ನಿರಂತರ ಸೋಲಿನಿಂದ ಕಂಗೆಟ್ಟಿರುವ ಆಮಿರ್ ಖಾನ್ (Aamir Khan) ಅವರು ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಬೇಕು ಎಂಬುದು ಅವರ ಉದ್ದೇಶ. ಇದನ್ನು ಅವರು ಪದೇ ಪದೇ ಹೇಳುತ್ತಲೇ ಬರುತ್ತಿದ್ದಾರೆ. ಆಮಿರ್ ಖಾನ್ ಸುದೀರ್ಘ ಬ್ರೇಕ್ ಪಡೆದಿರುವುದು ಅನೇಕರಿಗೆ ಬೇಸರ ಮೂಡಿಸಿದೆ. ನಿರ್ಮಾಪಕರು ಕೂಡ ಆಮಿರ್ ಖಾನ್ ಕಂಬ್ಯಾಕ್ಗಾಗಿ ಕಾಯುತ್ತಿದ್ದಾರೆ. ಹಾಗಾದರೆ ಆಮಿರ್ ಖಾನ್ ಅವರು ನಟನೆಗೆ ಮರಳೋದು ಯಾವಾಗ? ಆ ಪ್ರಶ್ನೆಗೆ ಸ್ವತಃ ಆಮಿರ್ ಖಾನ್ ಅವರೇ ಉತ್ತರ ನೀಡಿದ್ದಾರೆ.
ಆಮಿರ್ ಖಾನ್ ಅವರ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ದೊಡ್ಡ ಮಟ್ಟದಲ್ಲಿ ಫ್ಲಾಪ್ ಆಯಿತು. ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುವ ಸಾಹಸ ಮಾಡಿ ಆಮಿರ್ ಖಾನ್ ಸೋತರು. ಇದಾದ ಬಳಿಕ ಆಮಿರ್ ಖಾನ್ಗೆ ಬ್ರೇಕ್ ಬೇಕು ಎನಿಸಿದೆ. ಹೀಗಾಗಿ, ಅವರು ನಟನೆಯಿಂದ ದೂರ ಉಳಿದಿದ್ದಾರೆ. ಆದರೆ, ಚಿತ್ರರಂಗದ ಜೊತೆ ಅವರ ನಂಟು ಮುಂದುವರಿದಿದೆ. ಇತ್ತೀಚೆಗೆ ಅವರು ನಟನೆಗೆ ಮರಳುವ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗೆ ನಡೆದ ‘ಕ್ಯಾರಿ ಆನ್ ಜಟ್ಟಾ 3’ ಹೆಸರಿನ ಪಂಜಾಬಿ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಆಮಿರ್ ಹಾಜರಿ ಹಾಕಿದ್ದರು. ‘ಲಾಲ್ ಸಿಂಗ್ ಚಡ್ಡಾ ಬಳಿಕ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲವಲ್ಲ’ ಎಂದು ಅವರಿಗೆ ಕೇಳಲಾಯಿತು. ಇದಕ್ಕೆ ಆಮಿರ್ ಖಾನ್ ಉತ್ತರಿಸಿದ್ದಾರೆ. ‘ಕುಟುಂಬದ ಜೊತೆ ಸಮಯ ಕಳೆಯುತ್ತಿರುವುದು ಖುಷಿ ನೀಡಿದೆ. ಸದ್ಯಕ್ಕಂತೂ ಯಾವುದೇ ಸಿನಿಮಾ ಮಾಡೋಕೆ ನಾನು ನಿರ್ಧರಿಸಿಲ್ಲ. ನಾನು ನನ್ನ ಕುಟುಂಬದ ಜೊತೆ ಇನ್ನಷ್ಟು ಸಮಯ ಕಳೆಯಬೇಕಿದೆ. ಸದ್ಯಕ್ಕೆ ಇದನ್ನು ಮಾತ್ರ ಮಾಡಬೇಕು ಎನಿಸುತ್ತಿದೆ. ನಾನು ಭಾವನಾತ್ಮಕವಾಗಿ ಸಿದ್ಧನಾದಮೇಲೆ ಸಿನಿಮಾ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಗಜನಿ’ ಚಿತ್ರಕ್ಕೆ ಬರ್ತಿದೆ ಸೀಕ್ವೆಲ್? ಆಮಿರ್ ಖಾನ್ ಚಿತ್ರ ನಿರ್ಮಾಣ ಮಾಡಲಿದೆ ದಕ್ಷಿಣ ಭಾರತದ ಸಂಸ್ಥೆ
ವೈಯಕ್ತಿಕ ಕಾರಣದಿಂದಲೂ ಅಮಿರ್ ಖಾನ್ ಆಗಾಗ ಸುದ್ದಿ ಆಗುತ್ತಾರೆ. ಅವರು ಕಿರಣ್ ರಾವ್ ಜೊತೆಗಿನ ದಾಂಪತ್ಯಕ್ಕೆ 2021ರಲ್ಲಿ ಅಂತ್ಯ ಹಾಡಿದರು. ವಿಚ್ಛೇದನ ನೀಡಿದ ಬಳಿಕ ಅವರ ಬಗ್ಗೆ ಅನೇಕ ಬಗೆಯ ಗಾಸಿಪ್ಗಳು ಹಬ್ಬಿದ್ದುಂಟು. ಅವರು ನಟಿ ಫಾತಿಮಾ ಸಹಾ ಶೇಖ್ ಜೊತೆ ಹೆಚ್ಚು ಆಪ್ತವಾಗಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರಿಬ್ಬರ ನಡುವೆ ಇರುವಂತಹ ಸಂಬಂಧ ಎಂಥದ್ದು ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಆಮಿರ್ ಖಾನ್ ಮತ್ತು ಫಾತಿಮಾ ಸನಾ ಶೇಖ್ ಅವರು ಮದುವೆ ಆಗಬಹುದು ಎಂಬ ಗುಮಾನಿ ಕೂಡ ಅನೇಕರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ