‘ಇದು ನನ್ನ ಜಗತ್ತಲ್ಲ ಅನ್ನೋದು ಅರಿವಾಗಿದೆ’; ರಾಜಕೀಯ ತೊರೆಯುವ ಸೂಚನೆ ಕೊಟ್ಟ ಸನ್ನಿ ಡಿಯೋಲ್
‘ಸಂಸತ್ತಿಗೆ ಹೋಗೋದು ನಿಜವಾಗಿಯೂ ಕಡಿಮೆಯಾಗಿದೆ. ಇದು ಒಳ್ಳೆಯದು ಎಂದು ನಾನು ಹೇಳುತ್ತಿಲ್ಲ. ನಾನು ರಾಜಕೀಯಕ್ಕೆ ಬಂದಾಗ, ಇದು ನನ್ನ ಪ್ರಪಂಚವಲ್ಲ ಎಂದು ನಾನು ಅರಿತುಕೊಂಡೆ’ ಎಂದಿದ್ದಾರೆ ಸನ್ನಿ ಡಿಯೋಲ್. ಈ ಮೂಲಕ ರಾಜಕೀಯ ತೊರೆಯುವ ಸೂಚನೆ ಕೊಟ್ಟಿದ್ದಾರೆ.
ಸನ್ನಿ ಡಿಯೋಲ್ (Sunny Deo) ಅವರು ಚಿತ್ರರಂಗ ಹಾಗೂ ರಾಜಕೀಯ ಎರಡರಲ್ಲೂ ತೊಡಗಿಕೊಂಡಿದ್ದಾರೆ. ನಟನಾಗಿ ಯಶಸ್ಸು ಕಂಡ ಬಳಿಕ ಅವರು ರಾಜಕೀಯಕ್ಕೆ ಕಾಲಿಟ್ಟರು. ಅಲ್ಲಿ ಅವರಿಗೆ ಯಶಸ್ಸು ಸಿಕ್ಕಿತು. ಅವರು ಸಂಸದರಾಗಿ ಆಯ್ಕೆ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸನ್ನಿ ಡಿಯೋಲ್ ಅವರು ಚಿತ್ರರಂಗದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿಲ್ಲ. ವರ್ಷಕ್ಕೆ ಒಂದು ಸಿನಿಮಾ ಮಾತ್ರ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅದೇ ರೀತಿ ಅವರು ಸಂಸತ್ತಿನಲ್ಲೂ ಕಾಣಿಸಿದ್ದು ಕಡಿಮೆ. ಈಗ ಅವರು ರಾಜಕೀಯ ತೊರೆಯುವ ಸೂಚನೆ ನೀಡಿದ್ದಾರೆ. ‘ರಾಜಕೀಯ ನನ್ನ ಜಗತ್ತಲ್ಲ’ ಎಂದಿದ್ದಾರೆ.
ಸನ್ನಿ ಡಿಯೋಲ್ ಅವರು ‘ಆಪ್ ಕಿ ಅದಾಲತ್’ ಶೋನಲ್ಲಿ ಭಾಗಿ ಆಗಿದ್ದರು. ಸಂಸತ್ತಿನಲ್ಲಿ ಹಾಜರಿ ಕಡಿಮೆ ಇರುವುದು ಮತ್ತು 2024ರ ಚುನಾವಣೆ ಬಗ್ಗೆ ಕೇಳಲಾಗಿದೆ. ಇದಕ್ಕೆ ಅವರು ನೇರವಾಗಿ ಉತ್ತರಿಸಿದ್ದಾರೆ. ‘ಸಂಸತ್ತಿಗೆ ಹೋಗೋದು ನಿಜವಾಗಿಯೂ ಕಡಿಮೆಯಾಗಿದೆ. ಇದು ಒಳ್ಳೆಯದು ಎಂದು ನಾನು ಹೇಳುತ್ತಿಲ್ಲ. ನಾನು ರಾಜಕೀಯಕ್ಕೆ ಬಂದಾಗ, ಇದು ನನ್ನ ಪ್ರಪಂಚವಲ್ಲ ಎಂದು ನಾನು ಅರಿತುಕೊಂಡೆ’ ಎಂದಿದ್ದಾರೆ ಸನ್ನಿ.
‘ನಾನು ನನ್ನ ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಅದನ್ನು ಮಾಡುತ್ತೇನೆ. ಒಂದೊಮ್ಮೆ ನಾನು ಸಂಸತ್ತಿಗೆ ಹೋದರೂ, ಹೋಗದಿದ್ದರೂ ಅದು ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸದ ಮೇಲೆ ಪರಿಣಾಮ ಬೀರುವುದಿಲ್ಲ. ನಾನು ಸಂಸತ್ತಿಗೆ ಹೋದಾಗ ಸಮಸ್ಯೆಗಳನ್ನು ಎದುರಿಸುತ್ತೇನೆ. ನಟನಾಗಿ ನೀವು ಎಲ್ಲಿಗೆ ಹೋದರೂ ಜನರು ನಿಮ್ಮನ್ನು ಸುತ್ತುವರಿಯುತ್ತಾರೆ. ಇದರಿಂದ ಭದ್ರತಾ ಲೋಪವಾಗುತ್ತದೆ. ನನ್ನ ಕ್ಷೇತ್ರಕ್ಕೆ ನಾನು ಮಾಡಿದ ಕೆಲಸಗಳ ಪಟ್ಟಿ ನನ್ನ ಬಳಿ ಇದೆ. ಮಾಡಿದ ಕೆಲಸವನ್ನು ಪ್ರಚಾರ ಮಾಡುವುದರಲ್ಲಿ ನನಗೆ ಆಸಕ್ತಿ ಇಲ್ಲ. ರಾಜಕೀಯ ನನಗೆ ಸರಿಹೊಂದದ ವೃತ್ತಿ’ ಎಂದಿದ್ದಾರೆ ಅವರು.
2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೀರೇ ಎಂದು ಕೇಳಲಾಯಿತು. ಅದಕ್ಕೆ ‘ಇಲ್ಲ’ ಎನ್ನುವ ಉತ್ತರ ಬಂದಿದೆ. ‘ಪ್ರಧಾನಿ ನರೇಂದ್ರ ಮೋದಿ ಅವರು ನಿಮ್ಮ ಬಳಿ ಸ್ಪರ್ಧೆ ಮಾಡುವಂತೆ ಕೇಳಿದರೆ ಏನು ಮಾಡುತ್ತೀರಿ’ ಎಂದೂ ಕೇಳಲಾಯಿತು. ‘ಸಿನಿಮಾ ಮೂಲಕ ನಾನು ದೇಶ ಸೇವೆ ಮಾಡುತ್ತಿದ್ದೇನೆ ಎಂಬುದು ಮೋದಿ ಅವರಿಗೂ ತಿಳಿದಿದೆ’ ಎಂದಿದ್ದಾರೆ.
ಇದನ್ನೂ ಓದಿ: ಶಾರುಖ್ ಖಾನ್-ಸನ್ನಿ ಡಿಯೋಲ್ ವೈರತ್ವ ಅಂತ್ಯ; ಮುಕ್ತವಾಗಿ ಮಾತನಾಡಿದ ‘ಗದರ್ 2’ ಹೀರೋ
ಸನ್ನಿ ಅವರು 2019ರ ಏಪ್ರಿಲ್ನಲ್ಲಿ ಬಿಜೆಪಿ ಸೇರಿದರು. ಪಂಜಾಬ್ನ ಗುರದಾಸ್ಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಅವರ ನಟನೆಯ ‘ಗದರ್ 2’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಗೆದ್ದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ