ಬಾಬಿ ಡಿಯೋಲ್ (Bobby Deol), ಬಾಲಿವುಡ್ನಲ್ಲಿ ತುಸು ಜೋರಾಗಿಯೇ ಕೇಳುತ್ತಿರುವ ಹೆಸರಿದು. ಬಾಬಿ ಡಿಯೋಲ್ಗೆ ಈ ಜನಪ್ರಿಯತೆ ಹೊಸದಲ್ಲ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಲೇ ಅವರು ಸ್ಟಾರ್ ಆಗಿದ್ದರು, ಆದರೆ ಕಾಲಾಂತರದಲ್ಲಿ ಅವರ ಸ್ಟಾರ್ ಗಿರಿ ಕರಗಿ ಯಾರಿಗೂ ಬೇಡವಾಗಿದ್ದರು. ಆದರೆ ಅವರ ಹೆಸರು ಈಗ ಮತ್ತೆ ಬಾಲಿವುಡ್ಡಿಗರ ಬಾಯಲ್ಲಿ ಕೇಳಿ ಬರುತ್ತಿದೆ. ಕಮ್ಬ್ಯಾಕ್ ಆದರೆ ಹೀಗೆಯೇ ಆಗಬೇಕು ಎಂದು ಮಾತನಾಡಿಕೊಳ್ಳುವಷ್ಟರ ಮಟ್ಟಿಗೆ ಅದ್ಭುತವಾದ ಕಮ್ಬ್ಯಾಕ್ ಅನ್ನು ಬಾಬಿ ಡಿಯೋಲ್ ಮಾಡಿದ್ದಾರೆ.
ಇತ್ತೀಚೆಗೆ ಬಿಡುಗಡೆ ಆಗಿರುವ ‘ಅನಿಮಲ್’ ಸಿನಿಮಾದಲ್ಲಿ ಬಾಬಿ ಡಿಯೋಲ್ ನಿರ್ವಹಿಸಿರುವ ವಿಲನ್ ಪಾತ್ರಕ್ಕೆ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದ ಟೀಸರ್, ಟ್ರೈಲರ್ಗಳಲ್ಲಿಯೇ ಬಾಬಿಯ ನಟನೆ, ಸ್ವಾಗ್ ಪ್ರೇಕ್ಷಕರಿಗೆ ಗುಂಗು ಹಿಡಿಸಿತ್ತು, ಸಿನಿಮಾ ಬಿಡುಗಡೆ ಆದ ಬಳಿಕ, ರಣ್ಬೀರ್ ನಟನೆಗೆ ಸಿಗುತ್ತಿರುವಷ್ಟೆ ಪ್ರಶಂಸೆ, ಆದರ ಬಾಬಿ ಡಿಯೋಲ್ ಪಾತ್ರಕ್ಕೂ ಸಿಗುತ್ತಿದೆ. ಬಾಬಿ ಡಿಯೋಲ್ ಕಮ್ಬ್ಯಾಕ್ ಜರ್ನಿಯಲ್ಲಿನ ಪವರ್ಫುಲ್ ಪಾತ್ರ ಇದಾಗಿದೆ. ಅಂದಹಾಗೆ ಬಾಬಿಗೆ ಈ ಪಾತ್ರ ದೊರೆತಿದ್ದು ಒಂದು ವಿಶೇಷ ಕತೆ.
ಬಾಬಿ ಡಿಯೋಲ್, ಚಿತ್ರರಂಗದಲ್ಲಿ ಮೂಲೆಗುಂಪಾಗಿದ್ದ ಸಮಯದಲ್ಲಿ, ತಮ್ಮ ಇರುವಿಕೆ ಪ್ರದರ್ಶಿಸಲು ಸಣ್ಣ ಪುಟ್ಟ ಸಿನಿಮಾಗಳು, ಕಾಮಿಡಿ ಸಿನಿಮಾಗಳನ್ನು ಮಾಡುತ್ತಾ ಕೆಲವು ರಿಯಾಲಿಟಿ ಶೋಗಳಿಗೆ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ ಮ್ಯಾಚ್ ಒಂದರಲ್ಲಿ ಆಡುತ್ತಿದ್ದ ಸಮಯದಲ್ಲಿ ಪೆವಿಲಿಯನ್ನಲ್ಲಿ ಕೂತು ಮ್ಯಾಚ್ ಅನ್ನು ಆಸಕ್ತಿಯಿಂದ ನೋಡುತ್ತಿದ್ದ ಬಾಬಿಯ ಚಿತ್ರವೊಂದನ್ನು ಯಾರೋ ಕ್ಲಿಕ್ಕಿಸಿದ್ದರು. ಬಹಳ ತುರುಸಿನ ಪಂದ್ಯವಾದ್ದರಿಂದ ಬಹಳ ಗಮನವಿಟ್ಟು ಬಾಬಿ ಪಂದ್ಯವನ್ನು ವೀಕ್ಷಿಸುತ್ತಿದ್ದರು.
ಇದನ್ನೂ ಓದಿ:‘ಅನಿಮಲ್’ ಸಿನಿಮಾ ವೈಲೆಂಟ್ ಆಗಿದೆ ಎಂಬ ಆರೋಪಕ್ಕೆ ಆರ್ಜಿವಿ ಕೊಟ್ರು ತಿರುಗೇಟು
‘ಅನಿಮಲ್’ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕಣ್ಣಿಗೆ ಯಾವಾಗಲೋ ಆ ಫೋಟೊ ಕಣ್ಣಿಗೆ ಬಿತ್ತು, ಆ ಚಿತ್ರದಲ್ಲಿ ಬಾಬಿಯ ಮುಖದಲ್ಲಿದ್ದ ಆ ತೀರ್ವತೆ, ಕಣ್ಣಿನಲ್ಲಿದ್ದ ಆ ತೀಕ್ಷಣತೆ ಬಹಳ ಇಷ್ಟವಾಯಿತಂತೆ. ‘ಆ ಚಿತ್ರ ನೋಡುತ್ತಿದ್ದರೆ ನೋಡುತ್ತಲೇ ಇರಬೇಕು ಅನ್ನಿಸಿತು, ಆ ಚಿತ್ರ ನೋಡುತ್ತಾ ನೋಡುತ್ತಾ ನನಗೂ ಅದೇ ತೀವ್ರತೆ ಬರುವಂತೆ ಆಯಿತು ಆಗಲೇ ನಾನು ನಿಶ್ಚಯಿಸಿದೆ ಇವರೇ ನನ್ನ ಸಿನಿಮಾಕ್ಕೆ ವಿಲನ್ ಎಂದು’ ಇದು ಸಂದೀಪ್ ರೆಡ್ಡಿ ಬಾಬಿಯ ಆ ಚಿತ್ರದ ಬಗ್ಗೆ ಆಡಿದ್ದ ಮಾತು.
‘ಅನಿಮಲ್’ ಸಿನಿಮಾದಲ್ಲಿ ರಣ್ಬೀರ್ ಬಾಡಿಯನ್ನು ಮೀರಿಸುವಂತೆ ಬಾಬಿ ದೇಹವನ್ನು ಹುರಿಗಳಿಸಿಕೊಂಡಿದ್ದಾರೆ. ನಟನೆಯಲ್ಲಿಯೂ ಸಖತ್ ಮಿಂಚಿದ್ದಾರೆ. ಸಿನಿಮಾದಲ್ಲಿ ಬಾಬಿ ಡಿಯೋಲ್ರ ಎಂಟ್ರಿ ಸೀನ್, ಎಂಟ್ರಿ ಸೀನ್ಗೆ ಬಳಸಿರುವ ಹಾಡು ಸಖತ್ ಸದ್ದು ಮಾಡುತ್ತಿದೆ. ‘ಅನಿಮಲ್’ ಸಿನಿಮಾದ ಬಳಿಕ ಬಾಬಿಗೆ ಇನ್ನೂ ಹಲವು ಅವಕಾಶಗಳು ಅರಸಿ ಬರುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ