪಹ್ಲಾಜ್ ನಿಹಲಾನಿ (Pahlaj Nihalani) ಅವರು ಪತ್ನಿ ನೀತಾ ಹಾಗೂ ವಿಶಾಲ್, ದೀಪೇಶ್, ಚಿರಾಗ್ ಎಂಬ ಮೂವರು ಪುತ್ರರನ್ನು ಅಗಲಿದ್ದಾರೆ.

ಹಿಂದಿ ಚಿತ್ರರಂಗದ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ನಿಹಲಾನಿ ಅವರು ಹಲವು ಸೂಪರ್ ಹಿಟ್ ಕಮರ್ಷಿಯಲ್ ಚಲನಚಿತ್ರಗಳನ್ನು ನಿರ್ಮಿಸಿದ್ದರು. ಗೋವಿಂದ ನಟನೆಯ ‘ಆಂಖೇ’, ‘ಅಂದಾಜ್’, ‘ತಲಾಶ್’, ‘ರಂಗೀಲಾ ರಾಜಾ’ ಮತ್ತು ‘ಜೂಲಿ 2’ ಸೇರಿದಂತೆ ವಿಭಿನ್ನ ಶೈಲಿಯ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಪಹ್ಲಾಜ್ ನಿಹಲಾನಿ ಅವರು 2015ರಿಂದ 2017ರವರೆಗೆ ಸೆನ್ಸಾರ್ ಮಂಡಳಿಯ (CBFC) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ಅಧಿಕಾರಾವಧಿಯು ಚಿತ್ರರಂಗದಲ್ಲಿ ತೀವ್ರ ಚರ್ಚೆ ಮತ್ತು ವಿವಾದಗಳಿಗೆ ಕಾರಣವಾಗಿತ್ತು. ಸಿನಿಮಾಗಳ ಸೆನ್ಸಾರ್‌ಶಿಪ್ ಹಾಗೂ ಕತ್ತರಿ ಪ್ರಯೋಗಕ್ಕೆ ಸಂಬಂಧಿಸಿದಂತೆ ಇವರು ತೆಗೆದುಕೊಂಡ ಕಠಿಣ ನಿರ್ಧಾರಗಳು ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಆಕ್ರೋಶ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದ್ದವು. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಸುದ್ದಿಯಾದ ಸೆನ್ಸಾರ್ ಮಂಡಳಿಯ ಮುಖ್ಯಸ್ಥರಲ್ಲಿ ಇವರು ಒಬ್ಬರಾಗಿದ್ದರು.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಖ್ಯಾತ ಕಿರುತೆರೆ ನಟ ನಿಧನ, ಮೂವರ ಸ್ಥಿತಿ ಗಂಭೀರ

ಪಹ್ಲಾಜ್ ನಿಹಲಾನಿ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಮುಂಬೈನಲ್ಲೇ ಇಂದು (ಜೂನ್ 4) ಅಂತ್ಯಕ್ರಿಯೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 4:53 pm, Thu, 4 June 26

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us