ಈ ವಾರ ಸಲ್ಮಾನ್ ಖಾನ್ ಸಿನಿಮಾ ಅಬ್ಬರ; ಪೈಪೋಟಿ ನೀಡಲಿವೆ ಕನ್ನಡದ ಹಲವು ಚಿತ್ರಗಳು
Kisi Ka Bhai Kisi Ki Jaan: ಏಪ್ರಿಲ್ 21ರಂದು ಅದ್ದೂರಿಯಾಗಿ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಬಿಡುಗಡೆ ಆಗಲಿದೆ. ಇದರ ಜೊತೆ ಕನ್ನಡದ 8 ಸಿನಿಮಾಗಳು ತೆರೆಕಾಣುತ್ತಿವೆ.
ಶುಕ್ರವಾರ ಬಂತೆಂದರೆ ಸಿನಿಪ್ರಿಯರಿಗೆ ಹಬ್ಬ. ಬಿಡುಗಡೆ ಆಗುವ ಹೊಸ ಸಿನಿಮಾಗಳಲ್ಲಿ ಯಾವುದು ಚೆನ್ನಾಗಿದೆ ಎಂಬುದನ್ನು ತಿಳಿದುಕೊಂಡು ಮೊದಲ ದಿನವೇ ನೋಡುವ ಬಯಕೆ ಪ್ರೇಕ್ಷಕರಿಗೆ ಇರುತ್ತದೆ. ಹಾಗಾಗಿ ಪ್ರತಿ ಶುಕ್ರವಾರಕ್ಕಾಗಿ ಕಾಯುತ್ತಾರೆ ಸಿನಿಮಾಸಕ್ತರು. ಹಬ್ಬ ಹರಿದಿನಗಳ ಸಂದರ್ಭದಲ್ಲಿ ವಿಶೇಷ ಸಿನಿಮಾಗಳು ರಿಲೀಸ್ ಆಗುತ್ತವೆ. ಈ ವಾರ ರಂಜಾನ್ ಪ್ರಯುಕ್ತ ಸಲ್ಮಾನ್ ಖಾನ್ (Salman Khan) ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ (Kisi Ka Bhai Kisi Ki Jaan) ಬಿಡುಗಡೆ ಆಗುತ್ತಿದೆ. ಏಪ್ರಿಲ್ 21ರಂದು ಎಲ್ಲೆಲ್ಲೂ ಸಲ್ಲು ಸಿನಿಮಾ ಅಬ್ಬರಿಸಲಿದೆ. ಆ ಚಿತ್ರಕ್ಕೆ ಪೈಪೋಟಿ ನೀಡಲು ಬೇರೆ ಯಾವುದೇ ದೊಡ್ಡ ಸಿನಿಮಾ ಬರುತ್ತಿಲ್ಲ. ಆದರೆ ಕನ್ನಡದ ಹಲವು ಸಿನಿಮಾಗಳು (New Kannada Movies) ರಿಲೀಸ್ ಆಗುತ್ತಿವೆ. ಬೇರೆ ಬೇರೆ ಕಾರಣಗಳಿಗಾಗಿ ಈ ಚಿತ್ರಗಳು ಗಮನ ಸೆಳೆಯುತ್ತಿವೆ.
ಮಾಸ್ ಅಭಿಮಾನಿಗಳಿಗೆ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’:
ಸಲ್ಮಾನ್ ಖಾನ್ ಅವರು ಮಾಸ್ ಪ್ರೇಕ್ಷಕರನ್ನು ರಂಜಿಸುತ್ತಾರೆ. ಫ್ಯಾಮಿಲಿ ಪ್ರೇಕ್ಷಕರಿಗೂ ಅವರ ಸಿನಿಮಾಗಳೆಂದರೆ ಇಷ್ಟ. ಈ ಎರಡೂ ವರ್ಗದ ಅಭಿಮಾನಿಗಳನ್ನು ಗಮನದಲ್ಲಿ ಇಟ್ಟುಕೊಂಡು ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಸಿದ್ಧವಾದಂತಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಫರ್ಹಾದ್ ಸಮ್ಜಿ ಅವರು ನಿರ್ದೇಶನ ಮಾಡಿದ್ದಾರೆ. ಸಲ್ಮಾನ್ ಖಾನ್ ಅವರ ಹೋಮ್ ಬ್ಯಾನರ್ನಲ್ಲೇ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರ ನಿರ್ಮಾಣ ಆಗಿದೆ. ಟಾಲಿವುಡ್ ನಟ ದಗ್ಗುಬಾಟಿ ವೆಂಕಟೇಶ್, ಜಗಪತಿ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.
Kisi Ka Bhai Kisi Ki Jaan: ‘ವಯಸ್ಸಾದವರ ಮೇಲೆ ಸಲ್ಮಾನ್ ಖಾನ್ ಕೈ ಎತ್ತಲ್ಲ’: ಜಗಪತಿ ಬಾಬು
ಕನ್ನಡದಲ್ಲಿ ಸ್ಟಾರ್ ನಟರ ಸಿನಿಮಾಗಳು ಈ ವಾರ ಬಿಡುಗಡೆ ಆಗುತ್ತಿಲ್ಲ. ‘ಬಿಸಿಲು ಕುದುರೆ’, ‘ಚಾಂದಿನಿ ಬಾರ್’, ‘ಇಂಗ್ಲಿಷ್ ಮಂಜ’, ‘ಮಾವು ಬೇವು’, ‘ಮಗಳೇ’, ‘ನನ್ನಾಕಿ’, ‘ನೋಡದ ಪುಟಗಳು’, ‘ರಂಜಾನ್’ ಸಿನಿಮಾಗಳು ತೆರೆಕಾಣುತ್ತಿವೆ. ಇಷ್ಟೆಲ್ಲ ಸಿನಿಮಾಗಳು ಏಕಕಾಲಕ್ಕೆ ಥಿಯೇಟರ್ಗೆ ಬಂದರೆ ಯಾವುದನ್ನು ನೋಡೋದು ಯಾವುದನ್ನು ಬಿಡೋದು ಎಂಬ ಗೊಂದಲ ಪ್ರೇಕ್ಷಕರಿಗೆ ಖಂಡಿತಾ ಆಗುತ್ತದೆ. ಕಳೆದ ವಾರ ಬಿಡುಗಡೆ ಆದ ‘ಶಿವಾಜಿ ಸುರತ್ಕಲ್ 2’ ಚಿತ್ರ ಕೂಡ ಹಲವು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ತಮಿಳಿನ ‘ಎನ್ನೈ ಮುಗದಾನ್’, ‘ಯಾತಿಸೈ’ ಚಿತ್ರಗಳು ಏಪ್ರಿಲ್ 21ರಂದು ಬಿಡುಗಡೆ ಆಗುತ್ತಿವೆ. ತೆಲುಗಿನಲ್ಲಿ ‘ಹೆಲೋ ಮೀರಾ’, ‘ವಿರೂಪಾಕ್ಷ’ ಸಿನಿಮಾಗಳು ತೆರೆಕಾಣುತ್ತಿವೆ. ಇಂಗ್ಲಿಷ್ನ ‘ಇವಿಲ್ ಡೆಡ್ ರೈಸ್’ ಸಿನಿಮಾ ಕೂಡ ಪೈಪೋಟಿ ನೀಡುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.