ಬಾಲಿವುಡ್ನ ಬಾದ್ಷಾ ಶಾರುಖ್ ಖಾನ್ (Shah Rukh Khan) ಅವರು ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರು ನಟಿಸಿದ ‘ಜವಾನ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಸೆಪ್ಟೆಂಬರ್ 7ರಂದು ಈ ಸಿನಿಮಾ ಬಿಡುಗಡೆ ಆಯಿತು. 15 ದಿನಗಳ ಕಾಲ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಅತ್ಯುತ್ತಮವಾಗಿ ಪ್ರದರ್ಶನ ಕಂಡಿದೆ. ನೂರಾರು ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಮುಂದುವರಿದಿದೆ. ಭಾರತ ಮಾತ್ರವಲ್ಲದೇ ವಿದೇಶದಲ್ಲೂ ‘ಜವಾನ್’ (Jawan Movie) ಹವಾ ಜೋರಾಗಿದೆ. 15 ದಿನಕ್ಕೆ ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರಕ್ಕೆ 526 ಕೋಟಿ ರೂಪಾಯಿ ಆಗಿದೆ. ಆ ಮೂಲಕ ಶಾರುಖ್ ಖಾನ್ ಅವರು ಗಲ್ಲಾಪೆಟ್ಟಿಗೆಯಲ್ಲಿ ಹೊಸ ಹೊಸ ದಾಖಲೆ ಬರೆದಿದ್ದಾರೆ. ಶಾರುಖ್ ನಟನೆಯ ‘ಪಠಾಣ್’ (Pathaan) ಚಿತ್ರದ ಕಲೆಕ್ಷನ್ ಅನ್ನು ಹಿಂದಿಕ್ಕಲು ಇನ್ನು ಕೆಲವೇ ಕೋಟಿ ರೂಪಾಯಿಗಳು ಮಾತ್ರ ಬಾಕಿ ಇವೆ.
ಶಾರುಖ್ ಖಾನ್ ಪಾಲಿಗೆ 2023ರ ವರ್ಷ ಸಖತ್ ಆಶಾದಾಯಕವಾಗಿದೆ. ಈ ವರ್ಷ ಆರಂಭದಲ್ಲಿ ತೆರೆಕಂಡ ‘ಪಠಾಣ್’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ ಒಟ್ಟು 543 ಕೋಟಿ ರೂಪಾಯಿ ಗಳಿಸಿತ್ತು. ಈಗ ‘ಜವಾನ್’ ಸಿನಿಮಾ 526 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ‘ಪಠಾಣ್’ ಚಿತ್ರವನ್ನು ಹಿಂದಿಕ್ಕಲು ಕೇವಲ 17 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ. ಎರಡು ವೀಕೆಂಡ್ಗಳಲ್ಲಿ ‘ಜವಾನ್’ ಸಿನಿಮಾ ಅತ್ಯುತ್ತಮವಾಗಿ ಕಮಾಯಿ ಮಾಡಿದೆ. ಈಗ ಮೂರನೇ ವೀಕೆಂಡ್ನಲ್ಲೂ ಅನೇಕ ಕಡೆಗಳಲ್ಲಿ ಹೌಸ್ಫುಲ್ ಆಗುವ ನಿರೀಕ್ಷೆ ಇದೆ. ಹಾಗಾಗಿ ಅನಾಯಾಸವಾಗಿ ‘ಪಠಾಣ್’ ಚಿತ್ರದ ಕಲೆಕ್ಷನ್ ಅನ್ನು ‘ಜವಾನ್’ ಸಿನಿಮಾ ಹಿಂದಿಕ್ಕಲಿದೆ.
ಇದನ್ನೂ ಓದಿ: ಯುವ ನಟಿ ಲೆಹರ್ ಖಾನ್ಗೆ ‘ಜವಾನ್’ ಸಿನಿಮಾದಿಂದ ಸಿಕ್ತು ಸೂಪರ್ ಸಕ್ಸಸ್
ತಮಿಳು ನಿರ್ದೇಶಕ ಅಟ್ಲಿ ಅವರು ಡೈರೆಕ್ಷನ್ ಮಾಡಿದ ಮೊದಲ ಹಿಂದಿ ಸಿನಿಮಾ ‘ಜವಾನ್’. ಚೊಚ್ಚಲ ಪ್ರಯತ್ನದಲ್ಲೇ ಅವರಿಗೆ ಭರ್ಜರಿ ಗೆಲುವು ಸಿಕ್ಕಿದೆ. ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿರುವುದರಿಂದ ಬಾಲಿವುಡ್ನಲ್ಲಿ ಅವರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಶಾರುಖ್ ಖಾನ್ ಜೊತೆ ನಟಿಸಿದ ವಿಜಯ್ ಸೇತುಪತಿ, ಪ್ರಿಯಾಮಣಿ, ನಯನತಾರಾ ಮುಂತಾದ ಕಲಾವಿದರು ಕೂಡ ಮಿಂಚುತ್ತಿದ್ದಾರೆ. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಹವಾ ಹೆಚ್ಚಾಗಿದೆ. ವಿಶ್ವಾದ್ಯಂತ ‘ಜವಾನ್’ ಸಿನಿಮಾದ ಗಳಿಕೆ ಸಾವಿರ ಕೋಟಿ ರೂಪಾಯಿ ಸಮೀಪದಲ್ಲಿದೆ.
ಇದನ್ನೂ ಓದಿ: ದಳಪತಿ ವಿಜಯ್ ಹೆಸರಲ್ಲಿ ಪ್ರಿಯಾಮಣಿಗೆ ಮೋಸ ಮಾಡಿದ ‘ಜವಾನ್’ ನಿರ್ದೇಶಕ ಅಟ್ಲಿ
ಶಾರುಖ್ ಖಾನ್ ಅವರು ಈಗ ‘ಡಂಕಿ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ರಾಜ್ ಕುಮಾರ್ ಹಿರಾನಿ. ಹಿಂದಿ ಚಿತ್ರರಂಗದಲ್ಲಿ ಹಿರಾನಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಸಿನಿಮಾಗೆ ಹಣ ಹೂಡಿದರೆ ಶೇಕಡ 100ರಷ್ಟು ಸಕ್ಸಸ್ ಗ್ಯಾರಂಟಿ ಎಂಬುದು ಸಾಬೀತಾಗಿದೆ. ಹಾಗಾಗಿ ‘ಡಂಕಿ’ ಸಿನಿಮಾ ಕೂಡ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಟ್ರೇಡ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.