‘ಚಿಕ್ಕವಳಿದ್ದಾಗಲೇ ಅಶ್ಲೀಲ ವೆಬ್​ಸೈಟ್​ಗೆ ನನ್ನ ಫೋಟೋ ಹಾಕಿದ್ರು’: ಜಾನ್ವಿ ಕಪೂರ್​ ಬೇಸರ

|

Updated on: May 19, 2024 | 9:44 AM

ಜಾನ್ವಿ ಕಪೂರ್​ ಅವರಿಗೆ ಈಗ 27 ವರ್ಷ ವಯಸ್ಸು. ಆದರೆ ಅವರು 12 ವರ್ಷದ ಬಾಲಕಿ ಆಗಿದ್ದಾಗಲೇ ಅಶ್ಲೀಲ ವೆಬ್​ಸೈಟ್​ಗಳಲ್ಲಿ ಅವರ ಫೋಟೋಗಳನ್ನು ಕಿಡಿಗೇಡಿಗಳು ಹಾಕಿದ್ದರು. ಆ ಕಹಿ ಘಟನೆಯ ಬಗ್ಗೆ ಈಗ ಜಾನ್ವಿ ಕಪೂರ್​ ಮಾತನಾಡಿದ್ದಾರೆ. ‘ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ’ ಸಿನಿಮಾದ ಸಲುವಾಗಿ ಕರಣ್​ ಜೋಹರ್​ ನಡೆಸಿದ ಸಂದರ್ಶನದಲ್ಲಿ ಈ ವಿಚಾರಗಳ ಬಗ್ಗೆ ಜಾನ್ವಿ ಕಪೂರ್ ಬಾಯಿ ಬಿಟ್ಟಿದ್ದಾರೆ.

‘ಚಿಕ್ಕವಳಿದ್ದಾಗಲೇ ಅಶ್ಲೀಲ ವೆಬ್​ಸೈಟ್​ಗೆ ನನ್ನ ಫೋಟೋ ಹಾಕಿದ್ರು’: ಜಾನ್ವಿ ಕಪೂರ್​ ಬೇಸರ
ಜಾನ್ವಿ ಕಪೂರ್​
Follow us on

ನಟಿ ಜಾನ್ವಿ ಕಪೂರ್​ (Janhvi Kapoor) ಅವರು ತುಂಬ ಬೋಲ್ಡ್​ ಆಗಿ ಬಟ್ಟೆ ಹಾಕಿಕೊಳ್ಳುತ್ತಾರೆ. ಸಖತ್​ ಗ್ಲಾಮರಸ್​ ಆಗಿ ಕಾಣಿಸಿಕೊಳ್ಳುವ ಅವರ ಫೋಟೋಗಳು (Janhvi Kapoor Photos) ಪ್ರತಿ ದಿನ ವೈರಲ್​ ಆಗುತ್ತವೆ. ಕೆಲವರು ಮೆಚ್ಚುಗೆ ಸೂಚಿಸುತ್ತಾರೆ. ಆದರೆ ಇನ್ನೂ ಕೆಲವರು ಕೆಟ್ಟದಾಗಿ ಟ್ರೋಲ್​ ಮಾಡುತ್ತಾರೆ. ಸಾರ್ವಜನಿಕ ಜೀವನದಲ್ಲಿ ಇರುವ ನಟಿಯರು ಇಂಥದ್ದನ್ನು ಪ್ರತಿ ದಿನವೂ ಎದುರಿಸುತ್ತಾರೆ. ಅದಕ್ಕೆ ಜಾನ್ವಿ ಕಪೂರ್​ ಕೂಡ ಹೊರತಾಗಿಲ್ಲ. ಇತ್ತೀಚೆಗೆ ಅವರು ಕರಣ್​ ಜೋಹರ್​ಗೆ (Karan Johar) ನೀಡಿದ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಬಾಲಕಿ ಆಗಿದ್ದಾಗಲೇ ತಮ್ಮ ಫೋಟೋವನ್ನು ಅಶ್ಲೀಲ ವೆಬ್​ಸೈಟ್​ನಲ್ಲಿ ಹಾಕಲಾಗಿತ್ತು ಎಂದು ಜಾನ್ವಿ ಕಪೂರ್​ ಹೇಳಿದ್ದಾರೆ.

‘ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ’ ಸಿನಿಮಾದಲ್ಲಿ ಜಾನ್ವಿ ಕಪೂರ್​ ಅವರು ನಟಿಸಿದ್ದಾರೆ. ಮೇ 31ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ನಟ ರಾಜ್​ಕುಮಾರ್​ ರಾವ್​ ಜೊತೆ ಜಾನ್ವಿ ಕಪೂರ್​ ತೆರೆಹಂಚಿಕೊಂಡಿದ್ದಾರೆ. ಚಿತ್ರದ ಕುರಿತು ಕರಣ್​ ಜೋಹರ್​ ಅವರ ಸಂದರ್ಶನ ನಡೆಸಿದ್ದಾರೆ. ಈ ವೇಳೆ ಜಾನ್ವಿ ಕಪೂರ್​ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಪ್ರಶ್ನೆಗಳು ಎದುರಾಗಿವೆ.

‘ಇದನ್ನು ನಾನು ತುಂಬ ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ನಾನು 12 ಅಥವಾ 13 ವರ್ಷದ ಬಾಲಕಿ ಆಗಿದ್ದಾಗ ಮೊದಲ ಬಾರಿಗೆ ಮಾಧ್ಯಮಗಳು ನನ್ನನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಿದ್ದವು. ಅಪ್ಪ-ಅಮ್ಮನ ಜೊತೆ ನಾನು ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಆ ಸಂದರ್ಭದಲ್ಲಿ ಕ್ಲಿಕ್ಕಿಸಿದ ನನ್ನ ಫೋಟೋಗಳನ್ನು ಮೀಡಿಯಾದಲ್ಲಿ ಪ್ರಕಟಿಸಿದ್ದರು’ ಎಂದಿದ್ದಾರೆ ಜಾನ್ವಿ ಕಪೂರ್​.

ಇದನ್ನೂ ಓದಿ: ಜಾನ್ವಿ ಕಪೂರ್​ ಬೆನ್ನಿನಲ್ಲಿ ಕ್ರಿಕೆಟ್​ ಬಾಲ್​ಗಳ ಸಾಲು; ಇದೆಂಥಾ ಡ್ರೆಸ್​?

‘ಆತತಾನೇ ಸೋಶಿಯಲ್​ ಮೀಡಿಯಾ ಅಥವಾ ಇನ್​ಸ್ಟಾಗ್ರಾಮ್​ ಜನಪ್ರಿಯತೆ ಪಡೆದುಕೊಳ್ಳುತ್ತಿತ್ತು. ಅಶ್ಲೀಲ ವೆಬ್​ಸೈಟ್ ರೀತಿ ಕಾಣುವಂತಹ ಜಾಲತಾಣದಲ್ಲಿ ನನ್ನ ಫೋಟೋಗಳನ್ನು ಹಾಕಿದ್ದರು. ನಮ್ಮ ಶಾಲೆಯಲ್ಲಿನ ಹುಡುಗರು ಆ ಫೋಟೋಗಳನ್ನು ನೋಡಿ ನಗುತ್ತಿದ್ದರು. ಅದೊಂದು ವಿಚಿತ್ರವಾದ ಸಂಗತಿ’ ಎಂದು ಜಾನ್ವಿ ಕಪೂರ್​ ಹೇಳಿದ್ದಾರೆ. ಇಂದಿಗೂ ಕೂಡ ಜಾನ್ವಿ ಕಪೂರ್​ ಅವರನ್ನು ಕೆಲವರು ಟ್ರೋಲ್​ ಮಾಡುತ್ತಾರೆ. ನೆಪೋಟಿಸಂ ಫಲಾನುಭವಿ ಎಂದು ಜನರು ಅಣಕಿಸುತ್ತಾರೆ. ಅದನ್ನೆಲ್ಲ ಎದುರಿಸಿಕೊಂಡು ಜಾನ್ವಿ ಕಪೂರ್​ ಮುಂದೆ ಸಾಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.