ಯೂಟ್ಯೂಬ್ನಲ್ಲಿ ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ 25ರ ಯುವಕನ ಬಂಧನ
ರಾಜಸ್ಥಾನ ಮೂಲದ ಯುವಕನು ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಯೂಟ್ಯೂಬ್ ವಿಡಿಯೋದಲ್ಲಿ ಆತ ಬಿಷ್ಣೋಯ್ ಗ್ಯಾಂಗ್ನ ಬಗ್ಗೆಯೂ ಮಾತನಾಡಿದ್ದಾನೆ. ಆರೋಪಿಯ ವಿರುದ್ಧ ಮುಂಬೈ ಪೊಲೀಸರು ಕಾನೂನಿನ ಕ್ರಮಕ್ಕೆ ಮುಂದಾಗಿದ್ದಾರೆ. ಮುಂಬೈನಲ್ಲಿರುವ ಸಲ್ಮಾನ್ ಖಾನ್ ಅವರ ಮನೆ ಮೇಲೆ ಗುಂಡಿನ ದಾಳಿ ನಡೆದ ಬಳಿಕ ಭದ್ರತೆ ಹೆಚ್ಚಿಸಲಾಗಿದೆ.
ಬಾಲಿವುಡ್ನ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಅವರಿಗೆ ಬೆದರಿಕೆ ಹಾಕಿದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲರಿಗೂ ಮಾತನಾಡುವ ಸ್ವಾತಂತ್ರ್ಯ ಇದೆ. ಆದರೆ ಇದನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಸಲ್ಮಾನ್ ಖಾನ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ, ಕೊಲೆ ಬೆದರಿಕೆ (Threat) ಹಾಕಿದ ಆರೋಪದ ಮೇಲೆ 25 ವರ್ಷ ವಯಸ್ಸಿನ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಟ್ರೋಲ್ ಮಾಡುವವರಿಗೆ, ಬೆದರಿಕೆ ಹಾಕುವವರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.
ಸಲ್ಮಾನ್ ಖಾನ್ ಅವರನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವರು ಟಾರ್ಗೆಟ್ ಮಾಡಿರುವುದು ಗೊತ್ತೇ ಇದೆ. ಈಗಾಗಲೇ ಸಲ್ಮಾನ್ ಖಾನ್ ಹತ್ಯೆಗೆ ಈ ಖದೀಮರು ಅನೇಕ ಬಾರಿ ಪ್ರಯತ್ನಿಸಿದ್ದಾರೆ. ಕೆಲವೇ ತಿಂಗಳ ಹಿಂದೆ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಎದುರು ಗುಂಡಿನ ದಾಳಿ ಮಾಡಲಾಗಿತ್ತು. ಆ ಬಳಿಕ ಸಲ್ಮಾನ್ ಖಾನ್ ಅವರು ಭದ್ರತೆ ಹೆಚ್ಚಿಸಿಕೊಂಡಿದ್ದಾರೆ. ಈಗ ಯೂಟ್ಯೂಬ್ ಮೂಲಕ ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ವ್ಯಕ್ತಿ ಕೂಡ ತನ್ನ ವಿಡಿಯೋದಲ್ಲಿ ಬಿಷ್ಣೋಯ್ ಗ್ಯಾಂಗ್ ಬಗ್ಗೆ ಉಲ್ಲೇಖಿಸಿದ್ದಾನೆ ಎಂದು ವರದಿ ಆಗಿದೆ.
ಯೂಟ್ಯೂಬ್ ಮೂಲಕ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿದ ಯುವಕ ರಾಜಸ್ಥಾನ ಮೂಲದವನು. ಬನ್ವರ್ಲಾಲ್ ಲತುರ್ಲಾಲ್ ಗುಜ್ಜರ್ ಎಂದು ಆತನನ್ನು ಗುರುತಿಸಲಾಗಿದೆ. ಗ್ರಾಮೀಣ ಭಾಗದ ಯುವಕನಾದ ಆತ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಸ್ಟಾರ್ ನಟನಿಗೆ ಬೆದರಿಕೆ ಹಾಕಿದ್ದಾನೆ. ಮುಂಬೈ ಸೈಬರ್ ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜಸ್ಥಾನಕ್ಕೆ ತೆರಳಿ ಆತನನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಗುಂಡಿನ ದಾಳಿ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೇಳಿಕೆ ದಾಖಲಿಸಿಕೊಂಡ ಪೊಲೀಸರು
ಸಲ್ಲುಗೆ ಕೊಲೆ ಬೆದರಿಕೆ ಹಾಕಿರುವ ಬನ್ವರ್ಲಾಲ್ ಲತುರ್ಲಾಲ್ ಗುಜ್ಜರ್ ವಿರುದ್ಧ ಐಪಿಸಿ ಸೆಕ್ಷನ್ನ ಹಲವು ವಿಭಾಗಗಳ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಇದು ಗಂಭೀರ ಪ್ರಕರಣ ಆದ್ದರಿಂದ ಮುಂಬೈ ಪೊಲೀಸರ ತಂಡವು ರಾಜಸ್ಥಾನಕ್ಕೆ ಹೋಗಿ ಆರೋಪಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ಮುಂಬೈಗೆ ಕರೆತರುತ್ತಿದ್ದಾರೆ. ಕಿಡಿಗೇಡಿಗಳಿಂದ ಬೆದರಿಕೆ ಹೊಂದಿರುವ ಸಲ್ಮಾನ್ ಖಾನ್ ಅವರು ಅದರ ನಡುವೆಯೂ ‘ಸಿಕಂದರ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.