
‘ಹನುಮಾನ್ ಅಂಶ್’ ಅತ್ಯಂತ ಸಣ್ಣ ಬಜೆಟ್ನ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅದ್ವಿತೀಯ ದಾಖಲೆಗಳನ್ನು ಬರೆಯುತ್ತಿದೆ. ಕೇವಲ 2 ಕೋಟಿ ಬಜೆಟ್ನಲ್ಲಿ ನಿರ್ಮಾಣ ಆದ ಈ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಗಳಿಕೆ ದಾಟಿದ್ದು, 500 ಕೋಟಿಯತ್ತ ಮುನ್ನುಗ್ಗುತ್ತಿದೆ. ‘ಹನುಮಾನ್ ಅಂಶ್’ ಸಿನಿಮಾ, ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ದಾಖಲೆಯನ್ನೂ ಸಹ ಅಳಿಸಿ ಮುನ್ನುಗ್ಗುತ್ತಿದ್ದು, ಈ ವರ್ಷದ ಈ ವರೆಗಿನ ಅತ್ಯಂತ ಲಾಭದಾಯಕ ಸಿನಿಮಾ ಎನಿಸಿಕೊಂಡಿದೆ.
ಅಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳ ಆಧಾರಿತ ಭಕ್ತಿಪ್ರಧಾನ ಚಿತ್ರ ‘ಹನುಮಾನ್ ಅಂಶ್’ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂ. ಗಳ ಗಡಿಯನ್ನು ದಾಟಿದೆ. ಕೇವಲ 2 ಕೋಟಿ ಬಜೆಟ್ನ ಸಿನಿಮಾ ಇದಾಗಿದ್ದು, 200 ಕೋಟಿ ಗಳಿಕೆಯಿಂದಾಗಿ ಸಿನಿಮಾ ಈಗಾಗಲೇ ತನ್ನ ಬಜೆಟ್ನ 100 ಪಟ್ಟು ಗಳಿಕೆ ಮಾಡಿದಂತಾಗಿದೆ. ಆ ಮೂಲಕ ಭಾರತದ ಈ ವರ್ಷದ ಅತ್ಯಂತ ಲಾಭದಾಯಕ ಸಿನಿಮಾ ಎನಿಸಿಕೊಂಡಿದೆ.
‘ಹನುಮಾನ್ ಅಂಶ್’ ಚಿತ್ರವು ಬಿಡುಗಡೆಯಾದ ದಿನ ಕೇವಲ 10 ಲಕ್ಷ ರೂ.ಗಳನ್ನು ಮಾತ್ರ ಗಳಿಸಿತ್ತು. ಆ ಮೂಲಕ ಅತ್ಯಂತ ನಿರಾಶಾದಾಯಕ ಆರಂಭವನ್ನು ಕಂಡಿತ್ತು. ಮೊದಲ ಎರಡು ವಾರಗಳಲ್ಲಿ ಈ ಚಿತ್ರದ ಒಟ್ಟು ನಿವ್ವಳ ಗಳಿಕೆ ಕೇವಲ 1.48 ಕೋಟಿ ರೂ.ಗಳಷ್ಟಿತ್ತು. ಆದರೆ ಆ ಬಳಿಕ ಸಿನಿಮಾ ನೋಡಿದ ಜನ, ಖುದ್ದು ತಾವೇ ಸಿನಿಮಾದ ಬಗ್ಗೆ ಪ್ರಚಾರ ಮಾಡಲು ಆರಂಭಿಸಿದರು. ಇದರಿಂದ ಸಿನಿಮಾ ಬಿಡುಗಡೆಯಾದ 16ನೇ ದಿನದಂದು ಚಿತ್ರದ ಗಳಿಕೆಯಲ್ಲಿ ಭಾರಿ ಜಿಗಿತ ಕಂಡುಬಂದಿತು. ಬಾಕ್ಸ್ ಆಫೀಸ್‌ನಲ್ಲಿ ಮೂರು, ನಾಲ್ಕು ಮತ್ತು ಐದನೇ ವಾರಗಳಲ್ಲಿ ಈ ಚಿತ್ರವು ದಾಖಲೆ ಪ್ರಮಾಣದ ಗಳಿಕೆ ಮಾಡಿತು. ನಾಲ್ಕನೇ ವಾರದಲ್ಲಿ 61 ಕೋಟಿ ರೂ. ಹಾಗೂ ಐದನೇ ವಾರದಲ್ಲಿ 90 ಕೋಟಿ ರೂ.ಗಳನ್ನು ಬಾಚಿಕೊಂಡಿತು. ಈ ಯಶಸ್ಸಿನ ಓಟವು ಆರನೇ ವಾರಾಂತ್ಯದಲ್ಲೂ ಮುಂದುವರಿದು, ಥಿಯೇಟರ್‌ಗಳಲ್ಲಿ ತನ್ನ 36ನೇ ದಿನವಾದ ಶುಕ್ರವಾರದಂದು ಚಿತ್ರವು 10.50 ಕೋಟಿ ರೂ. ನಿವ್ವಳ ಗಳಿಕೆ ಮಾಡಿತು. ಇದರೊಂದಿಗೆ ಇದರ ದೇಶೀಯ ನಿವ್ವಳ ಗಳಿಕೆ 174 ಕೋಟಿ ರೂ.ಗಳಿಗೆ ತಲುಪಿದೆ.
ಇದನ್ನೂ ಓದಿ:‘ಹನುಮಾನ್ ಅಂಶ್’ ಸಿನಿಮಾದ ಅಭೂತಪೂರ್ವ ಯಶಸ್ಸಿಗೆ ಹೇಮಾ ಮಾಲಿನಿ ಸಂತಸ
ಈ ಚಿತ್ರ ಇದೀಗ ವಿದೇಶದಲ್ಲೂ ಸಹ ಬಿಡುಗಡೆ ಆಗಿದೆ. ಆ ಮೂಲಕ ಸಿನಿಮಾದ ಗಳಿಕೆಯಲ್ಲಿ ದೊಡ್ಡ ಮಟ್ಟದ ಏರಿಕೆ ಆಗುವುದು ಖಾತ್ರಿ ಆಗಿದೆ. ಸಿನಿಮಾ ಈಗಾಗಲೇ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 205 ಕೋಟಿಗೂ ಅಧಿಕ ಮೊತ್ತ ಗಳಿಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಸಿನಿಮಾದ ಗಳಿಕೆ ಇನ್ನೂ ಹೆಚ್ಚಾಗುವುದು ಖಾತ್ರಿ ಎನ್ನಲಾಗುತ್ತಿದೆ.
ವಿಶಾಲ್ ಚತುರ್ವೇದಿ ಬರೆದು ನಿರ್ದೇಶಿಸಿರುವ ‘ಹನುಮಾನ್ ಅಂಶ್’ ಚಿತ್ರವು, ತನ್ನ ತಾಯಿಯ ಮರಣದ ನಂತರ ದೇವರನ್ನು ಹುಡುಕುತ್ತಾ ಆಧ್ಯಾತ್ಮಿಕ ಪಯಣ ಬೆಳೆಸುವ ಯುವಕ ಲಕ್ಷ್ಮೀನಾರಾಯಣನ (ನೀಮ್ ಕರೋಲಿ ಬಾಬಾ) ಕಥೆಯನ್ನು ಹೊಂದಿದೆ. ಜೀವನ, ಸಾವು ಮತ್ತು ಮಾನವನ ನೋವುಗಳಿಗೆ ಉತ್ತರ ಹುಡುಕುತ್ತಾ ಆತ ಉತ್ತರ ಭಾರತದಾದ್ಯಂತ ಪ್ರಯಾಣ ಬೆಳೆಸುತ್ತಾನೆ ಮತ್ತು ಅಂತಿಮವಾಗಿ ಪೂಜ್ಯ ಸಂತ ನೀಮ್ ಕರೋಲಿ ಬಾಬಾ ಆಗಿ ಬದಲಾಗುತ್ತಾನೆ. ಈ ಚಿತ್ರದಲ್ಲಿ ಶೋಭಿನವ್ ಸತ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅವರೊಂದಿಗೆ ವಿಹಾನ್ ಶೆಡ್ಗೆ, ಚಂದನ್ ಕೆ ಆನಂದ್, ಪೂರ್ಣಿಮಾ ತಿವಾರಿ, ಅನಿಲ್ ರಸ್ತೋಗಿ, ಗುಲ್ಶನ್ ಪಾಂಡೆ ಮತ್ತು ಭಾಗ್ವಾನ್ ದಾಸ್ ಪಟೇಲ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:34 pm, Sat, 12 September 26