ಐದು ವರ್ಷದ ಹಿಂದಿನ ಪ್ರಕರಣದಲ್ಲಿ ತಪ್ಪು ಸಾಬೀತಾದರೆ ಶಾರುಖ್​​ಗೆ ಆಗಲಿದೆ ಶಿಕ್ಷೆ; ದಂಡದ ಮೊತ್ತ ಎಷ್ಟು?

| Updated By: ರಾಜೇಶ್ ದುಗ್ಗುಮನೆ

Updated on: Feb 20, 2022 | 1:05 PM

2017ರ ಜನವರಿ 25ರಂದು ಶಾರುಖ್​ ಖಾನ್​ ನಟನೆಯ ‘ರಯೀಸ್​’ ಸಿನಿಮಾ ತೆರೆಗೆ ಬಂದಿತ್ತು. ಈ ಸಿನಿಮಾ ಮಕಾಡೆ ಮಲಗಿತ್ತು. ಈ ಚಿತ್ರಕ್ಕೆ ಶಾರುಖ್​ ಖಾನ್​ ಅವರು ದೊಡ್ಡ ಮಟ್ಟದಲ್ಲೇ ಪ್ರಚಾರ ನೀಡಿದ್ದರು.

ಐದು ವರ್ಷದ ಹಿಂದಿನ ಪ್ರಕರಣದಲ್ಲಿ ತಪ್ಪು ಸಾಬೀತಾದರೆ ಶಾರುಖ್​​ಗೆ ಆಗಲಿದೆ ಶಿಕ್ಷೆ; ದಂಡದ ಮೊತ್ತ ಎಷ್ಟು?
ಶಾರುಖ್​
Follow us on

ಶಾರುಖ್​ ಖಾನ್ (Shah Rukh Khan)​ ಅವರು ಬಾಲಿವುಡ್​ನಲ್ಲಿ ತುಂಬಾನೇ ಫೇಮಸ್​. ಅವರು ವಿವಾದದಿಂದ ಆದಷ್ಟು ದೂರ ಇರೋಕೆ ಪ್ರಯತ್ನಿಸುತ್ತಾರೆ. ಆದಾಗ್ಯೂ ಕೆಲವೊಮ್ಮೆ ವಿವಾದಗಳೇ (Controversy) ಅವರನ್ನು ಹುಡುಕಿಕೊಂಡು ಬರುತ್ತವೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಅವರು ಮಾಡುವ ಸಣ್ಣ ತಪ್ಪು ದೊಡ್ಡದಾಗಿ ಕಾಣುತ್ತದೆ. ಇದಕ್ಕೆ ಕೇಸ್​ಗಳು ಬಿದ್ದ ಉದಾಹರಣೆಯೂ ಇದೆ. ಅದೇ ರೀತಿ ಐದು ವರ್ಷದ ಹಿಂದಿನ ಪ್ರಕರಣವೊಂದರ ವಿಚಾರಣೆ ಈಗ ಆರಂಭಗೊಂಡಿದೆ. ಈ ಪ್ರಕರಣದಲ್ಲಿ ತಪ್ಪು ಸಾಬೀತಾದರೆ ಅವರಿಗೆ ಸಣ್ಣ ಪ್ರಮಾಣದ ಶಿಕ್ಷೆ ಆಗಲಿದೆ. ಇಲ್ಲದಿದ್ದರೆ ಅವರು 250 ರೂಪಾಯಿ ದಂಡ ಕಟ್ಟಬೇಕಾಗಿ ಬರಹುದು! ಹಾಗಾದರೆ, ಏನಿದು ಪ್ರಕರಣ? ಆ ಪ್ರಶ್ನೆಗೆ ಉತ್ತರ ಪಡೆಯಲು ಈ ಸ್ಟೋರಿ ಓದಿ.

2017ರ ಜನವರಿ 25ರಂದು ಶಾರುಖ್​ ಖಾನ್​ ನಟನೆಯ ‘ರಯೀಸ್​’ ಸಿನಿಮಾ ತೆರೆಗೆ ಬಂದಿತ್ತು. ಈ ಸಿನಿಮಾ ಮಕಾಡೆ ಮಲಗಿತ್ತು. ವಿಮರ್ಶಕರಿಂದ ನೆಗೆಟಿವ್​ ವಿಮರ್ಶೆ ಬಂದಿದ್ದು ಮಾತ್ರವಲ್ಲ, ಬಾಕ್ಸ್​ ಆಫೀಸ್​ನಲ್ಲೂ ಸೊರಗಿತ್ತು. ಈ ಚಿತ್ರಕ್ಕೆ ಶಾರುಖ್​ ಖಾನ್​ ಅವರು ದೊಡ್ಡ ಮಟ್ಟದಲ್ಲೇ ಪ್ರಚಾರ ನೀಡಿದ್ದರು. ಈ ಚಿತ್ರದ ಪ್ರಮೋಷನ್​ಗಾಗಿ ಜನವರಿ 23ರಂದು ಅವರು ಟ್ರೇನ್​ನಲ್ಲಿ ತೆರಳಿದ್ದರು. ಗುಜರಾತ್​ನ ಬರೋಡಾ ರೈಲ್ವೆ ನಿಲ್ದಾಣದ ಮೂಲಕ ಅವರು ಸಂಚರಿಸುತ್ತಿದ್ದ ರೈಲು​ ಹಾದು ಹೋಗಿತ್ತು. ಶಾರುಖ್​ ಅವರನ್ನು ನೋಡಲು ರೈಲ್ವೆ ನಿಲ್ದಾಣದಲ್ಲಿ ಸಾಕಷ್ಟು ಜನರು ನೆರೆದಿದ್ದರು.

ಶಾರುಖ್​ ಖಾನ್​ ಅವರು ಬರೋಡಾ ರೈಲ್ವೆ ನಿಲ್ದಾಣದಲ್ಲಿ ತಮ್ಮ ಶರ್ಟ್​ಅನ್ನು ತೆಗೆದು ಅಭಿಮಾನಿಗಳತ್ತ ಎಸೆದಿದ್ದರು. ನೆಚ್ಚಿನ ನಟ ಎಸೆದ ಶರ್ಟ್​ಅನ್ನು ಬಾಚಿಕೊಳ್ಳಲು ಅಭಿಮಾನಿಗಳು ಮುತ್ತಿಕೊಂಡಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿತ್ತು. ಓರ್ವ ವ್ಯಕ್ತಿ ಮೃತಪಟ್ಟರೆ, ಇಬ್ಬರು ಪೊಲೀಸ್​ ಕಾನ್ಸ್​ಟೇಬಲ್​ಗಳು ಗಾಯಗೊಂಡಿದ್ದರು. ಈ ಕಾಲ್ತುಳಿತಕ್ಕೆ ಶಾರುಖ್​ ಅವರೇ ಕಾರಣ ಎಂದು ಆರೋಪಿಸಿ ದೂರು ನೀಡಲಾಗಿತ್ತು. ಶಾರುಖ್​ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿತ್ತು. ಈ ಪ್ರಕರಣ ಈಗ ಗುಜರಾತ್​ ಹೈಕೋರ್ಟ್​ನಲ್ಲಿ ವಿಚಾರಣೆಗೆ ಬಂದಿದೆ.

ಶಾರುಖ್​ ಪರ ವಾದ ಮಂಡಿಸಿದ ವಕೀಲ ಮಿಹಿರ್ ಠಾಕ್ರೆ, ‘ಶಾರುಖ್​ ಖಾನ್​ ರೈಲ್ವೆ ನಿಲ್ದಾಣದಲ್ಲಿ ಇಳಿದುಕೊಂಡಿಲ್ಲ. ಅವರು ರೈಲಿನಿಂದಲೇ ಕೈ ಬೀಸಿ, ಶರ್ಟ್​ ಎಸೆದಿದ್ದಾರೆ. ಈ ವೇಳೆ ಮೃತಪಟ್ಟ ವ್ಯಕ್ತಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅದರಿಂದಲೇ ಅವರು ಮೃತಪಟ್ಟ ಬಗ್ಗೆ ಕುಟುಂಬವೂ ಒಪ್ಪಿಕೊಂಡಿದೆ’ ಎಂದರು.

ಐಪಿಸಿ ಸೆಕ್ಷನ್​ 336 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶಾರುಖ್​ ತಪ್ಪು ಸಾಬೀತಾದರೆ ಕೋರ್ಟ್​ 3 ತಿಂಗಳು ಶಿಕ್ಷೆ ಅಥವಾ 250 ರೂಪಾಯಿ ದಂಡ ವಿಧಿಸಬಹುದು. ಎರಡನ್ನೂ ವಿಧಿಸುವ ಅವಕಾಶ ಕೋರ್ಟ್​ಗೆ ಇದೆ. ಆದರೆ, ಪ್ರಕರಣವನ್ನು ಹೆಚ್ಚು ಎಳೆಯದೇ, ನಟ ಶಾರುಖ್​ ಕ್ಷಮೆ ಕೇಳಲಿ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.  ಪ್ರಕರಣದ ವಿಚಾರಣೆ ಫೆಬ್ರವರಿ 24ಕ್ಕೆ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ: 80 ಕೋಟಿ ರೂಪಾಯಿಗೆ ಸೇಲ್​ ಆದ ಶಾರುಖ್​ ಖಾನ್ ಮತ್ತು ಆಲಿಯಾ ಭಟ್ ಹೊಸ​ ಚಿತ್ರ​

ಬೆಂಗಳೂರಿನಲ್ಲಿ ಕಾಣಿಸಿಕೊಂಡ ಆರ್ಯನ್​ ಖಾನ್​; ಮಗನ ಹೆಗಲಿಗೆ ದೊಡ್ಡ ಜವಾಬ್ದಾರಿ ಹೊರಿಸಿದ ಶಾರುಖ್​?