2004ರಲ್ಲಿ ತೆರೆಕಂಡಿದ್ದ ‘ಮರ್ಡರ್’ ಸಿನಿಮಾ (Murder Movie) ನೆನಪಿದೆಯಾ? ಆ ಸಿನಿಮಾ ಬಿಡುಗಡೆಯಾಗಿ 20 ವರ್ಷ ಕಳೆದಿದೆ. ಅಚ್ಚರಿ ಏನೆಂದರೆ, ಅದರಲ್ಲಿ ನಟಿಸಿದ್ದ ಇಮ್ರಾನ್ ಹಷ್ಮಿ ಮತ್ತು ಮಲ್ಲಿಕಾ ಶೆರಾವತ್ (Mallika Sherawat) ಅವರು ಕಳೆದ 20 ವರ್ಷಗಳಿಂದ ಪರಸ್ಪರ ಭೇಟಿ ಆಗಿರಲಿಲ್ಲ. ಇಬ್ಬರ ನಡುವೆ ಮುನಿಸು ಮನೆ ಮಾಡಿತ್ತು. ಆದರೆ ಈಗ ಅವರಿಬ್ಬರು ಮತ್ತೆ ಒಂದಾಗಿದ್ದಾರೆ. ಪರಸ್ಪರ ತಬ್ಬಿಕೊಂಡು ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಮಲ್ಲಿಕಾ ಶೆರಾವತ್ ಮತ್ತು ಇಮ್ರಾನ್ ಹಷ್ಮಿ (Emraan Hashmi) ಅವರನ್ನು ಮತ್ತೆ ಜೊತೆಯಾಗಿ ನೋಡಿದ ಅಭಿಮಾನಿಗಳಿಗೆ ಖುಷಿ ಆಗಿದೆ.
ಮುಂಬೈನಲ್ಲಿ ಗುರುವಾರ (ಏಪ್ರಿಲ್ 11) ನಿರ್ಮಾಪಕ ಆನಂದ್ ಪಂಡಿತ್ ಅವರ ಮಗಳ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಅದರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ಈ ಸಮಾರಂಭಕ್ಕೆ ಬಂದಿದ್ದಾಗ ಮಲ್ಲಿಕಾ ಶೆರಾವತ್ ಮತ್ತು ಇಮ್ರಾನ್ ಹಷ್ಮಿ ಅವರು ಭೇಟಿ ಆಗಿದ್ದಾರೆ. ಇಬ್ಬರೂ ಜೊತೆಯಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಆ ಮೂಲಕ ತಮ್ಮ ನಡುವೆ ಇದ್ದ 20 ವರ್ಷಗಳ ಮುನಿಸಿಗೆ ಪೂರ್ಣವಿರಾಮ ಹಾಕಿದ್ದಾರೆ.
ಇದನ್ನೂ ಓದಿ: ‘ಕಾಂಪ್ರಮೈಸ್ ಆಗುವಂತೆ ಹೇಳಿದ್ದರು’; ಮಲ್ಲಿಕಾ ಶೆರಾವತ್ ಎದುರಿಸಿದ ಕಷ್ಟ ಒಂದೆರಡಲ್ಲ..
‘ಮರ್ಡರ್’ ಸಿನಿಮಾದಲ್ಲಿ ಮಲ್ಲಿಕಾ ಶೆರಾವತ್ ಮತ್ತು ಇಮ್ರಾನ್ ಹಷ್ಮಿ ಅವರು ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿದ್ದರು. ಬೆಡ್ರೂಮ್ ದೃಶ್ಯದಲ್ಲಿ ಅವರು ಹಾಟ್ ಆಗಿ ಕಾಣಿಸಿಕೊಂಡಿದ್ದರು. ಅವರಿಬ್ಬರು ಲಿಪ್ ಲಾಕ್ ಮಾಡಿಕೊಂಡಿದ್ದು ಬಾಲಿವುಡ್ನಲ್ಲಿ ಹೊಸ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ತೆರೆಮೇಲೆ ಅಷ್ಟೆಲ್ಲ ಆಪ್ತವಾಗಿ ಕಾಣಿಸಿಕೊಂಡಿದ್ದ ಇಮ್ರಾನ್ ಹಷ್ಮಿ ಮತ್ತು ಮಲ್ಲಿಕಾ ಶೆರಾವತ್ ಅವರು ರಿಯಲ್ ಲೈಫ್ನಲ್ಲಿ ಕಿರಿಕ್ ಮಾಡಿಕೊಂಡಿದ್ದರು.
ಸಿನಿಮಾ ರಿಲೀಸ್ ಆಗುವುದರೊಳಗೆ ಮಲ್ಲಿಕಾ ಶೆರಾವತ್ ಮತ್ತು ಇಮ್ರಾನ್ ಹಷ್ಮಿ ನಡುವಿನ ಕಿರಿಕ್ ಜೋರಾಗಿತ್ತು. ಆ ಬಳಿಕ ಅವರು ಪರಸ್ಪರ ಮಾತನಾಡುವುದನ್ನೇ ಬಿಟ್ಟುಬಿಟ್ಟರು. ಆದರೆ 2021ರಲ್ಲಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಮಲ್ಲಿಕಾ ಶೆರಾವತ್ ಅವರು, ‘ಅದೊಂದು ಸಿಲ್ಲಿ ಜಗಳ. ತುಂಬ ಬಾಲಿಶವಾಗಿತ್ತು’ ಎಂದಿದ್ದರು. ಈಗ ಇಬ್ಬರ ನಡುವಿನ ಮನಸ್ತಾಪ ಮಾಯವಾಗಿದೆ. ಅವರಿಬ್ಬರು ಮತ್ತೆ ಜೋಡಿಯಾಗಿ ಸಿನಿಮಾ ಮಾಡಲಿ ಎಂದು ಅನೇಕರು ಬಯಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.