Rupaa Dutta: ಪುಸ್ತಕ ಮೇಳದಲ್ಲಿ ಪಿಕ್ಪಾಕೆಟ್ ಮಾಡಿ ಪೊಲೀಸರ ಅತಿಥಿಯಾದ ಖ್ಯಾತ ನಟಿ!
ಬೆಂಗಾಳಿ ಹಾಗೂ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ರೂಪಾ ದತ್ತಾ, ಪಿಕ್ಪಾಕೆಟ್ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ. ಕೋಲ್ಕತ್ತಾದಲ್ಲಿ ನಡೆಯುತ್ತಿದ್ದ ಪುಸ್ತಕ ಮೇಳದಲ್ಲಿ ಪಿಕ್ಪಾಕೆಟ್ ಮಾಡುವ ವೇಳೆ ನಟಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಾಲಿವುಡ್ (Bollywoo) ಹಾಗೂ ಬಂಗಾಳಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ರೂಪಾ ದತ್ತಾ (Rupaa Dutta) ಪಿಕ್ಪಾಕೆಟ್ (PickPocket) ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ. ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಜೇಬುಗಳ್ಳತನ ಮಾಡಿದ ಆರೋಪದಲ್ಲಿ ರೂಪಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಟಿಯ ಬ್ಯಾಗ್ನಲ್ಲಿ ₹ 65,670 ಪತ್ತೆಯಾಗಿದೆ. ಆದರೆ ಈ ಹಣದ ಮೂಲದ ಬಗ್ಗೆ ರೂಪಾ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ತನಿಖೆಯ ನಂತರ ಅವರು ಪುಸ್ತಕ ಮೇಳದಲ್ಲಿ ಪಿಕ್ಪಾಕೆಟ್ ಮಾಡುತ್ತಿದ್ದುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೇ ಈ ರೀತಿ ಮಾಡುತ್ತಿರುವುದು ಇದು ಮೊದಲಲ್ಲ ಎಂದೂ ನಟಿ ಒಪ್ಪಿಕೊಂಡಿದ್ದಾರೆಂದು ಮಾಹಿತಿ ನೀಡಲಾಗಿದೆ. ರೂಪಾ ದತ್ತಾ ಬ್ಯಾಗ್ನಲ್ಲಿ ಡೈರಿಯೊಂದು ಪತ್ತೆಯಾಗಿದ್ದು, ಕಳ್ಳತನ ಮಾಡಿದ ಹಣದ ಲೆಕ್ಕವಿಡುವ ಪುಸ್ತಕವದು ಎಂದು ಹೇಳಲಾಗಿದೆ. ವರದಿಗಳ ಪ್ರಕಾರ ಆ ಡೈರಿಯಲ್ಲಿ ಕೋಲ್ಕತ್ತಾದ ಇನ್ನೂ ಹಲವು ಜನನಿಬಿಡ ಪ್ರದೇಶಗಳ ಹೆಸರಿದ್ದವು. ಇವುಗಳು ರೂಪಾರ ಸಾಮಾನ್ಯ ಗುರಿಗಳಾಗಿದ್ದವು ಎಂದೂ ಹೇಳಲಾಗಿದೆ.
ಶನಿವಾರದಂದು ಮೇಳದಲ್ಲಿ ರೂಪಾ ಅವರ ಚಲನವಲನ ಪೊಲೀಸರಿಗೆ ಅನುಮಾನ ಹುಟ್ಟುಹಾಕಿತ್ತು. ಕಾರಣ, ಅವರು ಖಾಲಿ ಪರ್ಸ್ಗಳನ್ನು ಕಸದ ತೊಟ್ಟಿಗೆ ಎಸೆಯುತ್ತಿದ್ದರು. ಕೊನೆಗೆ ರೂಪಾರನ್ನು ವಶಪಡಿಸಿ ತನಿಖೆ ನಡೆಸಿದಾಗ, ನಟಿಯ ಬ್ಯಾಗ್ನಲ್ಲಿ ಹಲವು ಪರ್ಸ್ಗಳು ಪತ್ತೆಯಾಗಿವೆ. ಇದರ ನಂತರ ರೂಪಾರನ್ನು ಬಂಧಿಸಲಾಗಿದೆ.
ಬಿಧಾನನಗರ ಉತ್ತರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಜಯನ್ಯಾನಾಥ್ ಸಹಾ ನೀಡಿದ ದೂರಿನ ಮೇರೆಗೆ ನಟಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379/411 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದರಲ್ಲಿರುವಂತೆ, ‘12.03.2022 ರಂದು 17.15 ಗಂಟೆಗೆ ಕರ್ತವ್ಯವನ್ನು ನಿರ್ವಹಿಸುತ್ತಾ ಎಸ್‌ಐ ಕೋಲ್ಕತ್ತಾ ಪುಸ್ತಕ ಮೇಳಕ್ಕೆ ಹೋಗಿದ್ದರು. ಈ ವೇಳೆ ಪಿಕ್ಪಾಕೆಟ್ ಮಾಡುತ್ತಿದ್ದ ಮೇಲೆ ಹೇಳಿದ ಮಹಿಳೆಯನ್ನು ನೋಡಿ, ಬಂಧಿಸಲಾಗಿದೆ. ತನಿಖೆಯ ನಂತರ ಒಟ್ಟು 65,760 ರೂ ಮೊತ್ತದ ಹಣವಿರುವ ಪರ್ಸ್ ಆಕೆಯ ಬಳಿ ಪತ್ತೆಯಾಗಿವೆ. ಹಲವು ಪರ್ಸ್ಗಳನ್ನು ಹೊಂದಿದ್ದಕ್ಕೆ ಕಾರಣವನ್ನು ನೀಡಲು ಆಕೆ ವಿಫಲವಾಗಿದ್ದಾಳೆ’ ಎಂದು ಪೊಲೀಸರು ಹೇಳಿದ್ದಾರೆ.
ನಟಿಯನ್ನು ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ. ಪ್ರಸ್ತುತ ರೂಪಾ ದತ್ತಾಗೆ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸರು ವಶಪಡಿಸಿಕೊಂಡ ಬ್ಯಾಗ್ ತನ್ನದಲ್ಲ ಎಂದಿರುವ ನಟಿ, ಅದು ಡಸ್ಟ್ಬಿನ್ನಿಂದ ಎತ್ತಿಕೊಂಡಿರುವ ಚೀಲ ಎಂದು ಹೇಳಿದ್ಧಾರೆ.
ರೂಪಾ ದತ್ತಾ ಬಂಗಾಳಿ ಚಲನಚಿತ್ರಗಳಲ್ಲಿ ಹಾಗೂ ಬಾಲಿವುಡ್ನಲ್ಲಿ ನಟಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ, ಅವರು ಪಶ್ಚಿಮ ಬಂಗಾಳದ ಕರ್ಣಿ ಸೇನೆಯ ರಾಜ್ಯಾಧ್ಯಕ್ಷೆ ಎಂದು ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಅನುರಾಗ್ ಕಶ್ಯಪ್ ತಮಗೆ ಅನುಚಿತ ಸಂದೇಶ ಕಳುಹಿಸುತ್ತಿದ್ದಾರೆ ಎಂದು ನಟಿ ಆರೋಪಿಸಿದ್ದರು. ಕೆಲ ಕಾಲದ ನಂತರ ಅದು ನಿರ್ದೇಶಕ ಅನುರಾಗ್ ಕಶ್ಯಪ್ ಅಲ್ಲ, ಬೇರೆ ಅನುರಾಗ್ ಎನ್ನುವುದು ತಿಳಿದುಬಂದಿತ್ತು.
ಇದನ್ನೂ ಓದಿ:
Bairagee: ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ; ‘ಜೇಮ್ಸ್’ ಜತೆಗೆ ಪ್ರದರ್ಶನವಾಗಲಿದೆ ‘ಬೈರಾಗಿ’ ಟೀಸರ್!




