‘ಅನಿಮಲ್’ ಹೊಸ ಪೋಸ್ಟರ್ ಬಿಡುಗಡೆ: ಖಡಕ್ ಲುಕ್ನಲ್ಲಿ ಅನಿಲ್ ಕಪೂರ್
Ranbir Kapoor: ರಣ್ಬೀರ್ ಕಪೂರ್ ನಟನೆಯ ಬಹುನಿರೀಕ್ಷಿತ 'ಅನಿಮಲ್' ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಪೋಸ್ಟರ್ನಲ್ಲಿ ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.
ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿದ್ದ ಬಾಲಿವುಡ್ (Bollywood) ನಿಧಾನಕ್ಕೆ ಅದರಿಂದ ಹೊರಗೆ ಬಂದಿದೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಕೋವಿಡ್ ಬಳಿಕ ಹಿಟ್ ಸಿನಿಮಾಗಳಿಲ್ಲದೆ ಬಣಗುಟ್ಟಿದ್ದ ಬಾಲಿವುಡ್ಗೆ ಕಳೆ ತುಂಬಿದರೆ, ‘ದೃಶ್ಯಂ’, ‘ಬ್ರಹ್ಮಾಸ್ತ್ರ’, ಇತ್ತೀಚೆಗಿನ ‘ಗದರ್ 2’ ಸಿನಿಮಾಗಳು ಗೆದ್ದು ನಿರ್ಮಾಪಕರಲ್ಲಿ ಆಶಾ ಭಾವ ಮೂಡಿಸಿದ್ದವು. ಬಳಿಕ ಬಂದ ‘ಜವಾನ್’ ಸಿನಿಮಾ ಸೂಪರ್-ಡೂಪರ್ ಹಿಟ್ ಆಗುವ ಮೂಲಕ ಬಾಲಿವುಡ್ ಮತ್ತೆ ಹಳಿಗೆ ಬರುವಂತೆ ಮಾಡಿದೆ. ಇದೀಗ ಬಾಲಿವುಡ್ ಚಿತ್ರಕರ್ಮಿಗಳ ಕಣ್ಣು ಹಾಗೂ ಸಿನಿಮಾ ಪ್ರೇಮಿಗಳ ಕಣ್ಣು ರಣ್ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾದತ್ತ ನೆಟ್ಟಿದೆ.
ರಣ್ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಮೇಲೆ ಬಹಳ ದೊಡ್ಡ ನಿರೀಕ್ಷೆ ಇದೆ. ಸಿನಿಮಾವನ್ನು ದಕ್ಷಿಣ ಭಾರತ ಚಿತ್ರರಂಗದ ನಿರ್ದೇಶಕ ಸಂದೀಪ್ ವಂಗಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಪೋಸ್ಟರ್ ಒಂದು ಇದೀಗ ಬಿಡುಗಡೆ ಆಗಿದೆ. ಪೋಸ್ಟರ್ನಲ್ಲಿ ನಾಯಕ ರಣ್ಬೀರ್ ಕಪೂರ್ ಇಲ್ಲ ಬದಲಿಗೆ ಅನಿಲ್ ಕಪೂರ್ ಇದ್ದಾರೆ. ಗಾಯಾಳುವಾಗಿ ಕೋಪದಿಂದ ಯಾರನ್ನೋ ದಿಟ್ಟಿಸುತ್ತಿರುವ ಅನಿಲ್ ಕಪೂರ್ರ ಚಿತ್ರ ಖಡಕ್ ಆಗಿದೆ. ‘ಅನಿಮಲ್’ ಸಿನಿಮಾದಲ್ಲಿ ಅನಿಲ್ ಕಪೂರ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರಾ ಎಂಬ ಅನುಮಾನವೂ ಪೋಸ್ಟರ್ನಿಂದ ವ್ಯಕ್ತವಾಗುತ್ತಿದೆ.
‘ಅನಿಮಲ್’ ಸಿನಿಮಾ ನಿರ್ದೇಶನ ಮಾಡಿರುವ ಸಂದೀಪ್ ರೆಡ್ಡಿ ವಂಗಾ ಈ ಹಿಂದೆ ಸೂಪರ್ ಡೂಪರ್ ಹಿಟ್ ಸಿನಿಮಾ ‘ಅರ್ಜುನ್ ರೆಡ್ಡಿ’ ನಿರ್ದೇಶನ ಮಾಡಿದ್ದರು. ಅದಾದ ಬಳಿಕ ಅದೇ ಸಿನಿಮಾದ ಹಿಂದಿ ರೀಮೇಕ್ ‘ಕಬೀರ್’ ಅನ್ನು ನಿರ್ದೇಶನ ಮಾಡಿದ್ದಾರೆ. ‘ಅನಿಮಲ್’ ಅವರ ಮೂರನೇ ಸಿನಿಮಾ. ‘ಅನಿಮಲ್’ ಸಿನಿಮಾ ಹಿಂಸಾತ್ಮಕತೆ ಹೆಚ್ಚಿಗಿರುವ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾದ ಪೋಸ್ಟರ್ ಒಂದರಲ್ಲಿ ರಣ್ಬೀರ್ ಕಪೂರ್ ರಕ್ತ-ಸಿಕ್ತವಾಗಿರುವ ಕೊಡಲಿಯೊಂದನ್ನು ಬಗಲಲ್ಲಿ ಇರಿಸಿಕೊಂಡು ಸಿಗರೇಟು ಹೊತ್ತಿಸಿಕೊಳ್ಳುತ್ತಿರುವ ಚಿತ್ರವಿದೆ. ‘ಅನಿಮಲ್’ ಸಿನಿಮಾದ ಟೀಸರ್ ಇದೇ ತಿಂಗಳು 28ರಂದು ಬಿಡುಗಡೆ ಆಗಲಿದ್ದು, ಸಿನಿಮಾ ಡಿಸೆಂಬರ್ 1 ರಂದು ತೆರೆಗೆ ಬರಲಿದೆ.
ರಣ್ಬೀರ್ ಕಪೂರ್, ತಮ್ಮ ಲವರ್ಬಾಯ್ ಇಮೇಜಿನಿಂದ ಹೊರಗೆ ಬಂದು ಮಾಸ್ ಸಿನಿಮಾಗಳತ್ತ ಗಮನ ಹರಿಸುತ್ತಿದ್ದಾರೆ. ‘ಅನಿಮಲ್’ ಸಿನಿಮಾ ಅವರ ಮಾಸ್ ಇಮೇಜಿಗೆ ಬೂಸ್ಟ್ ನೀಡಲಿದೆ ಎನ್ನಲಾಗುತ್ತಿದೆ. ‘ಅನಿಮಲ್’ ಬಳಿಕ ರಣ್ಬೀರ್ ಕಪೂರ್ ‘ಬ್ರಹ್ಮಾಸ್ತ್ರ 2’ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ದಕ್ಷಿಣ ಭಾರತ ನಿರ್ದೇಶಕರೊಬ್ಬರ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಸಂದೀಪ್ ರೆಡ್ಡಿ ವಂಗಾ, ನಿರ್ದೇಶಿಸಿರುವುದು ಒಂದೇ ಸಿನಿಮಾ (ಒಂದು ರೀಮೇಕ್) ಆದರೂ ಸಾಲು-ಸಾಲು ಸ್ಟಾರ್ ನಟರೊಟ್ಟಿಗೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ‘ಅನಿಮಲ್’ ಸಿನಿಮಾ ಮುಗಿದ ಕೂಡಲೇ ಪ್ರಭಾಸ್ ಜೊತೆಗೆ ‘ಸ್ಪಿರಿಟ್’ ಸಿನಿಮಾ ಪ್ರಾರಂಭಿಸಲಿದ್ದಾರೆ. ಆ ಸಿನಿಮಾ ಮುಗಿದ ಬಳಿಕ ಅಲ್ಲು ಅರ್ಜುನ್ಗಾಗಿ ಹೊಸ ಸಿನಿಮಾ ಒಂದನ್ನು ನಿರ್ದೇಶನ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ