ನಟ ಸಲ್ಮಾನ್ ಖಾನ್ (Salman Khan) ಅವರು ಬಹುದಿನಗಳ ಬಳಿಕ ದೊಡ್ಡ ಪರದೆಯಲ್ಲಿ ಅಭಿಮಾನಿಗಳಿಗೆ ದರ್ಶನ ನೀಡುತ್ತಿದ್ದಾರೆ. 2021ರಲ್ಲಿ ತೆರೆಕಂಡ ‘ರಾಧೆ’ ಸಿನಿಮಾ ಬಳಿಕ ಅವರಿವರ ಚಿತ್ರಗಳಲ್ಲಿ ಸಲ್ಲು ಅತಿಥಿ ಪಾತ್ರ ಮಾಡಿದ್ದರು. ಆದ್ರೆ ಅವರು ಹೀರೋ ಆಗಿ ನಟಿಸಿದ ಬೇರಾವುದೇ ಸಿನಿಮಾ ರಿಲೀಸ್ ಆಗಿರಲಿಲ್ಲ. ಈಗ ಅವರು ನಟಿಸಿರುವ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಸಿನಿಮಾ ಬಿಡುಗಡೆ ಆಗುತ್ತಿದೆ. ಈದ್ ಪ್ರಯುಕ್ತ ಏಪ್ರಿಲ್ 21ರಂದು ಈ ಚಿತ್ರ ತೆರೆಕಾಣುತ್ತಿದೆ. ಹಾಗಾದರೆ ಮೊದಲ ದಿನ ಈ ಸಿನಿಮಾ ಎಷ್ಟು ಕಲೆಕ್ಷನ್ (Box Office Collection) ಮಾಡಬಹುದು ಎಂಬ ಕೌತುಕ ಮೂಡಿದೆ. ಅಡ್ವಾನ್ಸ್ ಬುಕ್ಕಿಂಗ್ನಲ್ಲಿ ಚಿತ್ರಕ್ಕೆ ಸಾಧಾರಣ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ ಮೊದಲ ದಿನ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಆಗುವುದಿಲ್ಲ ಎಂದು ಅಂದಾಜಿಸಲಾಗುತ್ತಿದೆ. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾಗೆ ಸ್ವತಃ ಸಲ್ಮಾನ್ ಖಾನ್ ಅವರು ಬಂಡವಾಳ ಹೂಡಿದ್ದಾರೆ.
ಫರ್ಹಾದ್ ಸಮ್ಜಿ ಅವರ ನಿರ್ದೇಶನದಲ್ಲಿ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಮೂಡಿಬಂದಿದೆ. ಈ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ಅವರು ಸಲ್ಮಾನ್ ಖಾನ್ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಟಾಲಿವುಡ್ ಸ್ಟಾರ್ ನಟ ದಗ್ಗುಬಾಟಿ ವೆಂಕಟೇಶ್ ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ವಿಲನ್ ಆಗಿ ಜಗಪತಿ ಬಾಬು ನಟಿಸಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಕೌತುಕ ಮೂಡಿಸಿದೆ.
ಈ ವಾರ ಸಲ್ಮಾನ್ ಖಾನ್ ಸಿನಿಮಾ ಅಬ್ಬರ; ಪೈಪೋಟಿ ನೀಡಲಿವೆ ಕನ್ನಡದ ಹಲವು ಚಿತ್ರಗಳು
ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಅವರು ಸ್ಟಾರ್ ನಟನಾಗಿ ಮಿಂಚುತ್ತಿದ್ದಾರೆ. ಅವರ ಸಿನಿಮಾಗಳು ಮೊದಲ ದಿನ ದೊಡ್ಡ ಬಿಸ್ನೆಸ್ ಮಾಡುವುದು ವಾಡಿಕೆ. ಆದರೆ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ನಿರೀಕ್ಷಿತ ಮಟ್ಟದ ಓಪನಿಂಗ್ ಪಡೆಯುವುದಿಲ್ಲ ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲ ದಿನ ಈ ಸಿನಿಮಾ ಅಂದಾಜು 15 ಕೋಟಿ ರೂಪಾಯಿ ಗಳಿಸಬಹುದು ಎಂದು ಹೇಳಲಾಗುತ್ತಿದೆ.
Kisi Ka Bhai Kisi Ki Jaan: ‘ವಯಸ್ಸಾದವರ ಮೇಲೆ ಸಲ್ಮಾನ್ ಖಾನ್ ಕೈ ಎತ್ತಲ್ಲ’: ಜಗಪತಿ ಬಾಬು
ತಮಿಳಿನ ‘ವೀರಂ’ ಚಿತ್ರದ ರಿಮೇಕ್ ಆಗಿ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಮೂಡಿಬಂದಿದೆ. ಬಾಲಿವುಡ್ ಪ್ರೇಕ್ಷಕರು ಇತ್ತೀಚಿನ ದಿನಗಳಲ್ಲಿ ರಿಮೇಕ್ ಸಿನಿಮಾಗಳ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಹಾಗಾಗಿ ಸಲ್ಮಾನ್ ಖಾನ್ ಅವರು ಸ್ವಮೇಕ್ ಕಡೆಗೆ ಹೆಚ್ಚು ಗಮನ ಹರಿಸುವುದು ಒಳ್ಳೆಯದು ಎಂಬ ಅಭಿಪ್ರಾಯ ಕೇಳಿಬಂದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.