
ಮೂಲ ಸಿನಿಮಾದಲ್ಲಿ ಪಾತ್ರಕ್ಕೆ ಜೀವ ತುಂಬಿದ ನಟನೇ ಹಿಂದಿ ರಿಮೇಕ್ ಅಥವಾ ಮುಂದಿನ ಭಾಗವನ್ನು ನೋಡಿ ಮೆಚ್ಚುಗೆ ಸೂಚಿಸಿದರೆ ಆ ಚಿತ್ರತಂಡಕ್ಕಾಗುವ ಸಂತೋಷವೇ ಬೇರೆ. ಮಲಯಾಳಂ ಮೂಲ ಚಿತ್ರವಾದ ‘ದೃಶ್ಯಂ’ ಸಿನಿಮಾದಲ್ಲಿ ಜಾರ್ಜ್‌ಕುಟ್ಟಿ ಪಾತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ಹಿರಿಯ ನಟ ಮೋಹನ್‌ಲಾಲ್ ಅವರು ಈಗ ಹಿಂದಿಯ ‘ದೃಶ್ಯಂ: ದಿ ಕನ್‌ಕ್ಲೂಷನ್’ ಸಿನಿಮಾ ನೋಡಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಜಯ್ ದೇವಗನ್ ನಟನೆಯ ಈ ಸಿನಿಮಾದಲ್ಲಿ ಕಥೆಯನ್ನು ಮುಗಿಸಿರುವ ರೀತಿ ತಮಗೆ ತುಂಬಾ ಇಷ್ಟವಾಗಿದೆ ಎಂದು ಮೋಹನ್‌ಲಾಲ್ ಅವರು ತಿಳಿಸಿದ್ದಾರೆ.
ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿರುವ ಮೋಹನ್‌ಲಾಲ್, ‘ನಾನು ದೃಶ್ಯಂ 3 ಸಿನಿಮಾ ನೋಡಿದೆ. ಪ್ರೇಕ್ಷಕರು ಅಪಾರವಾಗಿ ಪ್ರೀತಿಸಿದ ಈ ಪಯಣಕ್ಕೆ ಅತ್ಯಂತ ಸೂಕ್ತ ಹಾಗೂ ಅದ್ಭುತ ಅಂತ್ಯ ನೀಡಿದ ರೀತಿ ನನಗೆ ನಿಜಕ್ಕೂ ತುಂಬಾ ಇಷ್ಟವಾಯಿತು. ನಿರ್ದೇಶಕ ಅಭಿಷೇಕ್ ಪಾಠಕ್, ನಿರ್ಮಾಪಕ ಕುಮಾರ್ ಮಂಗತ್ ಪಾಠಕ್, ನಟ ಅಜಯ್ ದೇವಗನ್ ಹಾಗೂ ಇಡೀ ಚಿತ್ರತಂಡಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳು’ ಎಂದು ಶುಭ ಹಾರೈಸಿದ್ದಾರೆ.
ಮಲಯಾಳಂನ ‘ದೃಶ್ಯಂ’ ಸರಣಿಗೆ ಭಾರತದಾದ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಆದರೆ, ಮಲಯಾಳಂನ ಮೂರನೇ ಭಾಗದ ಕಥೆಯನ್ನೇ ಅನುಸರಿಸುವ ಬದಲು ಹಿಂದಿ ಚಿತ್ರತಂಡ ತನ್ನದೇ ಆದ ಹೊಸ ರೀತಿಯಲ್ಲಿ ಕಥೆಯನ್ನು ಮುಕ್ತಾಯಗೊಳಿಸಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದ್ದ ಮಲಯಾಳಂ ಆವೃತ್ತಿಗಿಂತ ಹಿಂದಿಯ ಚಿತ್ರವೇ ಹೆಚ್ಚು ರೋಚಕವಾಗಿದೆ ಎಂದು ಅನೇಕ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
‘ದೃಶ್ಯಂ: ದಿ ಕನ್‌ಕ್ಲೂಷನ್’ ಚಿತ್ರವು ಪ್ರೇಕ್ಷಕರ ಪ್ರಶಂಸೆಯ ಜೊತೆಗೆ ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ಜಾಗತಿಕವಾಗಿ ಸರಿ ಸುಮಾರು 480 ಕೋಟಿ ರೂಪಾಯಿ ಗಳಿಸಿದ್ದು, ಭಾರತದಲ್ಲೇ 370.80 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಸಿನಿಮಾದಲ್ಲಿ ಅಜಯ್ ದೇವಗನ್ ಅವರು ತಮ್ಮ ಚಾಣಾಕ್ಷತನದಿಂದ ಪೊಲೀಸರ ಕಣ್ಣಿಗೆ ಮಣ್ಣೆರಚುವ ವಿಜಯ್ ಸಾಲ್ಗಾಂವ್ಕರ್ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಹೇಗಿದೆ ‘ದೃಶ್ಯಂ 3’: ನೋಡಿದವರು ಹೇಳಿದ್ದೇನು? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ
ಅಜಯ್ ದೇವಗನ್ ಅವರೊಂದಿಗೆ ಟಬು, ಶ್ರಿಯಾ ಸರನ್, ರಜತ್ ಕಪೂರ್, ಪ್ರಕಾಶ್ ರಾಜ್, ಇಶಿತಾ ದತ್ತಾ, ಕಮಲೇಶ್ ಸಾವಂತ್ ಹಾಗೂ ಮೃಣಾಲ್ ಜಾಧವ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಎಸ್‌ಪಿ ರಾಜ್‌ವೀರ್ ಸಿಂಗ್ ತೋಮರ್ ಪಾತ್ರದಲ್ಲಿ ಜೈದೀಪ್ ಅಹ್ಲಾವತ್ ಹೊಸ ಸೇರ್ಪಡೆಯಾಗಿದ್ದು, ವಿಜಯ್ ಸಾಲ್ಗಾಂವ್ಕರ್ ಮತ್ತು ರಾಜ್‌ವೀರ್ ನಡುವಿನ ಜಿದ್ದಾಜಿದ್ದಿನ ದೃಶ್ಯಗಳು ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.