
ಬಾಲಿವುಡ್‌ನ ಹಿರಿಯ ನಿರ್ದೇಶಕ, ಆಲಿಯಾ ಭಟ್ ತಂದೆ ಮಹೇಶ್ ಭಟ್ ಅವರು ಚಿತ್ರ ನಿರ್ದೇಶನಕ್ಕೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ತಾವು ಇನ್ನು ಮುಂದೆ ಎಂದಿಗೂ ನಿರ್ದೇಶಕನ ಕ್ಯಾಪ್ ತೊಡೋದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ಅರ್ಥ್’, ‘ಸಾರಂಶ್’, ‘ನಾಮ್’, ‘ದಿಲ್ ಹೈ ಕಿ ಮಾಂತಾ ನಹೀ’ ಮತ್ತು ‘ಸಡಕ್’ ನಂತಹ ಅದ್ಭುತ ಸಿನಿಮಾಗಳನ್ನು ನೀಡಿದ ಅವರು ಈಗ ಚಿತ್ರರಂಗದಿಂದ ದೂರ ಸರಿದಿದ್ದಾರೆ. ಪ್ರಸ್ತುತ ಹೊಸ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವುದರಲ್ಲಿ ತಮಗೆ ಹೆಚ್ಚಿನ ಸಂತೋಷ ಸಿಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇಂದಿನ ಸಿನಿಮಾ ತಯಾರಿಕೆ ಈಗ ಸಂಪೂರ್ಣವಾಗಿ ಬದಲಾಗಿದೆ ಎಂದು ಮಹೇಶ್ ಭಟ್ ಅಭಿಪ್ರಾಯಪಟ್ಟಿದ್ದಾರೆ. ‘ಇಂದಿನ ಮಾರುಕಟ್ಟೆಯ ಬೇಡಿಕೆಗಳಿಗೆ ತಕ್ಕಂತೆ ಸಿನಿಮಾಗಳು ಸಿದ್ಧವಾಗುತ್ತಿವೆ. ಚಿತ್ರೀಕರಣ ಆರಂಭವಾಗುವ ಮೊದಲೇ ಕಥೆ ಮತ್ತು ಕಂಟೆಂಟ್ ಹೀಗೆಯೇ ಇರಬೇಕು ಎಂದು ಮೊದಲೇ ನಿರ್ಧರಿಸಲಾಗುತ್ತದೆ. ಬರವಣಿಗೆ ಶುರು ಮಾಡುವ ಮುನ್ನವೇ ಯಾವ ರೀತಿಯ ಸಿನಿಮಾ ಮಾಡಬೇಕು ಎಂಬುದು ಫಿಕ್ಸ್ ಆಗಿರುತ್ತದೆ. ಇದರಿಂದಾಗಿ ನಿರ್ದೇಶಕರಿಗೆ ತಮ್ಮ ಸ್ವಂತ ಕಲ್ಪನೆ ಅಥವಾ ಸ್ವಾತಂತ್ರ್ಯವನ್ನು ಬಳಸಲು ಇಂದಿನ ದಿನಗಳಲ್ಲಿ ಅವಕಾಶವೇ ಇಲ್ಲದಂತಾಗಿದೆ’ ಎಂದಿದ್ದಾರೆ ಅವರು.
ಮಹೇಶ್ ಭಟ್ ಅವರು 1999 ರಲ್ಲಿ ತೆರೆಕಂಡ ‘ಕಾರ್ತೂಸ್’ ಚಿತ್ರದ ನಂತರ ನಿರ್ದೇಶನದಿಂದ ದೂರ ಉಳಿದಿದ್ದರು. ತದನಂತರ ಎರಡು ದಶಕಗಳ ಬಳಿಕ ಅಂದರೆ 2020 ರಲ್ಲಿ ‘ಸಡಕ್ 2’ ಚಿತ್ರವನ್ನು ನಿರ್ದೇಶಿಸಿದ್ದರು. ಆ ಬಳಿಕ ಅವರು ಮತ್ತೆ ಸಿನಿಮಾ ಮಾಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಿಲ್ಲ.
ಇದನ್ನೂ ಓದಿ: ಮಹೇಶ್ ಭಟ್ ಫ್ಯಾಮಿಲಿ ಟ್ರೀ: ಇವರ ಕುಟುಂಬದ ಯಾರೆಲ್ಲಾ ಚಿತ್ರರಂಗದಲ್ಲಿದ್ದಾರೆ ಗೊತ್ತಾ?
ತಮ್ಮ ಐದು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಮಹೇಶ್ ಭಟ್ 50 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಭಾವನಾತ್ಮಕ ಸಿನಿಮಾಗಳ ಜೊತೆಗೆ ಭರ್ಜರಿ ಕಮರ್ಷಿಯಲ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗಿದೆ. ಸದ್ಯದ ಜೀವನದ ಘಟ್ಟದಲ್ಲಿ ತಮಗಾಗಿ ಸಿನಿಮಾ ಮಾಡುವುದಕ್ಕಿಂತ ಇತರರ ಯಶಸ್ಸಿಗೆ ಕಾರಣವಾಗುವುದು ಅವರಿಗೆ ಇಷ್ಟವಂತೆ. ‘ನನಗೆ ಇನ್ನು ಮುಂದೆ ಸಿನಿಮಾ ನಿರ್ದೇಶಿಸಲು ಇಷ್ಟವಿಲ್ಲ. ಯುವ ಪ್ರತಿಭೆಗಳಿಗೆ ಮೆಂಟರ್ ಆಗಿ ಕೆಲಸ ಮಾಡಲು ನಾನು ಬಯಸುತ್ತೇನೆ’ ಎಂದು ಅವರು ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:43 pm, Thu, 2 July 26