ಸಲ್ಮಾನ್ ಹುಟ್ಟುಹಬ್ಬ: 25 ವರ್ಷ ಹಿಂದಿನ ಘಟನೆ ನೆನಪಿಸಿಕೊಂಡ ಕರಣ್ ಜೋಹರ್

|

Updated on: Dec 27, 2023 | 6:09 PM

Karan Johar: ಸಲ್ಮಾನ್ ಖಾನ್​ಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಜೊತೆಗೆ 25 ವರ್ಷ ಹಿಂದಿನ ಘಟನೆ ನೆನಪು ಮಾಡಿಕೊಂಡಿದ್ದಾರೆ ಕರಣ್ ಜೋಹರ್.

ಸಲ್ಮಾನ್ ಹುಟ್ಟುಹಬ್ಬ: 25 ವರ್ಷ ಹಿಂದಿನ ಘಟನೆ ನೆನಪಿಸಿಕೊಂಡ ಕರಣ್ ಜೋಹರ್
Follow us on

ಇಂದು (ಡಿಸೆಂಬರ್ 27) ಸಲ್ಮಾನ್ ಖಾನ್ (Salman Khan) ಹುಟ್ಟುಹಬ್ಬ. ಸಲ್ಮಾನ್ ಖಾನ್​ಗೆ ಇದೀಗ 58 ವರ್ಷ ವಯಸ್ಸಾಗಿದೆ. ಚಿತ್ರರಂಗದ ಅನೇಕ ಸ್ಟಾರ್ ನಟ, ನಟಿಯರು ಸಲ್ಮಾನ್ ಖಾನ್​ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಸಹ ಸಲ್ಮಾನ್ ಖಾನ್​ಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಜೊತೆಗೆ 25 ವರ್ಷದ ಹಿಂದೆ ನಡೆದ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ. ಜೊತೆಗೆ ಹೊಸ ಸಿನಿಮಾದ ಅಪ್​ಡೇಟ್ ಅನ್ನು ಸಹ ನೀಡಿದ್ದಾರೆ.

25 ವರ್ಷದ ಹಿಂದೆ ಪಾರ್ಟಿಯೊಂದಕ್ಕೆ ಹೋಗಿದ್ದೆ, ಪಾರ್ಟಿಗೆ ಬಂದಿದ್ದ ಹೆಚ್ಚಿನ ಜನರ ಪರಿಚಯ ಇರಲಿಲ್ಲ, ಬಹಳ ಗೊಂದಲದಲ್ಲಿದ್ದ ನಾನು ಕೋಣೆಯ ಒಂದು ಮೂಲೆಯಲ್ಲಿ ಒಬ್ಬನೇ ನಿಂತಿದ್ದೆ. ಆಗ ದೊಡ್ಡ ಸ್ಟಾರ್ ಆಗಿದ್ದ ಸಲ್ಮಾನ್ ಖಾನ್​, ನಾನಿದ್ದಲ್ಲಿಗೆ ಬಂದು ಮಾತನಾಡಿಸಿ, ಏಕೆ ಇಲ್ಲಿ ಒಬ್ಬನೇ ನಿಂತಿರುವೆ ಎಂದು ಕೇಳಿದರು. ‘ನನ್ನ ಸಿನಿಮಾದಲ್ಲಿ ಒಂದು ಪಾತ್ರ ಮಾಡುವಂತೆ ಹಲವು ನಟರನ್ನು ಕೇಳಿದೆ ಆದರೆ ಯಾರೂ ಒಪ್ಪುತ್ತಿಲ್ಲ’ ಎಂದೆ. ಅದಕ್ಕೆ ಸಲ್ಮಾನ್ ಖಾನ್, ‘ನನ್ನ ತಂಗಿ ನಿನ್ನ ಚಿತ್ರಕತೆ, ಪ್ರತಿಭೆ ಬಗ್ಗೆ ಹೇಳಿದ್ದಾಳೆ, ನಾಳೆ ಬಂದು ಕತೆ ಹೇಳು’ ಎಂದರು’’ ಎಂದು ಕರಣ್ ಜೋಹರ್ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ದೀಪಿಕಾ-ರಣವೀರ್ ದಂಪತಿಯ ಟ್ರೋಲ್ ಮಾಡಿದವರಿಗೆ ಮಧ್ಯ ಬೆರಳು ತೋರಿಸಿದ ಕರಣ್ ಜೋಹರ್

ಮುಂದುವರೆದು, ‘‘ಒಬ್ಬ ಸೂಪರ್ ಸ್ಟಾರ್​ಗೆ ಕತೆ ಹೇಳುತ್ತೇನೆ ಎಂದು ನಾನು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಪ್ರಾರ್ಥನೆ ಮಾಡಿಕೊಂಡೇ ಸಲ್ಮಾನ್ ಬಳಿ ಹೋಗಿ, ನನ್ನ ಜೀವನವೇ ಇದರ ಮೇಲೆ ನಿರ್ಭರವಾಗಿದೆ ಎಂಬಂತೆ ಕತೆ ಹೇಳಲು ಆರಂಭಿಸಿದೆ. ಇಂಟರ್ವೆಲ್ ಹಂತಕ್ಕೆ ಬಂದಾಗ, ಸಲ್ಮಾನ್ ಖಾನ್ ಹೋಗಿ ನನಗೆ ನೀರು ತಂದುಕೊಟ್ಟರು. ಬಳಿಕ ಸರಿ, ನಾನು ಈ ಸಿನಿಮಾ ಮಾಡುತ್ತೇನೆ ಎಂದರು. ಆದರೆ ನಾನು, ನಿಮ್ಮ ಪಾತ್ರ ಇಂಟರ್ವೆಲ್ ಆದ ಮೇಲೆ ಬರುತ್ತದೆ ಎಂದೆ. ಅದಕ್ಕೆ ಸಲ್ಮಾನ್, ನಾನು ನಿಮ್ಮ ತಂದೆಯವರನ್ನು ಬಹಳ ಗೌರವಿಸುತ್ತೇನೆ ಹಾಗೂ ನಾನು ಈ ಸಿನಿಮಾದಲ್ಲಿ ನಟಿಸದಿದ್ದರೆ ನನ್ನ ತಂಗಿ ನನ್ನ ಮೇಲೆ ಸಿಟ್ಟು ಮಾಡಿಕೊಳ್ಳುತ್ತಾಳೆ. ಹಾಗಾಗಿ ಈ ಸಿನಿಮಾದಲ್ಲಿ ನಟಿಸುತ್ತೇನೆ’ ಎಂದರು ಸಲ್ಮಾನ್ ಖಾನ್’’ ಎಂದು ‘ಕುಚ್​ ಕುಚ್ ಹೋತಾ ಹೈ’ ಸಿನಿಮಾದ ಅಮನ್ ಪಾತ್ರಕ್ಕೆ ಸಲ್ಮಾನ್ ಖಾನ್ ಆಯ್ಕೆ ಆದ ಬಗೆ ವಿವರಿಸಿದ್ದಾರೆ ಕರಣ್.

‘‘ಆದರೆ ಈ ರೀತಿಯ ಪ್ರೀತಿ, ಗೌರವಗಳು ಈಗಿನ ಸಮಯದಲ್ಲಿ ನೋಡಲು ಸಿಗುತ್ತಿಲ್ಲ. ಹಾಗಾಗಿಯೇ ಸಲ್ಮಾನ್ ಖಾನ್​ ಮೇಲೆ ವಿಶೇಷ ಪ್ರೀತಿ, ಗೌರವ ಇದೆ. ಹ್ಯಾಪಿ ಬರ್ತ್​ ಡೇ ಸಲ್ಮಾನ್ ಖಾನ್. 25 ವರ್ಷಗಳ ಬಳಿಕ ಮತ್ತೊಂದು ಕತೆಯನ್ನು ಸಲ್ಮಾನ್​ ಖಾನ್​ಗೆ ಹೇಳಿದ್ದೇನೆ. ಶೀಘ್ರವೇ ಸಿನಿಮಾ ಆಗಲಿದೆ. ಈಗ ಇಷ್ಟು ಮಾತ್ರವೇ ಹೇಳಲು ಸಾಧ್ಯ’’ ಎಂದಿದ್ದಾರೆ ಕರಣ್ ಜೋಹರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ