ಲತಾಜೀ ಹಾಡೋದು ಕಡಿಮೆ ಮಾಡಿದ್ದಕ್ಕೆ ಇದೆ ಮುಖ್ಯ ಕಾರಣ; ಲೆಜೆಂಡರಿ ಗಾಯಕಿಯ ನೇರ ಮಾತು ಇಲ್ಲಿದೆ..

| Updated By: ಮದನ್​ ಕುಮಾರ್​

Updated on: Feb 07, 2022 | 8:22 AM

Lata Mangeshkar: ಹಾಡುಗಳ ಆಯ್ಕೆ ವಿಚಾರದಲ್ಲಿ ಲತಾ ಮಂಗೇಶ್ಕರ್​ ಅವರು ಕೆಲವು ನಿಯಮಗಳನ್ನು ಪಾಲಿಸುತ್ತಿದ್ದರು. ಆ ಬಗ್ಗೆ ಅವರು ಹೇಳಿಕೊಂಡಿದ್ದರು.

ಲತಾಜೀ ಹಾಡೋದು ಕಡಿಮೆ ಮಾಡಿದ್ದಕ್ಕೆ ಇದೆ ಮುಖ್ಯ ಕಾರಣ; ಲೆಜೆಂಡರಿ ಗಾಯಕಿಯ ನೇರ ಮಾತು ಇಲ್ಲಿದೆ..
ಲತಾ ಮಂಗೇಶ್ಕರ್
Follow us on

ಅಸಂಖ್ಯಾತ ಹಾಡುಗಳಿಗೆ ಧ್ವನಿ ನೀಡುವ ಮೂಲಕ ಲತಾ ಮಂಗೇಶ್ಕರ್ (Lata Mangeshkar)​ ಅವರು ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು. ಫೆ.6ರಂದು ಅವರು ಅನಾರೋಗ್ಯದಿಂದ ನಿಧನರಾಗಿದ್ದು (Lata Mangeshkar Death) ತೀವ್ರ ನೋವಿನ ಸಂಗತಿ. ಹಲವು ದಶಕಗಳ ಕಾಲ ಸಂಗೀತ ಲೋಕಕ್ಕೆ ಸೇವೆ ಸಲ್ಲಿಸಿದ ಅವರನ್ನು ಸಕಲ ಸರ್ಕಾರಿ ಗೌರವಗಳೊಂದಿವೆ ಬೀಳ್ಕೊಡಲಾಗಿದೆ. ಬೇಸರದ ಸಂಗತಿ ಏನೆಂದರೆ, 2010ರ ಸಮಯಕ್ಕಾಗಲೇ ಲತಾ ಮಂಗೇಶ್ಕರ್​ ಅವರು ಹೆಚ್ಚು ಗೀತೆಗಳನ್ನು (Lata Mangeshkar Songs) ಹಾಡುತ್ತಿರಲಿಲ್ಲ. ಅಲ್ಲೊಂದು ಇಲ್ಲೊಂದು ಹೊಸ ಹಾಡುಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದರು. ಅದಕ್ಕೆ ಕೆಲವು ತಾಂತ್ರಿಕ ಕಾರಣಗಳು ಇದ್ದವು. ಅದಕ್ಕಿಂತಲೂ ಮುಖ್ಯವಾಗಿ ಅವರಿಗೆ ಹೊಸ ತಲೆಮಾರಿನ ಸಂಗೀತ ನಿರ್ದೇಶಕರ ಕೆಲಸದ ರೀತಿ-ನೀತಿ ಹೊಂದಿಕೆ ಆಗುತ್ತಿರಲಿಲ್ಲ. ಅಷ್ಟೇ ಅಲ್ಲ, ಶಾಕಿಂಗ್​ ವಿಚಾರ ಏನೆಂದರೆ ಎಷ್ಟೋ ಹೊಸ ಸಂಗೀತ ನಿರ್ದೇಶಕರಿಗೆ ಲತಾ ಮಂಗೇಶ್ಕರ್​ ಅವರ ಕೆಲಸದ ಶೈಲಿ ಇಷ್ಟ ಆಗುತ್ತಿರಲಿಲ್ಲ! 2013ರಲ್ಲಿ ಹಿಂದುಸ್ತಾನ್​ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಲತಾ ಮಂಗೇಶ್ಕರ್​ ಅವರು ನೇರವಾಗಿ ಹೇಳಿದ್ದರು.

ಹಾಡುಗಳ ಆಯ್ಕೆ ವಿಚಾರದಲ್ಲಿ ಲತಾ ಮಂಗೇಶ್ಕರ್​ ಅವರು ಕೆಲವು ನಿಯಮಗಳನ್ನು ಪಾಲಿಸುತ್ತಿದ್ದರು. ಆ ಬಗ್ಗೆ ಅವರು ಹೇಳಿಕೊಂಡಿದ್ದರು. ‘ಸಾಂಗ್​ ಆಯ್ಕೆ ಮಾಡುವಾಗ ನಾನು ಒಂದಷ್ಟು ವಿಷಯ ಗಮನಿಸುತ್ತೇನೆ. ಒಂದು ಹಾಡನ್ನು ಒಪ್ಪಿಕೊಳ್ಳುವುದಕ್ಕೂ ಮುನ್ನ ಅದರ ಸಾಹಿತ್ಯವನ್ನು ಓದುತ್ತೇನೆ. ನಂತರ ಟ್ಯೂನ್​ ಕೇಳಿಸಿಕೊಳ್ಳುತ್ತೇನೆ. ನಾನು ಕೆಲಸ ಮಾಡುವ ರೀತಿಯು ಇಂದಿನ ಸಂಗೀತ ನಿರ್ದೇಶಕರಿಗೆ ಇಷ್ಟ ಆಗುತ್ತಿಲ್ಲ ಅಂತ ನನಗೆ ಅನಿಸುತ್ತಿದೆ. ಹಾಗಾಗಿ ಸಿನಿಮಾಗಳಿಗೆ ಹಾಡಬೇಕೆಂದು ನನಗೆ ಮನಸ್ಸಾಗುವುದಿಲ್ಲ’ ಎಂದು ಲತಾ ಮಂಗೇಶ್ಕರ್​ ಹೇಳಿದ್ದರು.

ಬದಲಾದ ಕಾಲಘಟ್ಟದ ಬಗ್ಗೆಯೂ ಅವರು ಮಾತನಾಡಿದ್ದರು. ‘ಇಂದಿನ ಕಾಲದ ಹಾಡುಗಳು ಒಂದೆರಡು ತಿಂಗಳು ಸೌಂಡು ಮಾಡುತ್ತವೆ, ನಂತರ ಕಾಣೆ ಆಗುತ್ತವೆ. ತಾಂತ್ರಿಕವಾಗಿ ನಾವು ಮುಂದುವರಿದಿದ್ದೇವೆ. ಆದರೆ ಸಂಗೀತದ ಗುಣಮಟ್ಟ ಕಡಿಮೆ ಆಗಿದೆ. ಸಿನಿಮಾದಲ್ಲಿ ಹಾಡುಗಳ ಸಂಖ್ಯೆ ಮತ್ತು ವೈವಿಧ್ಯ ಕುಸಿದಿದೆ. ನನಗೆ ಅಚ್ಚರಿ ಆಗುತ್ತದೆ. 1960ರಲ್ಲಿ ‘ಮೊಘಲ್​-ಏ-ಆಜಮ್​’ ಚಿತ್ರಕ್ಕೆ 11 ಗೀತೆಗಳನ್ನು ಹಾಡಿದ್ದು ನನಗೆ ನೆನಪಿದೆ. ಇಂದು ಸಂಗೀತ ಬಂದರೆ ಬರೀ ಡ್ಯಾನ್ಸ್​ ಎಂಬಂತೆ ಆಗಿದೆ. ಆ ದಿನಗಳಲ್ಲಿ ‘ಹಲ್ಕಟ್​ ಜವಾನಿ’ ಎಂಬ ಪದವನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ನಮ್ಮ ಕಾಲದಲ್ಲಿ ಗಾಯಕರು ತುಂಬ ಕಷ್ಟಪಡುತ್ತಿದ್ದರು. ಒಂದು ಹಾಡಿನ ಅವಕಾಶ ಪಡೆಯಲು ನಾವು ಅನೇಕ ಅಡ್ಡಿ ಆತಂಕಗಳನ್ನು ದಾಟಿ ಬರಬೇಕಿತ್ತು. ಇಂದಿನವರಿಗೆ ಅದೆಲ್ಲ ಸುಲಭ ಆಗಿದೆ’ ಎಂದು ಲತಾ ಮಂಗೇಶ್ಕರ್​ ಹೇಳಿದ್ದರು.

ಶಿವಾಜಿ ಪಾರ್ಕ್​ನಲ್ಲಿ ಅಂತ್ಯಕ್ರಿಯೆ:

ಲತಾ ಮಂಗೇಶ್ಕರ್​ ಅವರು ಭಾನುವಾರ (ಫೆಬ್ರವರಿ 6) ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ನಿಧನ ಹೊಂದಿದರು. ಮುಂಬೈನ ಖಾಸಗಿ ಆಸ್ಪತ್ರೆ ವೈದ್ಯರು ಈ ವಿಚಾರವನ್ನು ಅಧಿಕೃತ ಮಾಡಿದರು. ಕೊವಿಡ್ ಹಾಗೂ ನ್ಯೂಮೋನಿಯಾದಿಂದ ಅವರು ಬಳಲುತ್ತಿದ್ದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಹೀಗಾಗಿ, ಲತಾ ದೇಹ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರು ನಿಧನ ಹೊಂದಿದರು. ಸಂಜೆ ಮುಂಬೈನ ಶಿವಾಜಿ ಪಾರ್ಕ್​​ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಲತಾ ಮಂಗೇಶ್ಕರ್​​ ಅವರ ಅಂತಿಮ ಸಂಸ್ಕಾರ ನೆರವೇರಿತು. ಪ್ರಧಾನಿ ನರೇಂದ್ರ ಮೋದಿ, ನಟ ಶಾರುಖ್​ ಖಾನ್​ ಸೇರಿ ಸಾಕಷ್ಟು ಗಣ್ಯರು ಇದಕ್ಕೆ ಸಾಕ್ಷಿ ಆದರು. ಶಿವಾಜಿ ಪಾರ್ಕ್​​ನಲ್ಲಿ ದುಃಖದ ಛಾಯೆ ಆವರಿಸಿತ್ತು. ಎಲ್ಲರೂ ಭಾವುಕರಾಗಿದ್ದರು. ಲೆಜೆಂಡರಿ ಗಾಯಕಿಯನ್ನು ಕಳೆದುಕೊಂಡ ದುಃಖ ಎಲ್ಲರಲ್ಲೂ ಮನೆ ಮಾಡಿತ್ತು.

ಇದನ್ನೂ ಓದಿ:

‘ಬೆಳ್ಳನೆ ಬೆಳಗಾಯಿತು..’ ಎಂದು ಕನ್ನಡಿಗರ ಮನ ಗೆದ್ದಿದ್ದ ಲತಾ ಮಂಗೇಶ್ಕರ್​; ಇಲ್ಲಿದೆ ಅವರ ಕನ್ನಡ ಗೀತೆ ಬಗ್ಗೆ ವಿವರ

‘ಲತಾ ಮಂಗೇಶ್ಕರ್​ ಅವರ ಆ ಹಾಡು ಕೇಳಿದ್ರೆ ಈಗಲೂ ಕಣ್ಣೀರು ಬರುತ್ತೆ’: ಬಸವರಾಜ ಬೊಮ್ಮಾಯಿ