‘ಜನ ಗಣ ಮನ’ ಬದಲು ‘ವಂದೇ ಮಾತರಂ’ ರಾಷ್ಟ್ರಗೀತೆ ಮಾಡಿ: ನಟ ಮುಖೇಶ್ ಖನ್ನಾ

‘ಜನ ಗಣ ಮನ’ ಮತ್ತು ‘ವಂದೇ ಮಾತರಂ’ ಗೀತೆಗಳ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಈ ಸಂದರ್ಭದಲ್ಲಿ ಹಿರಿಯ ನಟ ಮುಖೇಶ್ ಖನ್ನಾ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ‘ಜನ ಗಣ ಮನ’ ಗೀತೆಯನ್ನು ಭಾರತದಿಂದ ತೆಗೆದುಹಾಕಬೇಕು ಎಂದು ಅವರು ಹೇಳಿದ್ದಾರೆ.

‘ಜನ ಗಣ ಮನ’ ಬದಲು ‘ವಂದೇ ಮಾತರಂ’ ರಾಷ್ಟ್ರಗೀತೆ ಮಾಡಿ: ನಟ ಮುಖೇಶ್ ಖನ್ನಾ
Mukesh Khanna

Updated on: Aug 17, 2026 | 10:41 PM

ಬಾಲಿವುಡ್‌ನ ಹಿರಿಯ ನಟ ಹಾಗೂ ‘ಶಕ್ತಿಮಾನ್’ ಖ್ಯಾತಿಯ ಮುಖೇಶ್ ಖನ್ನಾ (Mukesh Khanna) ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಭಾರತದ ರಾಷ್ಟ್ರಗೀತೆಯಾಗಿರುವ ‘ಜನ ಗಣ ಮನ’ವನ್ನು (Jana Gana Mana) ದೇಶದಿಂದ ತೆಗೆದುಹಾಕಿ, ಅದರ ಜಾಗದಲ್ಲಿ ‘ವಂದೇ ಮಾತರಂ’ (Vande Mataram) ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ‘ಆವೋ ಬಚ್ಚೋಂ’ ಎಂಬ ನೂತನ ದೇಶಭಕ್ತಿ ಗೀತೆಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಮುಖೇಶ್ ಖನ್ನಾ ಅವರು ಈ ಹೇಳಿಕೆ ನೀಡಿದ್ದಾರೆ. ಈ ಮೊದಲು ಕೂಡ ಅವರು ತಮ್ಮ ನೇರ ಮಾತುಗಳ ಕಾರಣದಿಂದ ಸುದ್ದಿ ಆಗಿದ್ದರು. ಈಗ ಅವರು ರಾಷ್ಟ್ರಗೀತೆಯ ವಿಚಾರದಲ್ಲಿ ತಮ್ಮ ಅನಿಸಿಕೆ ತಿಳಿಸಿದ್ದಾರೆ.

‘ಜನ ಗಣ ಮನ’ ಗೀತೆಯ ಕುರಿತು ಮಾತನಾಡಿರುವ ಮುಖೇಶ್ ಖನ್ನಾ, ‘ಜನ ಗಣ ಮನ ನಮ್ಮ ದೇಶದ ನಿಜವಾದ ರಾಷ್ಟ್ರಗೀತೆಯಲ್ಲ. ಅದನ್ನು ಬ್ರಿಟನ್ನಿನ ರಾಣಿ ಎಲಿಜಬೆತ್ ಅವರನ್ನು ಹೊಗಳಲು ರವೀಂದ್ರನಾಥ ಠಾಗೋರ್ ಅವರು ಬರೆದಿದ್ದರು. ಅದನ್ನೇ ನಾವು ಸ್ವೀಕರಿಸಿ ಗೌರವಿಸುತ್ತಾ ಬಂದಿದ್ದೇವೆ. ಆದರೆ ಅದು ನಮ್ಮದಲ್ಲ. ವಂದೇ ಮಾತರಂ ಮಾತ್ರವೇ ನಮ್ಮ ನಿಜವಾದ ರಾಷ್ಟ್ರಗೀತೆ ಆಗಬೇಕು. ಲತಾ ಮಂಗೇಷ್ಕರ್ ಅವರು ಅದನ್ನು ಅತ್ಯಂತ ಸುಂದರವಾಗಿ ಹಾಡಿದ್ದಾರೆ’ ಎಂದು ಪ್ರತಿಪಾದಿಸಿದ್ದಾರೆ.

ಮುಂದುವರಿದು ಮಾತನಾಡಿದ ಮುಖೇಶ್ ಖನ್ನಾ, ‘ಜನ ಗಣ ಮನ ಗೀತೆಯನ್ನು ಆದಷ್ಟು ಬೇಗ ನಮ್ಮ ದೇಶದಿಂದ ತೆಗೆದುಹಾಕಬೇಕು ಮತ್ತು ವಂದೇ ಮಾತರಂ ಅನ್ನು ಅಧಿಕೃತವಾಗಿ ಜಾರಿಗೆ ತರಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಪ್ರತಿಯೊಂದು ಶಾಲೆಯಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯನ್ನು ಕಡ್ಡಾಯವಾಗಿ ಹಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ರಣವೀರ್ ಸಿಂಗ್‌ ಶಕ್ತಿಮಾನ್ ಆಗಲು ಮುಖೇಶ್ ಖನ್ನಾ ಒಪ್ಪಿಲ್ಲ ಎಂಬುದೆಲ್ಲ ಪ್ರಚಾರದ ಗಿಮಿಕ್’

ಅಲ್ಲದೆ, ತಾವು ಕೂಡ ಸುಮಾರು 7 ನಿಮಿಷಗಳ ಸುದೀರ್ಘ ‘ವಂದೇ ಮಾತರಂ’ ಗೀತೆಯನ್ನು ರೆಕಾರ್ಡ್ ಮಾಡಿದ್ದು, ಅದನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಮುಖೇಶ್ ಖನ್ನಾ ತಿಳಿಸಿದ್ದಾರೆ. ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಹಾಗೂ ಪರ-ವಿರೋಧದ ಅಭಿಪ್ರಾಯಗಳಿಗೆ ಕಾರಣವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us