ನಟ ನವಾಜುದ್ದೀನ್ ಸಿದ್ಧಿಕಿ ವಿರುದ್ಧ ಹಿಂದೂ ಪರ ಸಂಘಟನೆ ದೂರು

|

Updated on: Oct 23, 2024 | 3:06 PM

Nawazuddin Siddiqui: ನವಾಜುದ್ಧೀನ್ ಸಿದ್ಧಿಕಿ ಬಾಲಿವುಡ್​ನ ಪ್ರತಿಭಾವಂತ ಮತ್ತು ಬೇಡಿಕೆಯ ನಟರಲ್ಲಿ ಪ್ರಮುಖರು. ಇದೀಗ ನವಾಜುದ್ಧೀನ್ ಸಿದ್ಧಿಕಿ ವಿರುದ್ಧ ಹಿಂದೂಪರ ಸಂಘಟನೆಯೊಂದು ಮುಂಬೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.

ನಟ ನವಾಜುದ್ದೀನ್ ಸಿದ್ಧಿಕಿ ವಿರುದ್ಧ ಹಿಂದೂ ಪರ ಸಂಘಟನೆ ದೂರು
Follow us on

ಬಾಲಿವುಡ್​ನ ಪ್ರತಿಭಾವಂತ ನಟ ನವಾಜುದ್ಧೀನ್ ಸಿದ್ಧಿಕಿ ವಿರುದ್ಧ ಹಿಂದೂಪರ ಸಂಘಟನೆಗಳು ದೂರು ನೀಡಿವೆ. ನವಾಜುದ್ಧೀನ್ ಸಿದ್ಧಿಕಿ, ಮುಂಬೈ ಪೊಲೀಸರಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿರುವ ಹಿಂದೂ ಜಾಗರಣ ವೇದಿಕೆ ಸದಸ್ಯರು ಮುಂಬೈ ಪೊಲೀಸ್ ಆಯುಕ್ತರಿಗೆ ನವಾಜುದ್ಧೀನ್ ಸಿದ್ಧಿಕಿ ವಿರುದ್ಧ ದೂರು ನೀಡಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅಂದಹಾಗೆ ನವಾಜುದ್ಧೀನ್ ಸಿದ್ಧಿಕಿ ಜಾಹೀರಾತೊಂದರಲ್ಲಿ ನಟಿಸಿದ್ದು, ಈ ಜಾಹೀರಾತು ಹಿಂದೂಪರ ಸಂಘಟನೆಯವರ ಅಸಮಾಧಾನಕ್ಕೆ ಕಾರಣವಾಗಿದೆ.

ನವಾಜುದ್ಧೀನ್ ಸಿದ್ಧಿಕಿ ‘ಬಿಗ್ ಕ್ಯಾಶ್’ ಹೆಸರಿನ ಗೇಮಿಂಗ್ ಅಪ್ಲಿಕೇಶನ್ ಒಂದರ ರಾಯಭಾರಿ ಆಗಿದ್ದು, ಈ ಗೇಮಿಂಗ್ ಅಪ್ಲಿಕೇಶನ್​ನ ಜಾಹೀರಾತುಗಳಲ್ಲಿ ನವಾಜುದ್ಧೀನ್ ಸಿದ್ಧಿಕಿ ನಟಿಸಿದ್ದಾರೆ. ಬಿಗ್ ಕ್ಯಾಶ್​ ಅಪ್ಲಿಕೇಶನ್ ನಲ್ಲಿ ಹಣ ತೊಡಗಿಸಿ ರಮ್ಮಿ ಸೇರಿದಂತೆ ಇನ್ನೂ ಕೆಲವು ಆಟಗಳನ್ನು ಆಡಬಹುದಾಗಿದೆ. ಈಗಾಗಲೇ ಪ್ರಚಲಿತದಲ್ಲಿರುವ ರಮ್ಮಿ ಕ್ಲಬ್, ಎ23 ಇನ್ನಿತರೆ ಗೇಮಿಂಗ್ ಫ್ಲ್ಯಾಟ್​ಪಾರಂಗಳ ರೀತಿಯ ಅಪ್ಲಿಕೇಶನ್ ಬಿಗ್ ಕ್ಯಾಶ್ ಆಗಿದೆ.

ಈ ಅಪ್ಲಿಕೇಶನ್​ನ ಹೊಸ ಜಾಹೀರಾತಿನಲ್ಲಿ ನವಾಜುದ್ಧೀನ್ ಸಿದ್ಧಿಕಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಸಮವಸ್ತ್ರ ಧರಿಸಿ, ‘ಕ್ರೈಂ ವಿಭಾಗದಲ್ಲಿ ದೊಡ್ಡ ಹೆಸರು ಮಾಡಬೇಕೆಂದರೆ ದೊಡ್ಡ ಕೆಲಸ ಮಾಡಬೇಕಾಗುತ್ತದೆ. ಈ ಅಪರಾಧಿಗಳು ನನ್ನನ್ನು ಸಾಮಾನ್ಯ ಅಂದುಕೊಂಡು ಬಿಟ್ಟಿದ್ದಾರೆ. ಅವರ ಹಾವ ಭಾವದಿಂದಲೇ ಅವರ ಆಟ ಎಂಥಹದ್ದು ನಾನು ಕಂಡು ಹಿಡಿದುಬಿಡುತ್ತೇನೆ. ಏಕೆಂದರೆ ಆ ಆಟವನ್ನು ನಾನು ಐದು ಕೋಟಿ ಜನರೊಟ್ಟಿಗೆ ಪ್ರತಿ ದಿನವೂ ಆಡುತ್ತೇನೆ’ ಎಂದು ಸಂಭಾಷಣೆ ಹೇಳುವ ನವಾಜುದ್ಧೀನ್ ಸಿದ್ಧಿಕಿ, ಬಿಗ್​ ಕ್ಯಾಶ್​ನಲ್ಲಿ ನೀವೂ ಆಟವಾಡಿ ಹಣ ಗಳಿಸಿ ಎಂದು ಹೇಳುತ್ತಾರೆ.

ಇದನ್ನೂ ಓದಿ: ಸಹೋದರ, ಮಾಜಿ ಪತ್ನಿ ವಿರುದ್ಧ 100 ಕೋಟಿ ಮಾನನಷ್ಟ ದಾವೆ ಹೂಡಿದ ನಟ ನವಾಜುದ್ಧೀನ್ ಸಿದ್ಧಿಕಿ

ಜೂಜಾಟವನ್ನು ಪ್ರಚಾರ ಮಾಡುವ ಜಾಹೀರಾತಿನಲ್ಲಿ ನವಾಜುದ್ಧೀನ್ ಸಿದ್ಧಿಕಿ ಪೊಲೀಸ್ ಸಮವಸ್ತ್ರ ಧರಿಸಿರುವುದಕ್ಕೆ ಹಿಂದೂ ಜಾಗರಣಾ ವೇದಿಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದು, ಮುಂಬೈ ಪೊಲೀಸ್ ಆಯುಕ್ತರಿಗೆ ಹಾಗೂ ಮಹಾರಾಷ್ಟ್ರ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಮುಖೇನ ದೂರು ನೀಡಿದ್ದಾರೆ. ಜಾಹೀರಾತಿನಲ್ಲಿ ನವಾಜುದ್ಧೀನ್ ಸಿದ್ಧಿಕಿ ಮುಂಬೈ ಪೊಲೀಸರ ಸಮವಸ್ತ್ರ ಧರಿಸಿದ್ದು, ಈ ಜಾಹೀರಾತು ಮುಂಬೈ ಪೊಲೀಸರ ಗೌರವಕ್ಕೆ ಧಕ್ಕೆ ತರುವಂತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನವಾಜುದ್ಧೀನ್ ಸಿದ್ಧಿಕಿ ಬಾಲಿವುಡ್​ನ ಪ್ರತಿಭಾವಂತ ನಟರಲ್ಲಿ ಪ್ರಮುಖರು. 1999 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ನವಾಜುದ್ಧೀನ್ ಸಿದ್ಧಿಕಿ, ತೀರ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಈಗ ಬಾಲಿವುಡ್​ನ ಬೇಡಿಕೆಯ ನಟರಾಗಿದ್ದಾರೆ. ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ನವಾಜುದ್ಧೀನ್ ಸಿದ್ಧಿಕಿಗೆ ಅನುರಾಗ್ ಕಶ್ಯಪ್ ನಿರ್ದೇಶನದ ‘ಗ್ಯಾಂಗ್ಸ್ ಆಫ್ ವಸೇಪುರ್’ ಸಿನಿಮಾ ಭಾರಿ ದೊಡ್ಡ ಬ್ರೇಕ್ ಕೊಟ್ಟಿತು. ಆ ಸಿನಿಮಾದ ಬಳಿಕ ನವಾಜುದ್ಧೀನ್ ಸಿದ್ಧಿಕಿ ಸ್ಟಾರ್ ಆಗಿ ಬದಲಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ