‘ಬ್ರಹ್ಮಾಸ್ತ್ರ’ ಚಿತ್ರದ ಕಲೆಕ್ಷನ್ ಲೆಕ್ಕ ಫೇಕ್? ಅನುಮಾನ ವ್ಯಕ್ತಪಡಿಸಿದ ನಟಿ ಕಂಗನಾ ರಣಾವತ್
Brahmastra Box Office Collection: ಕರಣ್ ಜೋಹರ್ ಮಾಡುವ ಪ್ರತಿ ಸಿನಿಮಾವನ್ನು ಕಂಗನಾ ರಣಾವತ್ ವಿರೋಧಿಸುತ್ತಾರೆ. ಈಗ ‘ಬ್ರಹ್ಮಾಸ್ತ್ರ’ ಚಿತ್ರದ ವಿಚಾರದಲ್ಲಿಯೂ ಹಾಗೆಯೇ ಆಗುತ್ತಿದೆ.
ಬರಡಾಗಿದ್ದ ಬಾಲಿವುಡ್ ಗಲ್ಲಾಪೆಟ್ಟಿಗೆಗೆ ‘ಬ್ರಹ್ಮಾಸ್ತ್ರ’ (Brahmastra) ಚಿತ್ರದಿಂದ ಹೊಸ ಜೀವ ಬಂದಂತೆ ಆಗಿದೆ. ಮೊದಲ ಎರಡು ದಿನದಲ್ಲೇ ಈ ಸಿನಿಮಾ ವಿಶ್ವಾದ್ಯಂತ 160 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಈ ಕುರಿತು ಸ್ವತಃ ನಿರ್ಮಾಪಕ ಕರಣ್ ಜೋಹರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ನಟಿ ಕಂಗನಾ ರಣಾವತ್ (Kangana Ranaut) ಅವರು ಈ ಲೆಕ್ಕದ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ರಣಬೀರ್ ಕಪೂರ್, ಆಲಿಯಾ ಭಟ್ ಮುಖ್ಯಭೂಮಿಕೆ ನಿಭಾಯಿಸಿರುವ ಈ ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ಕಿದೆ. ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಬಿಡುಗಡೆ ಆಗಿದೆ. ಅದೇನೇ ಇದ್ದರೂ ‘ಬ್ರಹ್ಮಾಸ್ತ್ರ’ ಸಿನಿಮಾದ ಬಾಕ್ಸ್ ಆಫೀಸ್ (Box Office Collection) ಲೆಕ್ಕಾಚಾರ ಶೇಕಡ 70ರಷ್ಟು ನಕಲಿ ಎಂದು ಕೆಲವರು ಆರೋಪಿಸುತ್ತಿದ್ದಾರೆ.
ಕಂಗನಾ ರಣಾವತ್ ಅವರು ಬಾಲಿವುಡ್ನ ಅನೇಕರನ್ನು ಎದುರು ಹಾಕಿಕೊಂಡಿದ್ದಾರೆ. ಕರಣ್ ಜೋಹರ್ ಅವರನ್ನು ಕಂಡರೆ ಕಂಗನಾಗೆ ಆಗುವುದೇ ಇಲ್ಲ. ಕರಣ್ ಮಾಡುವ ಪ್ರತಿ ಸಿನಿಮಾ ಮತ್ತು ಶೋಗಳನ್ನು ಕಂಗನಾ ವಿರೋಧಿಸುತ್ತಾರೆ. ಈಗ ‘ಬ್ರಹ್ಮಾಸ್ತ್ರ’ ವಿಚಾರದಲ್ಲಿಯೂ ಹಾಗೆಯೇ ಆಗುತ್ತಿದೆ. ಈ ಚಿತ್ರದ ಬಾಕ್ಸ್ ಆಫೀಸ್ ಲೆಕ್ಕ ಸಂಪೂರ್ಣ ನಿಜವಲ್ಲ ಎಂದು ಕೆಲವರು ವಾದಿಸುತ್ತಿದ್ದಾರೆ. ಅಂಥ ಪೋಸ್ಟ್ಗಳನ್ನು ಕಂಗನಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಸ್ಟೋರಿಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಎರಡು ದಿನಕ್ಕೆ ವಿಶ್ವಾದ್ಯಂತ 160 ಕೋಟಿ ಕಮಾಯಿ:
ಸೆಪ್ಟೆಂಬರ್ 9ರಂದು ರಿಲೀಸ್ ಆದ ‘ಬ್ರಹ್ಮಾಸ್ತ್ರ’ ಚಿತ್ರ ವಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ವಿಮರ್ಶಕರು ಈ ಸಿನಿಮಾವನ್ನು ತೆಗಳಿದ್ದಾರೆ. ಆದರೆ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ‘ಬ್ರಹ್ಮಾಸ್ತ್ರ’ ಸಿನಿಮಾ ಹಿಂದೆ ಬಿದ್ದಿಲ್ಲ. 2 ದಿನಕ್ಕೆ ಈ ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 160 ಕೋಟಿ ರೂಪಾಯಿ ಬಾಚಿಕೊಂಡಿದೆ. ಮೂರನೇ ದಿನದ ಕಲೆಕ್ಷನ್ ಸೇರಿದರೆ ಅನಾಯಾಸವಾಗಿ 200 ಕೋಟಿ ರೂಪಾಯಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಈ ಸಿನಿಮಾದಿಂದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಡಿಮ್ಯಾಂಡ್ ಹೆಚ್ಚಿದೆ.
ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಅಕ್ಕಿನೇನಿ ನಾಗಾರ್ಜುನ ಮುಂತಾದ ಸ್ಟಾರ್ ಕಲಾವಿದರು ಅಭಿನಯಿಸಿದ್ದಾರೆ. ಶಾರುಖ್ ಖಾನ್ ಅವರು ಒಂದು ಅತಿಥಿ ಪಾತ್ರ ಮಾಡಿರುವುದು ವಿಶೇಷ. ವೀಕೆಂಡ್ನಲ್ಲಿ ‘ಬ್ರಹ್ಮಾಸ್ತ್ರ’ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ನೋಡಿದ್ದಾರೆ. ಅದರ ಪರಿಣಾಮವಾಗಿ ದೊಡ್ಡ ಮೊತ್ತದ ಕಲೆಕ್ಷನ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.