Kangana Ranaut: ಯೋಗಿ ಆದಿತ್ಯನಾಥ್​ ಭೇಟಿ ಮಾಡಿದ ನಟಿ ಕಂಗನಾ ರಣಾವತ್​; ಈ ಮೀಟಿಂಗ್​ ಉದ್ದೇಶ ಏನು?

Kangana Ranaut: ಯೋಗಿ ಆದಿತ್ಯನಾಥ್​ ಭೇಟಿ ಮಾಡಿದ ನಟಿ ಕಂಗನಾ ರಣಾವತ್​; ಈ ಮೀಟಿಂಗ್​ ಉದ್ದೇಶ ಏನು?
ಕಂಗನಾ ರಣಾವತ್, ಯೋಗಿ ಆದಿತ್ಯನಾಥ್

Kangana Ranaut Yogi Adityanath: ಹತ್ತು ಹಲವು ಕಾರಣಗಳಿಂದಾಗಿ ಕಂಗನಾ ರಣಾವತ್​ ಅವರು ಸುದ್ದಿ ಆಗುತ್ತಲೇ ಇರುತ್ತಾರೆ. ಈಗ ಯೋಗಿ ಆದಿತ್ಯನಾಥ್ ಅವರನ್ನು ಕಂಗನಾ ಭೇಟಿ ಮಾಡಿದ ಫೋಟೋ ವೈರಲ್​ ಆಗಿದೆ.

TV9kannada Web Team

| Edited By: Madan Kumar

May 02, 2022 | 8:31 AM

ಒಂದಲ್ಲಾ ಒಂದು ದಿನ ಕಂಗನಾ ರಣಾವತ್​ (Kangana Ranaut) ಅವರು ರಾಜಕೀಯಕ್ಕೆ ನೇರವಾಗಿ ಎಂಟ್ರಿ ನೀಡುತ್ತಾರೆ ಎಂಬುದು ಅನೇಕರ ಊಹೆ. ಅದಕ್ಕೆ ಪೂರಕ ಆಗುವಂತಹ ಘಟನೆಗಳು ಆಗಾಗ ನಡೆಯುತ್ತಲೇ ಇವೆ. ಬಿಜೆಪಿ ಪಕ್ಷದ ಜೊತೆ ಅವರು ಗುರುತಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಸರ್ಕಾರವನ್ನು ಕಂಗನಾ ರಣಾವತ್​ ಆಗಾಗ ಕೊಂಡಾಡುತ್ತಾರೆ. ಅದೇ ರೀತಿ ಈಗ ಅವರು ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ. ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಈ ಸಂದರ್ಭದ ಫೋಟೋವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯೋಗಿ ಆದಿತ್ಯನಾಥ್​ (Yogi Adityanath) ಅವರಿಗೆ ಕಂಗನಾ ಹೂಗುಚ್ಛ ನೀಡಿದ್ದಾರೆ. ಬದಲಿಗೆ ಮುಖ್ಯಮಂತ್ರಿ ಕಡೆಯಿಂದ ಕಂಗನಾಗೆ ನೆನಪಿನ ಕಾಣಿಕೆ ಸಿಕ್ಕಿದೆ. ಈ ಫೋಟೋಗಳು ಕಂಗನಾ ಮತ್ತು ಯೋಗಿ ಆದಿತ್ಯನಾಥ್​ ಅಭಿಮಾನಿಗಳ ವಲಯದಲ್ಲಿ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಕಂಗನಾ ಅವರ ಈ ಭೇಟಿಗೆ ಕಾರಣ ಏನು ಎಂದು ಜನರು ಊಹಿಸುತ್ತಿದ್ದಾರೆ. ಅವರು ನಟಿಸಿರುವ ಹೊಸ ಸಿನಿಮಾ ‘ಧಾಕಡ್​’  (Dhaakad Movie) ಬಿಡುಗಡೆಗೆ ಸಜ್ಜಾಗಿದೆ. ಅದರ ಪ್ರಚಾರ ಕಾರ್ಯದಲ್ಲೂ ಕಂಗನಾ ರಣಾವತ್​ ಬ್ಯುಸಿ ಆಗಿದ್ದಾರೆ.

ಉತ್ತರ ಪ್ರದೇಶ ಸರ್ಕಾರದ ಜೊತೆ ಕಂಗನಾ ರಣಾವತ್​ ಅವರು ಕೈ ಜೋಡಿಸಿದ್ದಾರೆ. ಆ ರಾಜ್ಯದ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಎಂಬ ಯೋಜನೆಗೆ ಕಂಗನಾ ಪ್ರಚಾರ ರಾಯಭಾರಿ. ಈ ವಿಷಯವನ್ನು ಕಳೆದ ವರ್ಷ ಅಕ್ಟೋಬರ್​ನಲ್ಲಿ ಘೋಷಿಸಲಾಯಿತು. ಈಗ ಅದೇ ಕಾರಣಕ್ಕಾಗಿ ಕಂಗನಾ ಅವರು ಯೋಗಿ ಆದಿತ್ಯನಾಥ್​ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಕಂಗನಾಗೆ ಯೋಗಿ ಆದಿತ್ಯನಾಥ್​ ನೀಡಿರುವ ಸ್ಮರಣಿಕೆಯಲ್ಲಿ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯ ಲೋಗೋ ಕಾಣಿಸಿದೆ. ಹಾಗಾಗಿ ಅವರ ಭೇಟಿಯ ಉದ್ದೇಶ ಇದು ಎಂದು ಅಭಿಮಾನಿಗಳು ಊಹಿಸಿದ್ದಾರೆ.

ಹತ್ತು ಹಲವು ಕಾರಣಗಳಿಂದಾಗಿ ಕಂಗನಾ ರಣಾವತ್​ ಅವರು ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ‘ಧಾಕಡ್​’ ಸಿನಿಮಾ ಮೇ 20ರಂದು ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಅವರು ಆ್ಯಕ್ಷನ್​ ಅವತಾರ ಎತ್ತಿದ್ದಾರೆ. ‘ಧಾಕಡ್​’ ಸಿನಿಮಾದ ಟ್ರೇಲರ್​ ಲಾಂಚ್​ ಇತ್ತೀಚೆಗೆ ನಡೆಯಿತು. ಆಗ ಅವರಿಗೆ ರಾಷ್ಟ್ರ ಭಾಷೆ ವಿವಾದದ ಬಗ್ಗೆ ಪ್ರಶ್ನೆ ಕೇಳಲಾಯಿತು. ಆಗ ಅವರು ಅಜಯ್​ ದೇವಗನ್​ ಪರ ಬ್ಯಾಟ್​ ಬೀಸಿದರು.

ಸಂಸ್ಕೃತ ರಾಷ್ಟ್ರ ಭಾಷೆ ಆಗಲಿ ಎಂದ ಕಂಗನಾ:

‘ಬೇರೆ ಬೇರೆ ದೇಶಗಳಿಗೆ ಹೋಗಿ ನೋಡಿ. ಜರ್ಮನಿ, ಫ್ರಾನ್ಸ್​, ಸ್ಪೇನ್​ ಮುಂತಾದ ಕಡೆಗಳಲ್ಲಿ ಅವರ ಭಾಷೆಯ ಬಗ್ಗೆ ಅವರಿಗೆ ಸಖತ್​ ಹೆಮ್ಮೆ ಇದೆ. ಬ್ರಿಟಿಷ್​ ಆಡಳಿತದ ಪ್ರಭಾವ ಎಷ್ಟು ಗಾಢವಾಗಿದೆ ಎಂಬುದು ಮುಖ್ಯವಲ್ಲ. ಅದೃಷ್ಟವೋ ದುರದೃಷ್ಟವೋ ಇಂಗ್ಲಿಷ್​ ಸಂಪರ್ಕ ಭಾಷೆ ಆಗಿದೆ. ದೇಶದ ಒಳಗೆ ಕೂಡ ನಾವು ಸಂವಹನಕ್ಕೆ ಇಂಗ್ಲಿಷ್​ ಬಳಸುತ್ತೇವೆ. ಅದೇ ನಮಗೆ ಸಂಪರ್ಕ​ ಭಾಷೆ ಆಗಬೇಕಾ? ಹಿಂದಿ, ತಮಿಳು ಅಥವಾ ಸಂಸ್ಕೃತ ಆಗಬಹುದಾ? ಈ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಕಂಗನಾ ರಣಾವತ್​ ಹೇಳಿದರು.

‘ನಮ್ಮ ಸಂವಿಧಾನದ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆ. ಅದನ್ನೇ ಅಜಯ್​ ದೇವಗನ್​ ಅವರು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ಆದರೆ ಸಂಸ್ಕೃತ ನಮ್ಮ ರಾಷ್ಟ್ರ ಭಾಷೆ ಆಗಬೇಕು ಅಂತ ನಾನು ಹೇಳುತ್ತೇನೆ. ಹಿಂದಿ, ಜರ್ಮನಿ, ಇಂಗ್ಲಿಷ್​, ಫ್ರೆಂಚ್​ ಮುಂತಾದ ಭಾಷೆಗಳು ಬಂದಿರುವುದೇ ಸಂಸ್ಕೃತದಿಂದ. ಹಾಗಾಗಿ ನಾವೇಕೆ ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯಾಗಿ ಇಟ್ಟುಕೊಳ್ಳಬಾರದು? ಶಾಲೆಗಳಲ್ಲಿ ಇದನ್ನು ಯಾಕೆ ಕಡ್ಡಾಯವಾಗಿ ಮಾಡಬಾರದು? ನನಗೆ ಗೊತ್ತಿಲ್ಲ’ ಎಂದು ಕಂಗನಾ ರಣಾವತ್​ ಅನಿಸಿಕೆ ಹಂಚಿಕೊಂಡರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ:

ಡೈರೆಕ್ಟರ್ ಜತೆ ಖ್ಯಾತ ನಟಿಯ ಸೀಕ್ರೆಟ್​ ಅಫೇರ್ ಬಯಲು​; ಪ್ರೆಗ್ನೆನ್ಸಿ ವಿಷಯ ಕೇಳಿ ಕಣ್ಣೀರು ಹಾಕಿದ ಕಂಗನಾ

ಆಸ್ಕರ್​ ಮತ್ತು ಗ್ರ್ಯಾಮಿ ಪ್ರಶಸ್ತಿ ಬಹಿಷ್ಕಾರ ಮಾಡುವಂತೆ ಕಂಗನಾ ಒತ್ತಾಯ; ಗಂಭೀರ ಆರೋಪ ಮಾಡಿದ ನಟಿ

Follow us on

Related Stories

Most Read Stories

Click on your DTH Provider to Add TV9 Kannada