ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ನಟನಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರೂ, ರಾಜಕೀಯ ವಿಚಾರಗಳ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲದೇ ತಮಗನ್ನಿಸಿದ್ದನ್ನು ಹೇಳುತ್ತಾರೆ. ಇದೇ ಕಾರಣಕ್ಕೆ ಅವರು ವಿವಾದಕ್ಕೆ ಸಿಲುಕಿದ್ದೂ ಇದೆ. ಇತ್ತೀಚೆಗೆ ದೇಶ- ವಿದೇಶಗಳಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿರುವ ನೂಪರ್ ಶರ್ಮಾ ಅವರನ್ನು ಕಂಗನಾ ಬೆಂಬಲಿಸಿದ್ದಾರೆ. ಜತೆಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವರು ಅರ್ಹರು ಎಂದು ಕಂಗನಾ ನುಡಿದಿದ್ದಾರೆ. ಪ್ರವಾದಿ ಮುಹಮ್ಮದ್ ಕುರಿತು ಹೇಳಿಕೆ ನೀಡಿದ್ದ ನೂಪುರ್ ಶರ್ಮಾರನ್ನು ಬೆಂಬಲಿಸಿ ಕಂಗನಾ ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ. ಅದರಲ್ಲಿ ನೂಪರ್ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವುದರ ಬಗ್ಗೆ ನಟಿ ಆತಂಕ ವ್ಯಕ್ತಪಡಿಸಿದ್ದಾರೆ. ಜತೆಗೆ ಜನರು ಅಭಿಪ್ರಾಯ ವಿರೋಧಗಳಿದ್ದರೆ ಕಾನೂನಿನ ಪ್ರಕಾರ ಅದನ್ನು ಎದುರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇತ್ತೀಚೆಗೆ ನೂಪುರ್ ಶರ್ಮಾ ಟಿವಿ ಡಿಬೇಟ್ ಒಂದರಲ್ಲಿ ಮಾತನಾಡುತ್ತಾ ಪ್ರವಾದಿ ಮುಹಮ್ಮದ್ ಬಗ್ಗೆ ನೀಡಿದ್ದ ಹೇಳಿಕೆಗಳು ದೇಶ- ವಿದೇಶಗಳಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ನೂಪುರ್ ಮಾತಿಗೆ ಪರ ಹಾಗೂ ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ಹಲವು ರಾಷ್ಟ್ರಗಳು ಈ ಹೇಳಿಕೆಯನ್ನು ಖಂಡಿಸಿದ್ದವು. ನಂತರದಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ನೂಪುರ್ ಅವರನ್ನು ತೆಗೆಯಲಾಗಿತ್ತು.
ಇದೀಗ ನೂಪುರ್ ಅವರಿಗೆ ಕಂಗನಾ ಬೆಂಬಲ ಸೂಚಿಸಿದ್ದಾರೆ. ತಮ್ಮ ಬರಹದಲ್ಲಿ ನಟಿ, ‘‘ನೂಪುರ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅರ್ಹರು. ಅವರನ್ನು ಗುರಿಯಾಗಿಸಿಕೊಂಡು ಬೆದರಿಕೆ ಬರುತ್ತಿವೆ. ಹಿಂದೂ ದೇವರುಗಳನ್ನು ಅವಮಾನಿಸಿದಾಗ ನಾವು ನ್ಯಾಯಾಲಯದ ಮೆಟ್ಟಿಲು ಹತ್ತುತ್ತೇವೆ. ಈ ವಿಚಾರದಲ್ಲೂ ಅದನ್ನೇ ಅನುಸರಿಸಿ. ನೀವೇ ಡಾನ್ ಆಗುವ ಅಗತ್ಯವಿಲ್ಲ’’ ಎಂದು ಕಂಗನಾ ಬರೆದಿದ್ದಾರೆ. ‘‘ಇದು ಅಫ್ಘಾನಿಸ್ತಾನವಲ್ಲ’’ ಎಂದು ಬರೆದಿರುವ ಕಂಗನಾ, ‘‘ ನಮ್ಮಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯೊಂದಿಗೆ ಸರಿಯಾಗಿ ಕಾರ್ಯನಿರ್ವಹಿಸುವ ಸರ್ಕಾರವಿದೆ. ಮರೆತಿರುವವರಿಗೆ ಇದನ್ನು ನೆನಪಿಸಿದ್ದೇನಷ್ಟೇ’’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಂಗನಾ ಹಂಚಿಕೊಂಡ ಸ್ಟೋರಿ ಇಲ್ಲಿದೆ:
ನೂಪುರ್ ಶರ್ಮಾ ಅವರಿಗೆ ಬೆದರಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆ ಹೆಚ್ಚಿಸಲಾಗಿದೆ. ಬೆದರಿಕೆಯ ಸಂಬಂಧ ನೂಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನೂಪುರ್ ಅವರು ನೀಡಿದ್ದ ಹೇಳಿಕೆಯ ಕಾರಣ, ಭಾನುವಾರದಂದು ಅವರನ್ನು ಬಿಜೆಪಿ ಪಕ್ಷದಿಂದ ಸಸ್ಪೆಂಡ್ ಮಾಡಲಾಗಿತ್ತು. ತಮ್ಮ ಹೇಳಿಕೆಯನ್ನು ಯಾವುದೇ ಷರತ್ತುಗಳಿಲ್ಲದೇ ವಾಪಸ್ ಪಡೆಯುವುದಾಗಿ ತಿಳಿಸಿದ್ದ ನೂಪುರ್, ನಂತರ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುವುದಾಗಿ ತಿಳಿಸಿದ್ದರು.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ