ನಟ ಸನ್ನಿ ಡಿಯೋಲ್ (Sunny Deol) ಅವರು ಒಂದಷ್ಟು ವರ್ಷಗಳ ಕಾಲ ನಿರೀಕ್ಷಿತ ಮಟ್ಟದ ಗೆಲುವು ಸಿಗದೇ ಕಷ್ಟಪಡುತ್ತಿದ್ದರು. ಆದರೆ 2023ರಲ್ಲಿ ಅವರ ಲಕ್ ಬದಲಾಗಿದೆ. ಅವರು ನಟಿಸಿದ ‘ಗದರ್ 2’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಆ ಬಳಿಕ ಅವರಿಗೆ ಇರುವ ಡಿಮ್ಯಾಂಡ್ ಕೂಡ ಹೆಚ್ಚಿದೆ. ಮುಂಬರುವ ಸಿನಿಮಾಗಳಿಗೆ ಸನ್ನಿ ಡಿಯೋಲ್ ಅವರು ಬಹುಕೋಟಿ ರೂಪಾಯಿ ಸಂಭಾವನೆ (Sunny Deol Remuneration) ಪಡೆಯುತ್ತಿದ್ದಾರೆ. ಈ ಕುರಿತಾಗಿ ಬಾಲಿವುಡ್ ಅಂಗಳಲ್ಲಿ ಒಂದು ಹೊಸ ಸುದ್ದಿ ಕೇಳಿಬರುತ್ತಿದೆ. ಸನ್ನಿ ಡಿಯೋಲ್ ಅವರು ಈಗ ಬರೋಬ್ಬರಿ 50 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿ ಆಗಿದೆ. ಅಂದಹಾಗೆ, ಅವರು ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವುದು ‘ಬಾರ್ಡರ್ 2’ (Border 2) ಚಿತ್ರಕ್ಕಾಗಿ!
ಚಿತ್ರರಂಗದಲ್ಲಿ ಸೀಕ್ವೆಲ್ಗಳು ಮೋಡಿ ಮಾಡುತ್ತಿವೆ. ‘ಗದರ್’ ಚಿತ್ರದ ಸೀಕ್ವೆಲ್ ಆದಂತಹ ‘ಗದರ್ 2’ ಸಿನಿಮಾ ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ 525 ಕೋಟಿ ರೂಪಾಯಿ ಗಳಿಸಿ ಬೀಗಿತು. ಅದರಿಂದ ಸನ್ನಿ ಡಿಯೋಲ್ ಅವರ ಚಾರ್ಮ್ ಹೆಚ್ಚಿತು. ಹಾಗಾಗಿ ಸನ್ನಿ ಡಿಯೋಲ್ ನಟನೆಯ ಇನ್ನುಳಿದ ಸೂಪರ್ ಹಿಟ್ ಸಿನಿಮಾಗಳಿಗೆ ಸೀಕ್ವೆಲ್ ಮಾಡಲು ಪ್ಲ್ಯಾನ್ ಸಿದ್ಧವಾಗಿದೆ. ಆ ಪೈಕಿ ‘ಬಾರ್ಡರ್ 2’ ಚಿತ್ರಕ್ಕೆ ಹೆಚ್ಚು ಬೇಡಿಕೆ ಬಂದಿದೆ. ಈ ಸಿನಿಮಾ ಮಾಡಲು ಈಗಾಗಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಸನ್ನಿ ಡಿಯೋಲ್ ಬಳಿಕ ಅಬ್ಬರಿಸಲು ಸಜ್ಜಾದ ಬಾಬಿ ಡಿಯೋಲ್; ‘ಅನಿಮಲ್’ ಪೋಸ್ಟರ್ ವೈರಲ್
‘ಬಾರ್ಡರ್’ ಸಿನಿಮಾ 1997ರಲ್ಲಿ ತೆರೆಕಂಡಿತ್ತು. ಸನ್ನಿ ಡಿಯೋಲ್, ಜಾಕಿ ಶ್ರಾಫ್, ಅಕ್ಷಯ್ ಖನ್ನಾ, ಸುನೀಲ್ ಶೆಟ್ಟಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಈಗ ಮತ್ತೆ ‘ಬಾರ್ಡರ್ 2’ ಸಿನಿಮಾದಲ್ಲಿ ಸನ್ನಿ ಡಿಯೋಲ್ ಅವರು ಮುಖ್ಯ ಭೂಮಿಕೆ ನಿಭಾಯಿಸಲಿದ್ದಾರೆ. ಅವರ ಜೊತೆ ಆಯುಷ್ಮಾನ್ ಖುರಾನಾ, ಅಹಾನ್ ಶೆಟ್ಟಿ ಮುಂತಾದವರು ನಟಿಸಲಿದ್ದಾರೆ. ದೊಡ್ಡ ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಿಸಲು ಜೆಪಿ ದತ್ತ ಮತ್ತು ಭೂಷಣ್ ಕುಮಾರ್ ಅವರು ಮುಂದಾಗಿದ್ದಾರೆ.
ಇದನ್ನೂ ಓದಿ: ‘ಇದು ನನ್ನ ಜಗತ್ತಲ್ಲ ಅನ್ನೋದು ಅರಿವಾಗಿದೆ’; ರಾಜಕೀಯ ತೊರೆಯುವ ಸೂಚನೆ ಕೊಟ್ಟ ಸನ್ನಿ ಡಿಯೋಲ್
‘ಗದರ್ 2’ ಗೆದ್ದ ಬಳಿಕ ಸನ್ನಿ ಡಿಯೋಲ್ ಅವರು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಅವರು 50 ಕೋಟಿ ರೂಪಾಯಿ ಪಡೆಯುತ್ತಿರುವುದು ಮಾತ್ರವಲ್ಲದೇ ಸಿನಿಮಾದ ಲಾಭದಲ್ಲೂ ಪಾಲು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಯುದ್ಧದ ಕಥಾಹಂದರ ಹೊಂದಿರುವ ಅತಿ ದೊಡ್ಡ ಚಿತ್ರವಾಗಿ ಈ ಸಿನಿಮಾ ಮೂಡಿಬರಲಿದೆ. ಇದಲ್ಲದೇ, ಆಮಿರ್ ಖಾನ್ ನಿರ್ಮಾಣ ಮಾಡುತ್ತಿರುವ ‘ಲಾಹೋರ್ 1947’ ಸಿನಿಮಾದಲ್ಲೂ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ. ಆ ಸಿನಿಮಾದ ಬಗ್ಗೆಯೂ ಹೈಪ್ ಸೃಷ್ಟಿ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.