ನಟಿ ಕಂಗನಾ ರಣಾವತ್ ಅವರು ‘ಎಮರ್ಜೆನ್ಸಿ’ ಸಿನಿಮಾದ ಬಿಡುಗಡೆಗೆ ತುಂಬ ಕಷ್ಟಪಡುತ್ತಿದ್ದಾರೆ. ಈ ಸಿನಿಮಾಗೆ ಅವರೇ ನಿರ್ದೇಶನ ಮಾಡಿದ್ದಾರೆ. ನಿರ್ಮಾಣದಲ್ಲೂ ಪಾಲುದಾರಿಕೆ ಹೊಂದಿದ್ದಾರೆ. ಇಂದಿರಾ ಗಾಂಧಿಯ ಪಾತ್ರದಲ್ಲಿ ಕಂಗನಾ ನಟಿಸಿದ್ದಾರೆ. ಇದು ನೈಜ ಘಟನೆ ಆಧಾರಿತ ಸಿನಿಮಾ ಆದ್ದರಿಂದ ಬಿಡುಗಡೆಗೂ ಮುನ್ನವೇ ಕೆಲವು ವಿವಾದಗಳು ಎದುರಾಗಿವೆ. ಹಾಗಾಗಿ ಸಿನಿಮಾಗೆ ಪ್ರಮಾಣ ಪತ್ರ ಸಿಗಲು ತಡವಾಗಿತ್ತು. ವರದಿಗಳ ಪ್ರಕಾರ ‘ಎಮರ್ಜೆನ್ಸಿ’ ಸಿನಿಮಾಗೆ ಸೆನ್ಸಾರ್ ಮಂಡಳಿ ಕಡೆಯಿಂದ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಆದರೆ ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್ 6ರಂದು ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಈ ಸಿನಿಮಾದ ಬಗ್ಗೆ ಸಿಖ್ ಸಮುದಾಯದವರು ಆಕ್ಷೇಪ ಎತ್ತಿದ್ದರಿಂದ ಚಿತ್ರದ ಬಿಡುಗಡೆಗೆ ಕೋರ್ಟ್ ತಡೆ ನೀಡಿತು. ಅಲ್ಲದೇ, ಸೆನ್ಸಾರ್ ಮಂಡಳಿ ಸದಸ್ಯರು ಈ ಸಿನಿಮಾದ ಕೆಲವು ದೃಶ್ಯಗಳನ್ನು ಬದಲಾಯಿಸುವಂತೆ ಸೂಚಿಸಿದರು. ಯಾವ ಪ್ರಮಾಣ ಪತ್ರ ನೀಡಬೇಕು ಎಂಬ ಗೊಂದಲ ಕೂಡ ಉಂಟಾಗಿತ್ತು.
ಸಿನಿಮಾದಲ್ಲಿ ತೋರಿಸಿದ ಕೆಲವು ಐತಿಹಾಸಿಕ ವಿಷಯಗಳಿಗೆ ಸೂಕ್ತ ದಾಖಲೆಗಳನ್ನು ನೀಡುವಂತೆ ‘ಎಮರ್ಜೆನ್ಸಿ’ ಚಿತ್ರತಂಡಕ್ಕೆ ಸೆನ್ಸಾರ್ ಮಂಡಳಿ ಸದಸ್ಯರು ಸೂಚಿಸಿದ್ದರು ಎನ್ನಲಾಗಿದೆ. ಆ ದಾಖಲೆಗಳನ್ನು ನೀಡಿದ ನಂತರವೇ ಸಿನಿಮಾಗೆ ‘ಯು/ಎ’ ಪ್ರಮಾಣ ಪತ್ರ ನೀಡಲಾಗಿದೆ. ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಚಿತ್ರತಂಡದವರು ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ.
ಇದನ್ನೂ ಓದಿ: ಕಂಗನಾ ಮದುವೆಗೆ ಕೋರ್ಟ್ ಕೇಸ್ಗಳ ವಿಘ್ನ; ಪೊಲೀಸ್ ಕಂಡು ಓಡಿಹೋದ ಗಂಡಿನ ಕಡೆಯವರು
ಇಂದಿರಾ ಗಾಂಧಿ ಅವರು ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ದಿನಗಳನ್ನು ಕೇಂದ್ರವಾಗಿ ಇಟ್ಟುಕೊಂಡು ‘ಎಮರ್ಜೆನ್ಸಿ’ ಸಿನಿಮಾವನ್ನು ಮಾಡಲಾಗಿದೆ. ಇಂದಿರಾ ಗಾಂಧಿಯ ಪಾತ್ರದಲ್ಲಿ ನಟಿಸಿದ ಕಂಗನಾ ರಣಾವತ್ ಅವರ ಗೆಟಪ್ ಗಮನ ಸೆಳೆದಿದೆ. ಸಿನಿಮಾ ಬಿಡುಗಡೆ ಆದ ಬಳಿಕವೂ ವಿವಾದ ಹೆಚ್ಚಾಗುವ ಸಾಧ್ಯತೆ ಇದೆ. ಕಂಗನಾ ರಣಾವತ್ ಮಾತ್ರವಲ್ಲದೇ ಸತೀಶ್ ಕೌಶಿಕ್, ಅನುಪಮ್ ಖೇರ್, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಡೆ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹಲವು ಕರಣಗಳಿಂದಾಗಿ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಸೃಷ್ಟಿ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.