ಜನಪ್ರಿಯ ಗಾಯಕ ಪಂಕಜ್ ಉಧಾಸ್ (Pankaj Udhas) ಅವರು ನಿಧನರಾಗಿದ್ದಾರೆ. ಹಲವು ತಿಂಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. 73ರ ಪ್ರಾಯದ ಅವರು ಇಂದು (ಫೆಬ್ರವರಿ 26) ಕೊನೆಯುಸಿರು ಎಳೆದರು. ಅವರ ನಿಧನದ (Pankaj Udhas Death) ಸುದ್ದಿಯನ್ನು ಪುತ್ರಿ ನಯಾಬ್ ಉಧಾಸ್ ಖಚಿತಪಡಿಸಿದ್ದಾರೆ. 1980ರ ದಶಕದಲ್ಲಿ ಪಂಕಜ್ ಉಧಾಸ್ ಅವರು ಗಝಲ್ ಗಾಯನದ ಮೂಲಕ ಫೇಮಸ್ ಆಗಿದ್ದರು. ಬಳಿಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಬಾಲಿವುಡ್ನ ಅನೇಕ ಸೂಪರ್ ಹಿಟ್ ಹಾಡುಗಳಿಗೆ (Pankaj Udhas Songs) ಅವರು ಧ್ವನಿ ನೀಡಿದ್ದರು. ಕಿಚ್ಚ ಸುದೀಪ್ ಅಭಿನಯದ ‘ಸ್ಪರ್ಶ’ ಸಿನಿಮಾದ ಗೀತೆಗಳನ್ನು ಹಾಡುವ ಮೂಲಕ ಕನ್ನಡಿಗರನ್ನು ಅವರು ರಂಜಿಸಿದ್ದರು.
ಪಂಕಜ್ ಉಧಾಸ್ ಅವರ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ‘ಸ್ಪರ್ಶ’ ಸಿನಿಮಾದಲ್ಲಿನ ‘ಬರೆಯದ ಮೌನದ ಕವಿತೆ ಹಾಡಾಯಿತು..’, ‘ಚಂದಕಿಂತ ಚಂದ ನೀನೇ ಸುಂದರ..’ ಹಾಡುಗಳು ಪಂಕಜ್ ಉಧಾಸ್ ಅವರ ಕಂಠದಲ್ಲಿ ಮೂಡಿಬಂದಿದ್ದವು. ಕೇಳುಗರ ಫೇವರಿಟ್ ಲಿಸ್ಟ್ನಲ್ಲಿ ಈ ಹಾಡುಗಳು ಈಗಲೂ ಜಾಗ ಪಡೆದುಕೊಂಡಿವೆ. ಪಂಕಜ್ ಉಧಾಸ್ ಅವರ ಅಗಲಿಕೆಗೆ ಕರುನಾಡಿನಲ್ಲಿನ ಅಭಿಮಾನಿಗಳು ಕೂಡ ಕಂಬನಿ ಮಿಡಿಯುತ್ತಿದ್ದಾರೆ.
ಪಂಕಜ್ ಉಧಾಸ್ ಕುಟುಂಬದವರ ಸೋಶಿಯಲ್ ಮೀಡಿಯಾ ಪೋಸ್ಟ್:
ಹಲವಾರು ಆಲ್ಬಂ ಗೀತೆಗಳಿಗೆ ಪಂಕಜ್ ಉಧಾಸ್ ಧ್ವನಿಯಾಗಿದ್ದರು. ಅವರದ್ದು ಸಂಗೀತಗಾರರ ಕುಟುಂಬ. ಅವರ ಸಹೋದರರಾದ ಮನ್ಹರ್ ಉಧಾಸ್, ನಿರ್ಮಲ್ ಉಧಾಸ್ ಅವರು ಕೂಡ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. 1986ರಲ್ಲಿ ತೆರೆಕಂಡ ‘ನಾಮ್’ ಸಿನಿಮಾದಲ್ಲಿನ ‘ಚಿಟ್ಟಿ ಆಯಿ ಹೈ..’ ಹಾಡಿಗೆ ಧ್ವನಿ ನೀಡುವ ಮೂಲಕ ಪಂಕಜ್ ಉಧಾಸ್ ಅವರು ಬಹಳ ಜನಪ್ರಿಯತೆ ಪಡೆದರು. ಸಂಜಯ್ ದತ್ ಅಭಿನಯದ ಆ ಸಿನಿಮಾದಲ್ಲಿ ಪಂಕಜ್ ಅವರು ಗಾಯಕನಾಗಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಖ್ಯಾತ ಕಿರುತೆರೆ ಕಲಾವಿದೆಗೆ ಹೃದಯಾಘಾತ; ನಟಿ, ನಿರ್ದೇಶಕಿ ಕವಿತಾ ಚೌಧರಿ ನಿಧನ
2006ರಲ್ಲಿ ಪಂಕಜ್ ಉಧಾಸ್ ಅವರಿಗೆ ಭಾರತ ಸರ್ಕಾರ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಲ್ಲದೇ, ಅನೇಕ ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳು ಪಂಕಜ್ ಉಧಾಸ್ ಅವರನ್ನು ಅರಸಿ ಬಂದಿದ್ದವು. ಭಾರತದ ಮಾತ್ರವಲ್ಲದೇ ವಿದೇಶದ ಹಲವು ವೇದಿಕೆಗಳಲ್ಲಿ ಅವರು ಸಂಗೀತ ಕಾರ್ಯಕ್ರಮ ನೀಡಿದ್ದರು. ಲೆಜೆಂಡರಿ ಗಾಯಕನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:52 pm, Mon, 26 February 24