‘ಚಿತ್ರರಂಗ ಬಿಟ್ಟು ಹೋಗು ಅಂದಿದ್ದರು’: ಕರಣ್ ಜೋಹರ್, ಕೇತನ್ ಮೆಹ್ತಾ ಮೇಲೆ ಕಂಗನಾ ಆರೋಪ
ಅನೇಕ ಸಮಸ್ಯೆಗಳನ್ನು ಎದುರಿಸಿ ಸ್ಟಾರ್ ನಟಿ ಆದವರು ಕಂಗನಾ ರಣಾವತ್. ಈಗ ಅವರು ಸಂಸದೆ ಆಗಿಯೂ ಹೆಸರು ಮಾಡಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಕಂಗನಾಗೆ ಹಲವರ ವಿರೋಧ ಇತ್ತು. ಆ ಪೈಕಿ ಕೇತನ್ ಮೆಹ್ತಾ, ಕರಣ್ ಜೋಹರ್ ಅವರ ಹೆಸರನ್ನು ಕಂಗನಾ ಈಗ ಹೇಳಿದ್ದಾರೆ. ಇದಕ್ಕೆ ಕೇತನ್ ಮತ್ತು ಕರಣ್ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.
ನಟಿ ಕಂಗನಾ ರಣಾವತ್ ಅವರು ಈಗಾಗಲೇ ಅನೇಕ ಸೆಲೆಬ್ರಿಟಿಗಳನ್ನು ಎದುರುಹಾಕಿಕೊಂಡಿದ್ದಾರೆ. ಸಿನಿಮಾ ಫ್ಯಾಮಿಲಿಯ ಹಿನ್ನೆಲೆ ಇಲ್ಲದೇ ಬಂದ ಕಂಗನಾ ಚಿತ್ರರಂಗದಲ್ಲಿ ಸಾಕಷ್ಟು ಕಷ್ಟದ ದಿನಗಳನ್ನು ಕಂಡಿದ್ದಾರೆ. ಅವರಿಗೆ ಸರಿಯಾದ ಸಕ್ಸಸ್ ಸಿಗಲು ಹಲವು ವರ್ಷಗಳೇ ಬೇಕಾದವು. ಆರಂಭದಲ್ಲಿ ಅವರಿಗೆ ಕೆಲವರು ಬೆದರಿಕೆ ಹಾಕಿದ್ದರು. ಚಿತ್ರರಂಗ ಬಿಟ್ಟು ಹೋಗುವಂತೆ ಸೂಚಿಸಿದ್ದರು. ಅದನ್ನೆಲ್ಲ ಈಗ ಕಂಗನಾ ರಣಾವತ್ ನೆನಪಿಸಿಕೊಂಡಿದ್ದಾರೆ. ಕರಣ್ ಜೋಹರ್, ಕೇತನ್ ಮೆಹ್ತಾ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ ಈ ವಿಚಾರಗಳ ಬಗ್ಗೆ ಅವರು ಮಾತಾಡಿದ್ದಾರೆ.
ಕರಣ್ ಜೋಹರ್ ಅವರನ್ನು ಕಂಗನಾ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ನೆಪೋಟಿಸಂ ಹೆಚ್ಚಾಗಲೂ ಕರಣ್ ಜೋಹರ್ ಕಾರಣ ಎಂಬುದು ಕಂಗನಾ ಅವರ ವಾದ. ಅದು ನಿಜ ಕೂಡ ಹೌದು. ಅನೇಕ ಸ್ಟಾರ್ ಕಿಡ್ಗಳನ್ನು ಕರಣ್ ಜೋಹರ್ ಅವರು ಲಾಂಚ್ ಮಾಡಿದ್ದಾರೆ. ಹಾಗಾಗಿ ಅವರನ್ನು ಕಂಡರೆ ಕಂಗನಾ ರಣಾವತ್ ಉರಿದು ಬೀಳುತ್ತಾರೆ.
ಇದನ್ನೂ ಓದಿ: ‘ಟೀಕೆಗೆಳಿಗೆ ತಕ್ಕ ಉತ್ತರ ಕೊಟ್ಟರು’; ಇಂದಿರಾ ಗಾಂಧಿ ಬಗ್ಗೆ ಮೆಚ್ಚುಗೆ ಸೂಚಿಸಿದ ಕಂಗನಾ ರಣಾವತ್
ಬಾಲಿವುಡ್ನ ಖ್ಯಾತ ನಿರ್ದೇಶಕ ಕೇತನ್ ಮೆಹ್ತಾ, ಕರಣ್ ಜೋಹರ್ ಮಂತಾದವರು ಕಂಗನಾ ರಣಾವತ್ಗೆ ಚಿತ್ರರಂಗ ಬಿಟ್ಟುಹೋಗುವಂತೆ ಸೂಚಿಸಿದ್ದರಂತೆ. ಆ ವಿಚಾರವನ್ನು ಅವರು ‘ದೈನಿಕ್ ಭಾಸ್ಕರ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈಗ ಕಂಗನಾ ಅವರ ಇಮೇಜ್ ಬದಲಾಗಿದೆ. ರಾಜಕೀಯದಲ್ಲಿ ಅವರು ಗೆಲುವು ಕಂಡಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ‘ಎಮರ್ಜೆನ್ಸಿ’ ಟ್ರೇಲರ್: ಇಂದಿರಾ ಗಾಂಧಿ ಪಾತ್ರ ಮಾಡಿದ ಕಂಗನಾಗೆ ರಾಷ್ಟ್ರ ಪ್ರಶಸ್ತಿ ನಿರೀಕ್ಷಿಸಿದ ಫ್ಯಾನ್ಸ್
ವಿವಾದಗಳು ಕಂಗನಾ ರಣಾವತ್ ಅವರಿಗೆ ಹೊಸದೇನೂ ಅಲ್ಲ. ಅವರು ಹೆಚ್ಚು ಹೆಚ್ಚು ವಿವಾದ ಮಾಡಿಕೊಂಡಷ್ಟೂ ಅವರ ವೃತ್ತಿಬದುಕು ಹಳ್ಳ ಹಿಡಿಯಿತು. ಕಳೆದ ಒಂದಷ್ಟು ವರ್ಷಗಳಿಂದ ಕಂಗನಾ ರಣಾವತ್ ನಟಿಸಿದ ಯಾವುದೇ ಸಿನಿಮಾ ಕೂಡ ಗೆದ್ದಿಲ್ಲ. ಇನ್ನೇನು ಚಿತ್ರರಂಗದಲ್ಲಿ ಆಶಾದಾಯಕ ವಾತಾವರಣ ಇಲ್ಲ ಎನ್ನುವಾಗಲೇ ಅವರು ರಾಜಕೀಯಕ್ಕೆ ಕಾಲಿಟ್ಟರು. ಸದ್ಯಕ್ಕೆ ಕಂಗನಾ ನಟಿಸಿ, ನಿರ್ದೇಶಿಸಿದ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಕೂಡ ರಾಜಕೀಯ ಕಥಾಹಂದರ ಇದೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕುರಿತು ಈ ಸಿನಿಮಾ ಮೂಡಿಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.