ಭಾರತೀಯ ಚಿತ್ರರಂಗದ ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್ ಅವರು ಇಂದು (ಸೆ.28) 92ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ಸಂಗೀತ ಲೋಕದಲ್ಲಿ ಅಪಾರ ಸಾಧನೆ ಮಾಡಿದ ಈ ಮಹಾನ್ ಸಿಂಗರ್ಗೆ ಕೋಟ್ಯಂತರ ಅಭಿಮಾನಿಗಳಿಂದ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಸಾವಿರಾರು ಸೂಪರ್ ಹಿಟ್ ಹಾಡುಗಳಿಗೆ ಧ್ವನಿಯಾದ ಲತಾ ಮಂಗೇಶ್ಕರ್ ಅವರಿಗೆ ಸಾಟಿ ಬೇರಾರೂ ಇಲ್ಲ. ಅನೇಕ ಸೆಲೆಬ್ರಿಟಿಗಳು ಕೂಡ ಅವರಿಗೆ ವಿಶ್ ಮಾಡುತ್ತಿದ್ದಾರೆ. ತಮ್ಮ ಸುಮಧುರ ಕಂಠದ ಬಗ್ಗೆ ಲತಾ ಮಂಗೇಶ್ಕರ್ ಸ್ವತಃ ಮಾತನಾಡಿದ್ದು ವಿರಳ. ಅಂಥ ಕೆಲವು ಅಪರೂಪದ ಮಾತುಗಳು ಇಲ್ಲಿವೆ.
ಪಾಕಿಸ್ತಾನಿ ಗಾಯಕಿ ನೂರ್ ಜಹಾನ್ ಅವರು ಲತಾ ಮಂಗೇಶ್ಕರ್ ಅವರಿಗೆ ಸ್ಫೂರ್ತಿ ಆಗಿದ್ದರು. ಪಾಕಿಸ್ತಾನಿ ಸಿನಿಮಾದಲ್ಲಿ ಗಾಯಕಿಯಾಗಿ ಫೇಮಸ್ ಆಗುವುದರ ಜೊತೆಗೆ ಅನೇಕ ಬಾಲಿವುಡ್ ಸಿನಿಮಾಗಳಲ್ಲಿ ನೂರ್ ಜಹಾನ್ ನಟಿಸಿದ್ದಾರೆ. ಅವರ ಅಭಿನಯದ ‘ಬಡೀ ಮಾ’ (1945) ಚಿತ್ರದಲ್ಲಿ ಲತಾ ಮಂಗೇಶ್ಕರ್ ಒಂದು ಚಿಕ್ಕ ಪಾತ್ರ ಮಾಡುವುದರ ಜೊತೆಗೆ ಒಂದು ಗೀತೆಯನ್ನೂ ಹಾಡಿದ್ದರು. ಆಗ ಅವರ ಕಂಠವನ್ನು ಗಮನಿಸಿದ ನೂರ್ ಜಹಾನ್ ಅವರು ಲತಾ ಬಗ್ಗೆ ಭವಿಷ್ಯ ನುಡಿದಿದ್ದರು.
‘ಬಡೀ ಮಾ ಸಿನಿಮಾದ ಶೂಟಿಂಗ್ ಸೆಟ್ನಲ್ಲಿ ನೂರ್ ಜಹಾನ್ ಅವರಿಗೆ ನನ್ನನ್ನು ಪರಿಚಯಿಸಲಾಯಿತು. ತಮ್ಮೆದುರು ಒಂದು ಹಾಡು ಹೇಳುವಂತೆ ಅವರು ನನಗೆ ಸೂಚಿಸಿದರು. ನನ್ನ ಹಾಡು ಕೇಳಿ ಅವರಿಗೆ ಖುಷಿ ಆಯಿತು. ನೀನು ಮುಂದೊಂದು ದಿನ ಒಳ್ಳೆಯ ಗಾಯಕಿ ಆಗೋದು ಖಚಿತ. ಚೆನ್ನಾಗಿ ಅಭ್ಯಾಸ ಮಾಡು ಅಂತ ಹೇಳಿದ್ದರು’ ಎಂಬ ವಿಷಯವನ್ನು ‘ಇನ್ ಹರ್ ಓನ್ ವಾಯ್ಸ್’ ಪುಸ್ತಕದಲ್ಲಿ ಲತಾ ಮಂಗೇಶ್ಕರ್ ಉಲ್ಲೇಖಿಸಿದ್ದಾರೆ.
ಗಾಯನವನ್ನು ವೃತ್ತಿಯಾಗಿ ಸ್ವೀಕರಿಸಿದವರು ತಮ್ಮ ಧ್ವನಿಯನ್ನು ಚೆನ್ನಾಗಿ ಇಟ್ಟುಕೊಳ್ಳಲು ಹಲವು ರೀತಿಯಲ್ಲಿ ಎಚ್ಚರಿಕೆ ವಹಿಸುತ್ತಾರೆ. ಧ್ವನಿ ಕೆಡಬಾರದು ಎಂಬ ಕಾಳಜಿಯಿಂದ ತಾವು ಸೇವಿಸುವ ಆಹಾರದಲ್ಲೂ ಕಟ್ಟುನಿಟ್ಟಾಗಿ ಇರುತ್ತಾರೆ. ಆದರೆ ಲತಾ ಮಂಗೇಶ್ಕರ್ ಆ ರೀತಿ ಅಲ್ಲ. ‘ನಾನು ಊಟದಲ್ಲಿ ಯಾವುದೇ ನಿರ್ಬಂಧಗಳನ್ನು ಹಾಕಿಕೊಂಡಿಲ್ಲ. ಉಪ್ಪಿನಕಾಯಿ, ಮೊಸರು, ಮೆಣಸಿನಕಾಯಿ ತಿನ್ನಬಾರದು ಅಂತ ಕೆಲವರು ಕೇಳುತ್ತಾರೆ. ನಾನು ಎಲ್ಲವನ್ನೂ ತಿನ್ನುತ್ತೇನೆ’ ಎಂದು ಈ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲತಾ ಮಂಗೇಶ್ಕರ್ ಹೇಳಿಕೊಂಡಿದ್ದರು.
ಇದನ್ನೂ ಓದಿ:
ಸತತ ಒಂದು ತಿಂಗಳ ಚಿಕಿತ್ಸೆ ವಿಫಲ; ಕೊವಿಡ್ಗೆ ಬಲಿಯಾದ ಖ್ಯಾತ ಗಾಯಕಿ
ಹಿಂದೂಸ್ಥಾನಿ ಗಾಯಕ, ಪದ್ಮವಿಭೂಷಣ ಪುರಸ್ಕೃತ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ನಿಧನ