
ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ (Karan Johar) ಬಾಲಿವುಡ್ಗೆ (Bollywood) ಹಲವಾರು ಒಳ್ಳೆಯ ಸಿನಿಮಾಗಳನ್ನು ನೀಡಿದ್ದಾರೆ. ಉತ್ತಮ ಗುಣಮಟ್ಟದ ಹಾಗೂ ಅದ್ಧೂರಿಯಾದ ಸಿನಿಮಾಗಳನ್ನು ನಿರ್ಮಿಸಲು ಹಾಗೂ ಒಳ್ಳೆಯ ಪ್ರೇಮಕಥಾ ಸಿನಿಮಾಗಳನ್ನು ನಿರ್ದೇಶನ ಮಾಡಲು ಕರಣ್ ಜೋಹರ್ ಜನಪ್ರಿಯರು. ಆದರೆ ಬಾಲಿವುಡ್ ಅನ್ನು ಪಿಡುಗಿನಂತೆ ಕಾಡುತ್ತಿರುವ ನೆಪೊಟಿಸಂ (ಸ್ವಜನಪಕ್ಷಪಾತ)ಕ್ಕೆ ದೊಡ್ಡ ಮಟ್ಟದಲ್ಲಿ ಇಂಬು ನೀಡಿದ ಕಾರಣಕ್ಕೂ ಸಹ ಕರಣ್ ಜೋಹರ್ ಅಷ್ಟೇ ಖ್ಯಾತರಾಗಿದ್ದಾರೆ. ‘ನೆಪೊಟಿಸಂ ಕಾ ಬಾಪ್’ (ಸ್ವಜನಪಕ್ಷಪಾತದ ತಂದೆ) ಎಂದೇ ಕರಣ್ ಜೋಹರ್ ಅವರನ್ನು ಕರೆಯಲಾಗುತ್ತದೆ. ಆರಂಭದಲ್ಲಿ ಇದನ್ನು ಒಪ್ಪಿಕೊಂಡಿದ್ದ ಕರಣ್ ಜೋಹರ್, ಈಗ ಸಿನಿಮಾ ಪ್ರೇಕ್ಷಕರ ಮೇಲೆ ಗೂಬೆ ಕೂರಿಸಿದ್ದಾರೆ.
ಇತ್ತೀಚೆಗಿನ ಪಾಡ್ಕಾಸ್ಟ್ ಒಂದರಲ್ಲಿ ಈ ಬಗ್ಗೆ ಮಾತನಾಡಿರುವ ಕರಣ್ ಜೋಹರ್, ‘ನೆಪೊಟಿಸಂಗೆ ಮೂಲ ಕಾರಣ ಜನರು. ಸಿನಿಮಾ ನೋಡುವ ಪ್ರೇಕ್ಷಕರು ಏಕೆ ಆ ನೆಪೊ ಕಿಡ್ಗಳನ್ನು ಸ್ಟಾರ್ಗಳನ್ನಾಗಿ ಬೆಳೆಸಬೇಕಿತ್ತು. ನೆಪೊ ಕಿಡ್ ಎಂಬ ಕಾರಣಕ್ಕೆ ಅವರನ್ನು ಆರಂಭದಲ್ಲಿಯೇ ಚಿವುಟಿ ಹಾಕಬಹುದಿತ್ತಲ್ಲ. ಜನರೇಕೆ ಅವರ ಸಿನಿಮಾಗಳನ್ನು ನೋಡಿದರು? ಅವರನ್ನು ಸ್ಟಾರ್ಗಳನ್ನಾಗಿ ಏಕೆ ಮಾಡಿದರು?’ ಎಂದು ಕರಣ್ ಜೊಹರ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:‘ಖಾನ್, ಕಪೂರ್ಗಳೇ ಒಜಿಗಳು, ಹೊಸಬರು ಬಂದು ಫ್ರಾಂಚೈಸಿ ಕದಿಯುತ್ತಾರೆ’; ಕರಣ್ ಜೋಹರ್
ತಮ್ಮ ವ್ಯಕ್ತಿತ್ವದ ಬಗ್ಗೆ ಹರಡಿರುವ ಋಣಾತ್ಮಕ ಚರ್ಚೆಗಳ ಬಗ್ಗೆಯೂ ಮಾತನಾಡಿರುವ ಕರಣ್ ಜೋಹರ್, ‘ಕಾಫಿ ವಿತ್ ಕರಣ್ ಶೋ ಪ್ರಾರಂಭ ಆದ ಬಳಿಕ ನನ್ನ ವ್ಯಕ್ತಿತ್ವದ ಬಗ್ಗೆ ಋಣಾತ್ಮಕ ಅಭಿಪ್ರಾಯಗಳು ಹರಡಿವೆ. ನನ್ನ ಬಗ್ಗೆ ಗೊತ್ತಿರುವವರು, ನನ್ನ ಸುತ್ತ ಮುತ್ತ ಇರುವವರು ನನ್ನನ್ನು ಒಬ್ಬ ಹೃದಯವಂತ ಧನಾತ್ಮಕ ವ್ಯಕ್ತಿಯೆಂದು ಹೇಳುತ್ತಾರೆ. ಆದರೆ ನನ್ನ ವೈಯಕ್ತಿಕ ಪರಿಚಯ ಇಲ್ಲದವರು ತಪ್ಪು ಅಭಿಪ್ರಾಯದಲ್ಲಿ ಬದುಕುತ್ತಿದ್ದಾರೆ’ ಎಂದಿದ್ದಾರೆ ಕರಣ್ ಜೋಹರ್.
ನೆಪೊಟಿಸಮ್ಗೆ ಬೆಂಬಲ ನೀಡಿದ ಬಗ್ಗೆ ಮಾತನಾಡಿರುವ ಕರಣ್ ಜೋಹರ್, ‘ಬಾಲಿವುಡ್ನಲ್ಲಿ ಎಷ್ಟೋ ಮಂದಿ ದೂರು ಹೇಳುತ್ತಾರೆ, ಆ ವ್ಯಕ್ತಿ ನನ್ನ ಕರಿಯರ್ ಹಾಳು ಮಾಡಿದ, ನನ್ನ ಕರಿಯರ್ಗೆ ಅಡ್ಡಗಾಲು ಹಾಕಿದ ಎಂದೆಲ್ಲ ಮಾತನಾಡುತ್ತಾರೆ. ಆದರೆ ನಾನು ಹಾಗೆ ಮಾಡಿಲ್ಲ. ನಾನು ಬೇರೆಯವರ ಕರಿಯರ್ಗೆ ಬೆಂಬಲ ನೀಡಿದ್ದೀನಿ. ನಾನು ಕರ್ಮದ ಮೇಲೆ ವಿಶ್ವಾಸ ಇಟ್ಟಿರುವ ವ್ಯಕ್ತಿ. ನನ್ನ ಕೆಲಸವನ್ನು ನಾನು ಮಾಡಿಕೊಂಡು ಬಂದಿದ್ದೇನೆ. ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆ ಆಗಿರುತ್ತಿತ್ತು’ ಎಂದಿದ್ದಾರೆ ಕರಣ್ ಜೋಹರ್.
ಪ್ರತಿಭೆ ಇರಲಿ, ಇಲ್ಲದಿರಲಿ ಸಿನಿಮಾ ಸೆಲೆಬ್ರಿಟಿಗಳ ಮಕ್ಕಳು, ಮೊಮ್ಮಕಳಿಗೆ ಮಾತ್ರವೇ ಸಿನಿಮಾಗಳಲ್ಲಿ ಅವಕಾಶ ಕೊಟ್ಟು ಅವರನ್ನು ಮಾತ್ರವೇ ಬೆಳೆಸುತ್ತಾ ಬರುವ, ಸಿನಿಮಾ ಕುಟುಂಬದವರು ಅಲ್ಲದವರಿಗೆ ಅವಕಾಶಗಳನ್ನು ನಿರಾಕರಿಸುವ ಸಂಪ್ರದಾಯ ಬಾಲಿವುಡ್ನಲ್ಲಿ ದೊಡ್ಡ ಮಟ್ಟದಲ್ಲಿದೆ. ಸಿನಿಮಾ ಸೆಲೆಬ್ರಿಟಿಗಳ ಕುಟುಂಬದವರಿಗೆ ಅವಕಾಶ ಕೊಡುವ ಮೊದಲಿಗರು ಕರಣ್ ಜೋಹರ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ