‘ದಿ ಕಾಶ್ಮೀರ್ ಫೈಲ್ಸ್’ ಬಗ್ಗೆ ಬಾಲಿವುಡ್ನವರು ಯಾಕೆ ಸೈಲೆಂಟ್ ಆಗಿದ್ದಾರೆ? ಕಂಗನಾ ರಣಾವತ್ ಕಿಡಿ
ಪ್ರೇಕ್ಷಕರು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಆದರೆ ಈ ಸಿನಿಮಾ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮೌನ ವಹಿಸಿರುವುದು ಕಂಗನಾ ರಣಾವತ್ ಅವರ ಅಸಮಾಧಾನಕ್ಕೆ ಕಾರಣ ಆಗಿದೆ.
ಗಲ್ಲಾಪೆಟ್ಟಿಗೆಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ (The Kashmir Files Movie) ಮೋಡಿ ಮಾಡಿದೆ. ಮೊದಲ ದಿನ ಕೇವಲ 3.5 ಕೋಟಿ ರೂಪಾಯಿ ಗಳಿಸಿದ್ದ ಈ ಚಿತ್ರ ಎರಡನೇ ದಿನದ ಗಳಿಕೆಯಲ್ಲಿ ಭಾರಿ ಏರಿಕೆ ಕಂಡಿದೆ. ಶನಿವಾರ (ಮಾ.12) ಬರೋಬ್ಬರಿ 8.5 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಆಸಕ್ತಿ ತೋರಿಸುತ್ತಿದ್ದಾರೆ. ಮೂರನೇ ದಿನ ಕೂಡ ದೇಶದೆಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಂಡಿದೆ. ಜನರು ಮುಗಿಬಿದ್ದು ಈ ಚಿತ್ರವನ್ನು ನೋಡುತ್ತಿದ್ದಾರೆ. ಇಷ್ಟೆಲ್ಲ ಆಗಿದ್ದರೂ ಕೂಡ ಬಾಲಿವುಡ್ನ (Bollywood) ಬಹುತೇಕರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಗ್ಗೆ ಏನನ್ನೂ ಮಾತನಾಡುತ್ತಿಲ್ಲ. ಈ ಬೆಳವಣಿಗೆ ಬಗ್ಗೆ ನಟಿ ಕಂಗನಾ ರಣಾವತ್ (Kangana Ranaut) ಗುಡುಗಿದ್ದಾರೆ. ಈ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರು ಬಂಡವಾಳ ಹೂಡಿದ್ದಾರೆ. ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ.
ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತಯಾರಾಗಿದೆ. ಆ ಕಾರಣದಿಂದ ಕೆಲವು ವಿವಾದಗಳು ಕೂಡ ಹುಟ್ಟಿಕೊಂಡಿವೆ. ಒಂದು ವರ್ಗದ ಜನರು ಈ ಸಿನಿಮಾ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರು ಈ ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಸಾಧನೆ ಮಾಡುತ್ತಿರುವ ಈ ಚಿತ್ರದ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮೌನ ವಹಿಸಿರುವುದು ಕಂಗನಾ ರಣಾವತ್ ಅವರ ಅಸಾಮಾಧಾನಕ್ಕೆ ಕಾರಣ ಆಗಿದೆ.
‘ಈ ಸಿನಿಮಾದ ಕಂಟೆಂಟ್ ಮಾತ್ರವಲ್ಲದೇ ಬಾಕ್ಸ್ ಆಫೀಸ್ ಗಳಿಕೆ ಕೂಡ ಗಮನಾರ್ಹ ಆಗಿವೆ. ಈ ಬಗ್ಗೆ ಬಾಲಿವುಡ್ನಲ್ಲಿ ಸೃಷ್ಟಿ ಆಗಿರುವ ಮೌನವನ್ನು ಗಮನಿಸಿ. ಬಂಡವಾಳ ಮತ್ತು ಲಾಭದ ದೃಷ್ಟಿಯಿಂದ ನೋಡಿದರೆ ಈ ವರ್ಷ ಅತಿ ಹೆಚ್ಚು ಲಾಭ ಮಾಡಿದ ಸಿನಿಮಾ ಇದಾಗಲಿದೆ. ಕೊರೊನಾ ಬಳಿಕ ದೊಡ್ಡ ಸಿನಿಮಾಗಳಿಗೆ ಮಾತ್ರ ಥಿಯೇಟರ್ಗಳು ಸೂಕ್ತ ಎಂಬ ಕಲ್ಪನೆಯನ್ನು ಈ ಚಿತ್ರ ಹೊಡೆದುಹಾಕಿದೆ. ಮುಂಜಾನೆ 6 ಗಂಟೆಯ ಶೋಗಳು ಹೌಸ್ಫುಲ್ ಆಗುತ್ತಿವೆ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇಡೀ ಜಗತ್ತು ಈ ಚಿತ್ರವನ್ನು ನೋಡುತ್ತಿದೆ. ಆದರೆ ಬಾಲಿವುಡ್ನವರು ಸೈಲೆಂಟ್ ಆಗಿದ್ದಾರೆ’ ಎಂದು ಕಂಗನಾ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಶನಿವಾರ (ಮಾ.12) ಸಂಜೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತಂಡವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತ್ತು. ಭೇಟಿ ಸಮಯದಲ್ಲಿ ಈ ಸಿನಿಮಾ ಬಗ್ಗೆ ಮೋದಿ ಅವರು ಮೆಚ್ಚುಗೆಯ ಮಾತುಗಳನ್ನು ತಿಳಿಸಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚಿತ್ರತಂಡದವರು ಪೋಸ್ಟ್ ಮಾಡಿಕೊಂಡಿದ್ದಾರೆ. ಆ ಬಳಿಕ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಗ್ಗೆ ಜನರಿಗೆ ಆಸಕ್ತಿ ಹೆಚ್ಚಿದೆ. ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ, ಮಿಥುನ್ ಚಕ್ರವರ್ತಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:
ಜಮ್ಮು ಮಲ್ಟಿಪ್ಲೆಕ್ಸ್ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಪ್ರದರ್ಶನಕ್ಕೆ ತಡೆ; ವೈರಲ್ ಆಗಿದೆ ವಿಡಿಯೋ