ಪುಣ್ಯ ಸ್ನಾನ ಮಾಡಲು ಹೋದ ಕತ್ರಿನಾ ಕೈಫ್​ ಜತೆ ಸೆಲ್ಫಿಗೆ ಮುಗಿಬಿದ್ದ ಜನ; ವಿಡಿಯೋ ವೈರಲ್

ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಪುಣ್ಯಸ್ನಾನ ಮಾಡಲು ತ್ರಿವೇಣಿ ಸಂಗಮಕ್ಕೆ ಬಂದಾಗ ಅನೇಕ ಅಭಿಮಾನಿಗಳು ಅವರನ್ನು ಸುತ್ತುವರಿದರು. ಭಕ್ತಿಯಿಂದ ಪುಣ್ಯಸ್ನಾನ ಮಾಡಲು ಬಿಡದೇ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹಾತೊರೆದರು. ಡ್ರೋನ್ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪುಣ್ಯ ಸ್ನಾನ ಮಾಡಲು ಹೋದ ಕತ್ರಿನಾ ಕೈಫ್​ ಜತೆ ಸೆಲ್ಫಿಗೆ ಮುಗಿಬಿದ್ದ ಜನ; ವಿಡಿಯೋ ವೈರಲ್
Katrina Kaif

Updated on: Feb 25, 2025 | 10:47 PM

ಮಹಾಕುಂಭಮೇಳದ ಪ್ರಯುಕ್ತ ತ್ರಿವೇಣಿ ಸಂಗಮದಲ್ಲಿ ಕೋಟ್ಯಂತರ ಜನರು ಪುಣ್ಯ ಸ್ನಾನ ಮಾಡಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ಸಿನಿಮಾ ಕ್ಷೇತ್ರದ ಅನೇಕ ಗಣ್ಯರು ಪುಣ್ಯ ಸ್ನಾನ ಮಾಡಿದ್ದಾರೆ. ವಿಜಯ್ ದೇವರಕೊಂಡ, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ಅಕ್ಷಯ್​ ಕುಮಾರ್​ ಸೇರಿದಂತೆ ಹಲವರು ಮಹಾಕುಂಭಮೇಳದಲ್ಲಿ ಭಾಗಿ ಆಗಿದ್ದಾರೆ. ಇತ್ತೀಚೆಗೆ ನಟಿ ಕತ್ರಿನಾ ಕೈಫ್ ಅವರು ಪುಣ್ಯ ಸ್ನಾನ ಮಾಡಿದರು. ಆ ಸಂದರ್ಭದ ಡ್ರೋನ್ ವಿಡಿಯೋ ಈಗ ವೈರಲ್ ಆಗುತ್ತಿದೆ. ಅದರಲ್ಲಿನ ದೃಶ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಕತ್ರಿನಾ ಕೈಫ್ ಅವರಿಗೆ ದೇಶಾದ್ಯಂತ ಜನಪ್ರಿಯತೆ ಇದೆ. ಬಾಲಿವುಡ್ ಸಿನಿಮಾಗಳ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ಎಲ್ಲಿಯೇ ಕಾಣಿಸಿದರೂ ಜನರು ಫೋಟೋಗಾಗಿ ಮುಗಿಬೀಳುತ್ತಾರೆ. ಮಹಾಕುಂಭಮೇಳದಲ್ಲೂ ಅದು ಮರುಕಳಿಸಿದೆ. ಪುಣ್ಯ ಸ್ನಾನ ಮಾಡಲು ಬಂದ ಕತ್ರಿನಾ ಕೈಫ್ ಅವರನ್ನು ಕಂಡು ಫ್ಯಾನ್ಸ್ ಎಗ್ಸೈಟ್ ಆಗಿದ್ದಾರೆ.

ತ್ರಿವೇಣಿ ಸಂಗಮದಲ್ಲಿ ಕತ್ರಿನಾ ಕೈಫ್ ಪುಣ್ಯ ಸ್ನಾನ ಮಾಡುತ್ತಿರುವ ವಿಷಯ ತಿಳಿದು ಅನೇಕ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದರು. ಭಕ್ತಿ-ಭಾವದಿಂದ ನಡೆದುಕೊಳ್ಳಬೇಕಾದ ಈ ಸ್ಥಳದಲ್ಲಿ ಕೂಡ ಜನರು ಅಭಿಮಾನ ಪ್ರದರ್ಶಿಸಲು ಬಂದರು. ಈ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Fact Check: ಯಶ್ ಫ್ಯಾಮಿಲಿ ಸಮೇತ ಕುಂಭಮೇಳಕ್ಕೆ ಹೋಗಿದ್ದು ನಿಜವೇ? ಇಲ್ಲಿದೆ ವೈರಲ್ ವಿಡಿಯೋದ ಅಸಲಿಯತ್ತು

ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಲು ಬಂದ ಸೆಲೆಬ್ರಿಟಿಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗಿದ್ದರೂ ಕೂಡ ಜನರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಪ್ರತ್ಯೇಕ ವ್ಯವಸ್ಥೆ ಇಲ್ಲದೇ ಇದ್ದಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ‘ವಿಐಪಿ ಕಲ್ಚರ್​ ಇರಬಾರದು ಅಂತ ಜನರು ಹೇಳ್ತಾರೆ. ಆದರೆ ಹೇಗೆ ನಡೆದುಕೊಳ್ಳಬೇಕು ಎಂಬುದು ಜನರಿಗೆ ಗೊತ್ತಿಲ್ಲ. ನನಗೆ ಈ ವಿಡಿಯೋ ನೋಡಿ ಉಸಿರು ಕಟ್ಟಿದಂಗೆ ಆಯಿತು’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

​ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.