Hrithik Roshan on Aryan Khan Case: ಆರ್ಯನ್ ಪರ ಮತ್ತೊಮ್ಮೆ ಬ್ಯಾಟ್ ಬೀಸಿದ ಹೃತಿಕ್; ಈ ಬಾರಿ ಹೇಳಿದ್ದೇನು?

Mumbai Drugs Case: ಬಾಲಿವುಡ್ ನಟ ಹೃತಿಕ್ ರೋಶನ್ ಮತ್ತೊಮ್ಮೆ ಶಾರುಖ್ ಪುತ್ರ ಆರ್ಯನ್ ಪರ ಮಾತನಾಡಿದ್ದಾರೆ. ಈ ಬಾರಿ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ.

Hrithik Roshan on Aryan Khan Case: ಆರ್ಯನ್ ಪರ ಮತ್ತೊಮ್ಮೆ ಬ್ಯಾಟ್ ಬೀಸಿದ ಹೃತಿಕ್; ಈ ಬಾರಿ ಹೇಳಿದ್ದೇನು?
ಹೃತಿಕ್ ರೋಷನ್, ಆರ್ಯನ್ ಖಾನ್

ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್ ಮತ್ತೊಮ್ಮೆ ಆರ್ಯನ್ ಖಾನ್ ಪರವಾಗಿ ಮಾತನಾಡಿದ್ದಾರೆ. ಪತ್ರಕರ್ತೆ ಫಾಯೆ ಡಿಸೋಜಾ ಮತ್ತು ಸುಪ್ರೀಂ ಕೋರ್ಟ್‌ ಹಿರಿಯ ವಕೀಲರೊಂದಿಗಿನ ಸಂವಾದದ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿರುವ ಹೃತಿಕ್, ‘ಇವುಗಳು ಸತ್ಯವಾಗಿದ್ದರೆ, ಅದು ನಿಜವಾಗಿಯೂ ದುಃಖಕರ ವಿಚಾರ’ ಎಂದು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದಿದ್ದಾರೆ. ಈ ಹಿಂದೆಯೂ ಕೂಡ ಆರ್ಯನ್ ಬಂಧನವಾಗಿದ್ದ ಸಂದರ್ಭದಲ್ಲಿ ಹೃತಿಕ್ ಶಾರುಖ್ ಕುಟುಂಬಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದರು. ಬಾಂಬೆ ಹೈಕೋರ್ಟ್ ಗುರುವಾರ ಆರ್ಯನ್ ಖಾನ್ ಜಾಮೀನು ವಿಚಾರಣೆಯನ್ನು ಪುನರಾರಂಭಿಸಲಿದೆ.

ಈ ವಿಡಿಯೋ ಕ್ಲಿಪ್‌ನಲ್ಲಿ ಭಾರತದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ದುಶ್ಯಂತ್ ದವೆ ಅವರು ಈ ಹಿಂದಿನ ಡ್ರಗ್ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿ ಅವರು, ಆರ್ಯನ್ ಖಾನ್ ಸ್ನೇಹಿತ ಅರ್ಬಾಜ್ ಮರ್ಚೆಂಟ್‌ ಬಳಿ ದಾಳಿಯ ವೇಳೆ ಸಿಕ್ಕಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ಮಾದಕ ದ್ರವ್ಯ ಸಿಕ್ಕಿದ್ದರೂ ಕೂಡ ಈ ಹಿಂದೆ ಆರೋಪಿಗಳಿಗೆ ಹೇಗೆ ಜಾಮೀನು ನೀಡಲಾಗಿತ್ತು ಎಂದು ಉಲ್ಲೇಖಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ, ಡ್ರಗ್ಸ್ ಹೊಂದಿರುವವರ ಜೊತೆಯಲ್ಲಿದ್ದ ಆದರೆ ಅದರ ಮೂಲದ ಬಗ್ಗೆ ತಿಳಿದಿಲ್ಲ ಎಂದು ಹೇಳಿಕೊಂಡ ವ್ಯಕ್ತಿಯ ವಿರುದ್ಧವೂ ಆರೋಪ ಹೊರಿಸಲಾಗಿರಲಿಲ್ಲ. ಆರ್ಯನ್ ಖಾನ್ ಪ್ರಕರಣವೂ ಅದೇ ಮಾದರಿಯದ್ದು ಎಂದು ವಕೀಲರು ಉಲ್ಲೇಖಿಸಿದ್ದಾರೆ. ಇದನ್ನು ಹೃತಿಕ್ ಹಂಚಿಕೊಂಡು, ಇವುಗಳು ಸತ್ಯವಾಗಿದ್ದರೆ, ನಿಜವಾಗಿಯೂ ದುಃಖದ ವಿಚಾರ ಎಂದು ಬರೆದುಕೊಂಡಿದ್ದಾರೆ.

ಹೃತಿಕ್ ರೋಷನ್ ಈ ಹಿಂದೆ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್​ಗೆ ಒಂದು ಪತ್ರವನ್ನು ಬರೆದಿದ್ದರು. ಅದರಲ್ಲಿ ಅವರು,  ‘ಬದುಕೊಂದು ವಿಚಿತ್ರವಾದ ಪ್ರಯಾಣ. ಅನಿಶ್ಚಿತತೆ ಮತ್ತು ಕಷ್ಟದ ಕಾರಣದಿಂದಲೇ ಇದು ಮಹಾನ್​ ಎನಿಸಿಕೊಂಡಿದೆ. ಆದರೆ ದೇವರು ಕರುಣಾಮಯ. ಪ್ರಬಲರಿಗೆ ಮಾತ್ರ ಅವನು ಕಠಿಣವಾದ ಕಷ್ಟ ಕೊಡುತ್ತಾನೆ. ಸಿಟ್ಟು, ಗೊಂದಲ, ಅಸಹಾಯಕತೆ ಎಲ್ಲವನ್ನೂ ನೀನು ಫೀಲ್​ ಮಾಡಬೇಕು. ನಿನ್ನೊಳಗಿನ ಹೀರೋನನ್ನು ಹೊರತರಲು ಇವು ಪ್ರಮುಖ ಅಂಶಗಳು. ಆದರೆ ಹುಷಾರು… ಒಳ್ಳೆಯತನವನ್ನೂ ಇವು ಸುಟ್ಟು ಹಾಕಬಹುದು’ ಎಂದು ಬರೆದಿದ್ದರು.

ಜೊತೆಗೆ, ‘ಅನುಭವಗಳಿಂದ ಯಾವ ಅಂಶವನ್ನು ನಮ್ಮ ಜೊತೆಗೆ ಇಟ್ಟುಕೊಳ್ಳಬೇಕು ಮತ್ತು ಯಾವುದನ್ನು ದೂರ ಎಸೆಯಬೇಕು ಎಂದು ಅರ್ಥ ಮಾಡಿಕೊಂಡಾಗ ತಪ್ಪು, ಸೋಲು, ಯಶಸ್ಸು ಇವೆಲ್ಲವೂ ಒಂದೇ ಎನಿಸುತ್ತದೆ. ಅವೆಲ್ಲವುಗಳಿಂದ ನೀನು ಇನ್ನೂ ಚೆನ್ನಾಗಿ ಬೆಳೆಯಬಹುದು. ನಿನ್ನನ್ನು ಮಗು ಆಗಿದ್ದಾಗಿನಿಂದ ನಾನು ನೋಡಿದ್ದೇನೆ. ದೊಡ್ಡವನಾದ ಮೇಲೂ ನೋಡಿದ್ದೇನೆ. ಎಲ್ಲ ಅನುಭವಗಳನ್ನು ನಿನ್ನದಾಗಿಸಿಕೋ. ಅವು ನಿನ್ನ ಉಡುಗೊರೆಗಳು’ ಎಂದೂ ಹೃತಿಕ್ ಕಿವಿಮಾತು ಹೇಳಿದ್ದರು. ಈ ಪತ್ರಕ್ಕೆ ಹಲವರು ಬೆಂಬಲ ನೀಡಿದ್ದರೆ, ಮತ್ತೆ ಕೆಲವರು ಟೀಕೆ ಮಾಡಿದ್ದರು.

ಚಿತ್ರಗಳ  ವಿಷಯಕ್ಕೆ ಬಂದರೆ, ಹೃತಿಕ್ ರೋಷನ್ ಕೊನೆಯದಾಗಿ ಕಾಣಿಸಿಕೊಂಡಿದ್ದು, ‘ವಾರ್‌’ ಚಿತ್ರದಲ್ಲಿ. ಪ್ರಸ್ತುತ ತಮಿಳಿನ ಹಿಟ್ ಚಿತ್ರವಾದ ‘ವಿಕ್ರಂ ವೇದ’ದ ರಿಮೇಕ್​ನಲ್ಲಿ ಹೃತಿಕ್ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ:

‘ಪ್ರೀತಿಯ ಆರ್ಯನ್​ ಖಾನ್​..’: ಶಾರುಖ್​ ಪುತ್ರನಿಗೆ ಹೃತಿಕ್​ ರೋಷನ್​ ಬಹಿರಂಗ ಪತ್ರ

ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಮದುವೆಗೆ ದಿನಾಂಕ, ಸ್ಥಳ ಫಿಕ್ಸ್​? ರಾಯಲ್​ ವೆಡ್ಡಿಂಗ್​ ಬಗ್ಗೆ ಇಲ್ಲಿದೆ ವಿವರ

Click on your DTH Provider to Add TV9 Kannada