ಶಾರುಖ್ ಖಾನ್ (Shah Rukh Khan) ಹಾಗೂ ಜೂಲಿ ಚಾವ್ಲಾ (Juhi Chawla) ಜೋಡಿ ಬಾಲಿವುಡ್ನ ಅತ್ಯಂತ ಯಶಸ್ವಿ ಜೋಡಿಯಲ್ಲೊಂದು. ಈರ್ವರೂ ಒಟ್ಟಿಗೆ ನಟಿಸಿರುವ ಹಲವು ಸಿನಿಮಾಗಳು ಸೂಪರ್-ಡೂಪರ್ ಹಿಟ್ ಆಗಿವೆ. ಬೆಳ್ಳಿತೆರೆಯ ಮೇಲೆ ಸೂಪರ್ ಹಿಟ್ ಜೋಡಿಯಾಗಿರುವ ಶಾರುಖ್ ಹಾಗೂ ಜೂಹಿ ಚಾವ್ಲಾ ಸಿನಿಮಾದ (Movie) ಹೊರಗೆ ಉತ್ತಮ ಸ್ನೇಹಿತರು. ಕೆಕೆಆರ್ ತಂಡದ ಜಂಟಿ ಮಾಲೀಕರು ಸಹ. ಶಾರುಖ್ ಖಾನ್ ಕುಟುಂಬದ ಜೊತೆ ಆಪ್ತ ಬಂಧ ಹೊಂದಿರುವ ಜೂಹಿ ಚಾವ್ಲಾ ಹಾಗೂ ಅವರ ಪತಿ, ಶಾರುಖ್ ಕುಟುಂಬ ಕಷ್ಟದಲ್ಲಿದ್ದಾಗ ಬೆಂಬಲಿಸಿದವರಲ್ಲಿ ಒಬ್ಬರು.
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ಡ್ರಗ್ಸ್ ಪ್ರಕರಣದಲ್ಲಿ ಎನ್ಸಿಬಿಯು ಆರ್ಯನ್ ಖಾನ್ ಹಾಗೂ ಇನ್ನಿಬ್ಬರನ್ನು 2021ರ ಅಕ್ಟೋಬರ್ 3 ರಂದು ಬಂಧಿಸಿತ್ತು. ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾದ ಆ ಪ್ರಕರಣದಲ್ಲಿ ಹಲವು ದಿನ ಜೈಲಿನಲ್ಲಿದ್ದ ಆರ್ಯನ್ ಖಾನ್ ಅಕ್ಟೋಬರ್ 30 ರಂದು ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದರು. ಆರ್ಯನ್ ಖಾನ್ ರ ಜಾಮೀನು ಬಾಂಡ್ಗೆ ಸಹಿ ಹಾಕಿದ್ದು ನಟಿ ಜೂಹಿ ಚಾವ್ಲಾ.
ಈ ಬಗ್ಗೆ ಈಗ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಜೂಹಿ ಚಾವ್ಲಾ, ”ನಮಗೆ ಆಘಾತವಾಗಿತ್ತು, ಹಾಗೊಂದು ದಿನವನ್ನು ನಾವು ನಿರೀಕ್ಷೆ ಸಹ ಮಾಡಿರಲಿಲ್ಲ. ಶಾರುಖ್ ಖಾನ್ ಹಾಗೂ ಅವರ ಕುಟುಂಬ ತೀವ್ರ ಸಂಕಷ್ಟದಲ್ಲಿತ್ತು, ನನಗೆ ಅವರಿಗೆ ಸಹಾಯ ಮಾಡಲೇಬೇಕು ಅವರ ಪರವಾಗಿ ನಿಲ್ಲಲೇ ಬೇಕು ಎನಿಸಿತ್ತು, ಆ ಸಮಯದಲ್ಲಿ ಈ ಅವಕಾಶ ಒದಗಿಬಂತು. ನಾನು ಒಂದು ಲಕ್ಷದ ಜಾಮೀನು ಬಾಂಡ್ಗೆ ಸಹಿ ಹಾಕಿದೆ” ಎಂದು ನೆನಪಿಸಿಕೊಂಡಿದ್ದಾರೆ.
ಶಾರುಖ್ ಖಾನ್ ಬಗ್ಗೆ ಮಾತನಾಡುತ್ತಾ, ”ಇತ್ತೀಚೆಗೆ ಶಾರುಖ್ ಖಾನ್ ಅನ್ನು ಭೇಟಿಯಾಗುವುದು ಕಡಿಮೆ ಆಗಿಬಿಟ್ಟಿದೆ. ಶಾರುಖ್ ಖಾನ್ ಅನ್ನು ಕಂಡು ಬಹಳ ಸಮಯವಾಯ್ತು. ಆದರೆ ನನ್ನ ಪತಿ ಜಯ್ ಮೆಹ್ತಾ ಶಾರುಖ್ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಅವರಿಬ್ಬರು ಹಲವು ವಿಷಯಗಳ ಬಗ್ಗೆ ಸದಾ ಚರ್ಚಿಸುತ್ತಿರುತ್ತಾರೆ. ನಾನೂ ಸಹ ಸಂಪರ್ಕದಲ್ಲಿದ್ದೇನಾದರೂ ಶಾರುಖ್ ಖಾನ್ ಅನ್ನು ಭೇಟಿಯಾಗಿ ಹೆಚ್ಚು ಸಮಯವಾಗಿದೆ” ಎಂದಿದ್ದಾರೆ ಜೂಹಿ ಚಾವ್ಲಾ.
ಶಾರುಖ್ ಖಾನ್ ಹಾಗೂ ಜೂಹಿ ಚಾವ್ಲಾ ಇಬ್ಬರೂ ಕೆಕೆಆರ್ ತಂಡದ ಸಹಮಾಲೀಕರು. ಐಪಿಎಲ್ ಸಂದರ್ಭದಲ್ಲಿ ಒಟ್ಟಿಗೆ ಹಲವು ಬಾರಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಐಪಿಎಲ್ನಲ್ಲಿ ಶಾರುಖ್ ಖಾನ್ ಕೆಕೆಆರ್ನ ಒಂದು ಪಂದ್ಯವನ್ನು ಕ್ರೀಡಾಂಗಣದಲ್ಲಿ ನೋಡಿದರು. ಜೂಹಿ ಚಾವ್ಲಾ, ಶಾಂತಿ-ಕ್ರಾಂತಿ, ಕಿಂದರ ಜೋಗಿ, ಪ್ರೇಮಲೋಕ ಹಾಗೂ 2017 ರ ಪುಷ್ಪಕ ವಿಮಾನ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
2021 ರ ಅಕ್ಟೋಬರ್ನಲ್ಲಿ ಆರ್ಯನ್ ಖಾನ್ ಅನ್ನು ಡ್ರಗ್ಸ್ ಪ್ರಕರಣದಲ್ಲಿ ಎನ್ಸಿಬಿಯು ಬಂಧಿಸಿತ್ತು. ಆದರೆ ಕೆಲವು ಹೊರಗಿನ ವ್ಯಕ್ತಿಗಳು ಈ ಬಂಧನದಲ್ಲಿ ಶಾಮೀಲಾಗಿದ್ದರೆಂಬುದು ಕೆಲವು ಫೋಟೊ ಹಾಗೂ ವಿಡಿಯೋಗಳಿಂದ ಬಹಿರಂಗವಾಯ್ತು. ಮಾತ್ರವೇ ಅಲ್ಲದೆ, ಶಾರುಖ್ ಖಾನ್ರ ಮ್ಯಾನೇಜರ್ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಪ್ರಕರಣವೂ ಬೆಳಕಿಗೆ ಬಂತು. ಅದಾದ ಬಳಿಕ ಎನ್ಸಿಬಿಯ ಕಾರ್ಯವೈಖರಿಯ ಬಗ್ಗೆ, ತನಿಖೆಯಲ್ಲಿದ್ದ ಲೋಪಗಳ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯ್ತು. ಎನ್ಸಿಬಿಯ ಕೇಂದ್ರ ಕಚೇರಿಯ ವಿಶೇಷ ತಂಡವು ಪ್ರಕರಣದ ಆಂತರಿಕ ತನಿಖೆ ನಡೆಸಿ, ತನಿಖೆಯಲ್ಲಿನ ಲೋಪವನ್ನು ಒಪ್ಪಿಕೊಂಡಿತಲ್ಲದೆ, ಚಾರ್ಜ್ಶೀಟ್ನಲ್ಲಿ ಆರ್ಯನ್ ಖಾನ್ ಹೆಸರು ಕೈಬಿಟ್ಟಿತು. ಆರ್ಯನ್ ಖಾನ್ ಅನ್ನು ಬಂಧಿಸಿದ್ದ ಎನ್ಸಿಬಿಯ ಮುಖ್ಯಾಧಿಕಾರಿ ಸಮೀರ್ ವಾಂಖೆಡೆಗೆ ವರ್ಗಾವಣೆ ಶಿಕ್ಷೆ ನೀಡಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ